Advertisement

ಕುರಿ-ಮೇಕೆ ಮಾರಾಟಕ್ಕೆ ಆನ್‌ಲೈನ್‌ ವ್ಯವಸ್ಥೆ

06:32 PM Aug 30, 2022 | Team Udayavani |

ಬೆಳಗಾವಿ: ಕುರಿ ಮತ್ತು ಮೇಕೆ ಮಾರಾಟ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಡೆಸಲು ಹಾಗೂ ಕುರಿಗಾಹಿ ರೈತರಿಗೆ ನೇರವಾಗಿ ಯೋಗ್ಯ ದರ ದೊರಕಿಸಿಕೊಡುವಲ್ಲಿ ಡಿಜಿಟಲ್‌ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ಗವ್ಹಾರ ಹೇಳಿದರು.

Advertisement

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಎನ್‌.ಸಿ.ಡಿ.ಇ.ಎಕ್ಸ್‌ ಇ-ಮಾರ್ಕೆಟ್ಸ್‌ ಲಿ., ಸಹಯೋಗದಲ್ಲಿ  ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು, ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳು, ರೈತ ಉತ್ಪಾದಕರ ಸಂಸ್ಥೆ , ಕುರಿ-ಮೇಕೆ ಮಾರಾಟಗಾರರು ಹಾಗೂ ಖರೀದಿದಾರರಿಗೆ ಸೋಮವಾರ ನಗರದ ಕರ್ನಾಟಕ ಪಶು ವೈದ್ಯಕೀಯ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಕುರಿ ಮತ್ತು ಮೇಕೆಗಳ ಡಿಜಿಟಲ್‌ ಮಾರಾಟ ವ್ಯವಸ್ಥೆಯ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಕುರಿ ಹಾಗೂ ಮೇಕೆಗಳ ಪಾರದರ್ಶಕ ಮಾರಾಟ ಮತ್ತು ಖರೀದಿ ವ್ಯವಸ್ಥೆಗಾಗಿ ಡಿಜಿಟಲ್‌ ಮಾರಾಟ ಪ್ರಕ್ರಿಯೆ ಶುರುವಾಗಿದೆ. ರಾಜ್ಯದ ಎಲ್ಲ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರು ಇದರಲ್ಲಿ ನೇರವಾಗಿ ಭಾಗವಹಿಸಬಹುದು. ಮಾರುಟ್ಟೆಯ ನಿಗದಿತ ದರದ ಹೊರತಾಗಿ ಸಾಕಾಣಿಕೆದಾರರು ಬಿಡ್‌ ಮೂಲಕವೂ ತಮ್ಮ ವ್ಯಾಪಾರವನ್ನು ಕೈಗೊಳ್ಳಬಹುದು ಎಂದು ಅವರು ಹೇಳಿದರು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೂ ಕೇಂದ್ರ, ರಾಜ್ಯದಿಂದ ಕುರಿ ಸಾಕಾಣಿಕೆಗೆ ಅನುಕೂಲ ಒದಗಿಸಲಾಗಿದ್ದು ರಾಜ್ಯದ ಎಲ್ಲ ಕುರಿ ಹಾಗೂ ಮೇಕೆ ಸಾಕಾಣಿಕೆದಾರರು ಆನ್‌ಲೈನ್‌ ಮಾರುಕಟ್ಟೆಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದರು.

ಬೆಂಗಳೂರಿನ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕರಾದ ಡಾ| ಮಂಜುನಾಥ ಪಾಳೇಗಾರ ಮಾತನಾಡಿ, ಡಿಜಿಟಲ್‌ ಮಾರಾಟ ವ್ಯವಸ್ಥೆಯಿಂದ ಕುರಿ ಹಾಗೂ ಮೇಕೆ ಸಾಕಾಣಿಕೆದಾರರ ಆರ್ಥಿಕ ಸುಧಾರಣೆ ಸಾಧ್ಯವಿದೆ. ಈ ಆನ್‌ಲೈನ್‌ ಮಾರಾಟ ವ್ಯವಸ್ಥೆಯಲ್ಲಿ ಖರೀದಿರಾರರು, ಮಾರಾಟಗಾರರು ನೇರವಾಗಿ ಮುಖಾಮುಖೀಯಾಗಬಹುದು. ಜೊತೆಗೆ ಯಾವುದೇ ಮುಚ್ಚುಮರೆಯಿಲ್ಲದೇ ಪಾರದರ್ಶಕ ಮಾತು, ಚರ್ಚೆಯ ಮೂಲಕ ಕುರಿ
ಮತ್ತು ಮೇಕೆಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದರು.

Advertisement

ಕುರಿ ಸಾಕಾಣಿಕೆದಾರರು ಚುಚ್ಚು ಮದ್ದು, ಇನ್ನಿತರ ಔಷಧಿ ಬಳಸುವುದರಿಂದ ಕುರಿ ಹಾಗೂ ಮೇಕೆಗಳ ಮಾಂಸಕ್ಕೆ ವಿದೇಶಿ ಮಾರುಕಟ್ಟೆಯಲ್ಲಿ ದರ ಕುಸಿತಗೊಳ್ಳುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಕುರಿಗಳಿಗೆ ಔಷಧಿಗಳನ್ನು ಬಳಸುವುದನ್ನು ಕಡಿಮೆಗೊಳಿಸಬೇಕು ಎಂದರು.

ಆನ್‌ ಲೈನ್‌ ಮೂಲಕ ಯಾವುದೇ ಸಂದರ್ಭದಲ್ಲಿ ಮಾರಾಟ ವ್ಯವಸ್ಥೆಗೆ ತೆರೆದುಕೊಂಡು ಸಮಯ, ಅನಗತ್ಯ ಖರ್ಚು ವೆಚ್ಚ ಉಳಿಸಬಹುದು. ಈ ವರ್ಷ ದೇಶದಲ್ಲಿ ಶೇ. 25 ರಷ್ಟು ಕುರಿ ಸಾಕಾಣಿಕೆ ಪ್ರಮಾಣ ಹೆಚ್ಚಿದೆ. ಹೀಗಾಗಿ ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆ ಆರ್ಥಿಕ ಸುಧಾರಣೆಗೆ ಪೂರ್ಣಪ್ರಮಾಣದಲ್ಲಿ ನೆರವಾಗಲಿದೆ ಎಂದು ಡಾ| ಮಂಜುನಾಥ ಪಾಳೇಗಾರ ಹೇಳಿದರು.

ಬೆಂಗಳೂರಿನ ಎನ್‌.ಇ.ಎಂ.ಎಲ್‌.ಸಂಸ್ಥೆಯ ಉಪ ವ್ಯವಸ್ಥಾಪಕರಾದ ದೇವಾ ನಾಯ್ಕ ಹಾಗೂ ಅಧಿಕಾರಿ ಹರ್ಷ ಅವರು ಆನ್‌ ಲೈನ್‌ ಮೂಲಕ ಕುರಿ ಹಾಗೂ ಮೇಕೆಗಳನ್ನು ಯಾವ ರೀತಿ ಮಾರಾಟ ಮಾಡಬಹುದು ಎಂಬುದರ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಜೆ.ಪಂಪಾಪತಿ, ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ| ರಾಜೀವ ಕೂಲೇರ್‌, ರಾಜ್ಯ ವಲಯದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಜಂಟಿ ನಿರ್ದೇಶಕರಾದ ಡಾ| ಪರಮೇಶ್ವರ ನಾಯಕ ಉಪಸ್ಥಿತರಿದ್ದರು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿಯ ನಿಗಮದ ಉಪ ನಿರ್ದೇಶಕರಾದ ಡಾ| ಸುಧಾ ದೇವರೆಡ್ಡಿ ಸ್ವಾಗತಿಸಿದರು.= ನಿಗಮದ ಬಾಗಲಕೋಟೆ ಸಹಾಯಕ ನಿರ್ದೇಶಕ ಡಾ| ಮನೋಹರ ನಿರೂಪಿಸಿದರು. ವಿಜಯಪುರ ಸಹಾಯಕ ನಿರ್ದೇಶಕ ಡಾ| ಪದ್ಮ ದೊಡ್ಡಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next