Advertisement

ಚೀನಿ ಆ್ಯಪ್‌ಗಳಿಂದ ವಂಚನೆ: 20 ಮಂದಿ ಬಂಧನ

09:51 AM Oct 12, 2021 | Team Udayavani |

ಬೆಂಗಳೂರು: ಚೀನಾ ಮೂಲದ ಆ್ಯಪ್‌/ವೆಬ್‌ಸೈಟ್‌ ಗಳಾದ “ಸೂಪರ್‌ ಲೈಕ್‌’ ಮತ್ತು “ಕೀಪ್‌ ಶೇರ್‌’ ಆ್ಯಪ್‌ಗಳ ಮೂಲಕ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ವಂಚನೆ ಮಾಡುತ್ತಿದ್ದ ಅಂತಾರಾಜ್ಯದ ಎಂಟು ಮಂದಿ ಸೇರಿ 20 ಮಂದಿಯನ್ನು ಬಂಧಿಸಿರುವ ದಕ್ಷಿಣ ವಿಭಾಗ ಪೊಲೀಸರು, ಆರೋಪಿಗಳ ಖಾತೆಯಲ್ಲಿದ್ದ 16.40 ಕೋಟಿ ರೂ. ಹಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆರೋಪಿಗಳ ವಿರುದ್ಧ ದಕ್ಷಿಣ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊರೊನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು “ಆನ್‌ಲೈನ್‌ ಅರ್ನಿಂಗ್‌ ಆ್ಯಪ್‌’ ಸೃಷ್ಟಿಸಿದ ಆರೋಪಿಗಳು ವಂಚನೆ ಮಾಡುತ್ತಿದ್ದರು. ಸುಮಾರು 300 ಮಂದಿಗೆ ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಲ್ಲದೆ, ಸಾರ್ವಜನಿಕರಿಂದ ಕೋಟಿಗಟ್ಟಲೇ ಸಂಗ್ರಹಿಸಿದ ಹಣವನ್ನು ಕ್ರಿಪ್ಟೋ ಕರೆನ್ಸಿ ಎಂಬ ಡಿಜಿಟಲ್‌ ಕರೆನ್ಸಿಗೆ ಪರಿವರ್ತನೆ ಮಾಡುವುದರ ಮೂಲಕ ಚೀನಾ ಮೂಲದವರು ಭಾರತ ಮೂಲದ ಆರೋಪಿಗಳ ಮೂಲಕ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

 ವಂಚನೆ ಹೇಗೆ?: ಆನ್‌ಲೈನ್‌ ಮೂಲಕ ಕೆಲಸ ಕೊಡಿಸುವುದಾಗಿ ಹೂಡಿಕೆ ಲಿಂಕ್‌ ಅನ್ನು ಚೀನಾ ಐಟಿ ಡೆವಲಪರ್ಸ್‌ ಮೂಲಕ ಡೆವಲಪ್‌ ಮಾಡಿಸಿ ಲೋನ್‌ ಆ್ಯಪ್‌ ಲಿಂಕ್‌ ಎಂದು ಸೂಪರ್‌ ಲೈಕ್‌ ಮತ್ತು ಕೀಪ್‌ ಶೇರ್‌ ಆ್ಯಪ್‌/ವೆಬ್‌ಸೈಟ್‌ಗಳ ಹರಿಬಿಡುತ್ತಿದ್ದರು. ಆ ಲಿಂಕ್‌ ಅಥವಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳು ತ್ತಿದ್ದಂತೆ ರಿಚಾರ್ಜ್‌ ಮಾಡುವಂತೆ ಸೂಚಿಸುತ್ತಿದ್ದರು. ಬಳಿಕ ಅವುಗಳಲ್ಲಿ ಬರುವ ಸೆಲೆಬ್ರಿಟಿಗಳ ವಿಡಿಯೊಗಳನ್ನು ಶೇರ್‌, ಲೈಕ್‌, ನೋಡುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದು ಮಾಡಿದರೆ ಪ್ರತಿ ವಿಡಿಯೊಗಳಿಗೆ 20 ರೂ. ನೀಡುವುದಾಗಿ ನಂಬಿಸಿದ್ದರು.

ಅದರಂತೆ ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌, ಇನ್‌ಸ್ಟ್ರಾಗ್ರಾಂ, ವಾಟ್ಸ್‌ಆ್ಯಪ್‌ಗಳ ಮೂಲಕ ಈ ಆ್ಯಪ್‌/ವೆಬ್‌ಸೈಟ್‌ಗಳನ್ನು ಪರಿಚಯಿಸಿದ್ದರು. ಅದನ್ನು ಡೌನ್‌ಲೌಡ್‌ ಮಾಡಿಕೊಳ್ಳುವ ಗ್ರಾಹಕರನ್ನು ಫೋನ್‌ ಮೂಲಕ ಸಂಪರ್ಕಿಸಿ ಮನೆಯಿಂದಲೇ ಪಾರ್ಟ್‌ ಟೈಮ್‌ ಟಾಸ್ಕ್ ಆಗಿ ನೀಡುವ ಸೆಲೆಬ್ರಿಟಿಗಳ ವಿಡಿಯೊ, ಫೋಟೊಗಳನ್ನು “ಸೂಪರ್‌ ಲೈಕ್‌ ಅಪ್ಲಿಕೇಷನ್‌’ ಮೂಲಕ ಶೇರ್‌ ಮಾಡಿದಾಗ ಪ್ರತಿ ವಿಡಿಯೊ, ಫೋಟೊಗೆ 20 ರೂ. ಕೊಡುವುದಾಗಿ ನಂಬಿಸಿದ್ದರು. ಅದಕ್ಕೆ ಗ್ರಾಹಕರು ಮೊದಲೇ 6 ಸಾವಿರ ದಿಂದ ಒಂದು ಲಕ್ಷ ರೂ.ವರೆಗೆ ಆರೋಪಿಗಳು ಹೇಳಿದ ಖಾತೆಗೆ ಠೇವಣಿ ಇಟ್ಟು ಟಾರೀಫ್‌ ಪಡೆಯಬೇಕು ಎಂದು ತಿಳಿಸಿದ್ದರು.

Advertisement

ಇದನ್ನೂ ಓದಿ;- ಗಾನ ಗಂಧರ್ವ, ತೆಂಕು ತಿಟ್ಟಿನ ಅಗ್ರ ಪಂಕ್ತಿಯ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ

 ಸೂಪರ್‌ಲೈಕ್‌: ಸೂಪರ್‌ ಲೈಕ್‌ ಆ್ಯಪ್‌/ವೆಬ್‌ಸೈಟ್‌ ಮೂಲಕ ಸುಮಾರು 210ಕ್ಕೂ ಅಧಿಕ ಮಂದಿಗೆ ವಂಚಿಸಿದ ಮಹಾರಾಷ್ಟ್ರದ 2, ತೆಲಂಗಾಣದ 3, ತಮಿಳುನಾಡಿನ 1, ಹಿಮಾಚಲ ಪ್ರದೇಶದ 1, ಬೆಂಗಳೂರಿನ 7 ಮಂದಿ ಸೇರಿ ಒಟ್ಟು 14 ಮಂದಿ ಆರೋಪಿಗಳನ್ನು ಬನಶಂಕರಿ ಠಾಣೆ ಇನ್‌ಸ್ಪೆಕ್ಟರ್‌ ಎಚ್‌.ಪಿ.ಪುಟ್ಟಸ್ವಾಮಿ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ಇತ್ತೀಚೆಗೆ ಸೈಯದ್‌ ಮದನಿ ಎಂಬವರಿಂದ 50 ಸಾವಿರ ಮತ್ತು ಅವರ ಪರಿಚಿತ 44 ಮಂದಿ ಯಿಂದ ಒಟ್ಟು 19 ಲಕ್ಷ ರೂ.ಗೂ ಅಧಿಕ ವಂಚನೆ ಮಾಡಿದ್ದರು ಎಂದು ಪೊಲೀಸರು ಹೇಳಿದರು. ಸೈಯದ್‌ ಅವರ ದೂರಿನನ್ವಯ ಕಾರ್ಯಾಚರಣೆ ನಡೆಸಿ ಹಣ ಹೂಡಿಕೆ ಮಾಡಿರುವ 210 ಮಂದಿ ವಿಚಾ ರಣೆ ನಡೆಸಿ ಬಳಿಕ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ಖಾತೆಯಲ್ಲಿದ್ದ 5.40 ಕೋಟಿ ರೂ. ಜಪ್ತಿ ಮಾಡಿದ್ದು, 14 ಲಕ್ಷ ರೂ. ನಗದು, ಎರಡು ಕಾರುಗಳು, ಮೊಬೈಲ್‌ಗ‌ಳು ವಶಕ್ಕೆ ಪಡೆಯಲಾಗಿದೆ. ಈ ಆ್ಯಪ್‌/ವೆಬ್‌ಸೈಟ್‌ಗಳ ಮೂಲಕ ವಂಚನೆಗೊಳಗಾದ ಸಾರ್ವಜನಿಕರು ಕೂಡಲೇ ಸೂಕ್ತ ದಾಖಲೆಗಳೊಂದಿಗೆ ಕೋಣನಕುಂಟೆ ಮತ್ತು ಬನಶಂಕರಿ ಹಾಗೂ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಬಹುದು. ಇನ್ನು ಇಂತಹ ಸಂದೇಶಗಳು, ಲಿಂಕ್‌ಗಳು, ವಾಟ್ಸ್‌ಆ್ಯಪ್‌ ಸಂದೇಶಗಳು ಬಂದಾಗ ಸಾರ್ವಜನಿಕರು ಪ್ರತಿ ಕ್ರಿಯೆ ನೀಡಬಾರದು. ಜತೆಗೆ ಹಣ ಕೇಳಿದಾಗ ಹೆಚ್ಚಿನ ಹಣ ಬರುವ ಆಸೆಯಿಂದ ಹೂಡಿಕೆ ಮಾಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕೀಪ್‌ಶೇರ್‌ ಆ್ಯಪ್‌ “ಕೀಪ್‌ ಶೇರರ್‌’ ಆ್ಯಪ್‌/ವೆಬ್‌ಸೈಟ್‌ ಮೂಲಕ ಆನ್‌ ಲೈನ್‌ ಪಾರ್ಟ್‌ಟೈಮ್‌ ಕೆಲಸ ಕೊಡುವುದಾಗಿ ನಂಬಿಸಿ ನೂರಾರು ಜನರಿಗೆ ಕೋಟ್ಯಂತರ ರೂ. ವಂಚಿಸಿದ್ದಾರೆ. ನಗರದ ತಿಪ್ಪೇಸ್ವಾಮಿ ಎಂಬವರು ದಕ್ಷಿಣ ವಿಭಾಗ ಸೆನ್‌ ಠಾಣೆಗೆ ನೀಡಿದ ದೂರಿನ್ವಯ ಕೋಣನಕುಂಟೆ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ನಂಜೇಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹಿಮಾಚಲ ಪ್ರದೇಶದ ಒಬ್ಬ, ನಗರದ ಆರು ಮಂದಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದೆ. ಅವರಿಂದ 7 ಮೊಬೈಲ್‌, 2 ಲ್ಯಾಪ್‌ಟಾಪ್‌, ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ತೆರೆದಿದ್ದ ಬ್ಯಾಂಕ್‌ ಖಾತೆ , ಯುಪಿಐ ಐಡಿಗಳು, ನಾನಾ ಪೇಮೆಂಟ್‌ ಗೇಟ್‌ವೇಗಳು ಪರಿಶೀಲಿಸಿದಾಗ 25 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ವಂಚನೆಗೊಳಗಾದ 75 ಮಂದಿ ವಿಚಾರಣೆ ನಡೆಸಿ, ಫಲಾನುಭವಿಗಳ 200ಕ್ಕೂ ಹೆಚ್ಚು ಖಾತೆಗಳನ್ನು ಪರಿಶೀಲಿಸಿ, ಚಾಲ್ತಿಯಲ್ಲಿದ್ದ 110 ಖಾತೆಗಳಲ್ಲಿನ 11.03 ಕೋಟಿ ರೂ.ಜಪ್ತಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next