ಚಿಕ್ಕಬಳ್ಳಾಪುರ: ಜಾಗತೀಕರಣದ ಪರಿಣಾಮ ಈಗ ಎಲ್ಲವನ್ನೂ ಬೆರಳ ತುದಿಯಲ್ಲಿ ನೋಡುವಂತಾಗಿದೆ. ಆದರೆ, ಇದುವರೆಗೂ ಗ್ರಾಪಂಗಳಲ್ಲಿ ಸಂಗ್ರಹಿಸುವ ತೆರಿಗೆಗೆ ವಿತರಿಸಲಾಗುತ್ತಿದ್ದ ಮ್ಯಾನುವಲ್ ರಸೀದಿಗೆ ಬ್ರೇಕ್ ಬೀಳಲಿದ್ದು ಆನ್‌ಲೈನ್ ರಸೀದಿ ವಿತರಣೆಗೆ ಜಿಲ್ಲೆಯ ಗ್ರಾಪಂಗಳು ಸಜ್ಜಾಗಿವೆ.
ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಗ್ರಾಪಂಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಸಂಗ್ರಹಿಸುವ ವಿವಿಧ ತೆರಿಗೆಗಳಿಗೆ ಹೈಟೆಕ್ ಸ್ಪರ್ಶ ನೀಡಿದ್ದು ಇನ್ನು ಮುಂದೆ ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಆನ್‌ಲೈನ್ ರಸೀದಿ ಕೈಗೆ ಸಿಗಲಿದೆ.
ಸ್ಥಳೀಯವಾಗಿ ಜನರಿಗೆ ಕುಡಿವ ನೀರು, ವಿದ್ಯುತ್, ಬೀದಿ ದೀಪ, ಸ್ವಚ್ಛತೆ, ಆರೋಗ್ಯ, ಪರಿಸರ ಸಂರಕ್ಷಣೆ, ವಸತಿ, ನಿವೇಶನ ಹೀಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಲ್ಲಿ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಪಂಗಳು, ವಾರ್ಷಿಕ ತಮ್ಮ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ, ತೆರಿಗೆಯನ್ನು ವಿವಿಧ ರೂಪಗಳಲ್ಲಿ ಸಂಗ್ರಹಿಸುತ್ತದೆ. ಆದರೆ, ಇಲ್ಲಿವರೆಗೂ ಎಷ್ಟೇ ಆಧುನಿಕ ತಂತ್ರಜ್ಞಾನ ಬೆಳೆದರೂ ಗ್ರಾಪಂಗಳು ತಾನು ಸಾರ್ವಜನಿಕರಿಂದ ಸಂಗ್ರಹಿಸುವ ತೆರಿಗೆಗೆ ಮ್ಯಾನುವಲ್ ರಸೀದಿಯನ್ನೇ ವಿತರಿಸುತ್ತಿದ್ದವು. ಆದರೆ ಎಲ್ಲೋ ಒಂದು ಕಡೆ ತೆರಿಗೆ ಹಣ ಸೋರಿಕೆಗೆ ಕಾರಣವಾಗಿ ಗ್ರಾಪಂಗಳಿಗೆ ಹರಿದು ಬರುವ ತೆರಿಗೆ ಹಣ ಮಧ್ಯದಲ್ಲಿಯೆ ಹರಿದು ಹೋಗುತ್ತಿತ್ತು. ಇದರಿಂದ ಗ್ರಾಪಂಗಳ ಆರ್ಥಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಸ್ವಶಕ್ತವಾಗಿ ಸರ್ಕಾರದ ಮೇಲೆ ಹೆಚ್ಚು ಅವಲಂಬನೆಗೆ ಕಾದು ಕುಳಿತಿದ್ದವು. ಆದರೆ, ಈಗ ತೆರಿಗೆ ವಸೂಲಿಗೆ ರಾಜ್ಯ ಗ್ರಾಮೀಣಾಭಿ ವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹೈಟೆಕ್ ಸ್ಪರ್ಶ ನೀಡಿದ್ದು ತೆರಿಗೆ ಸಂಗ್ರಹಕ್ಕೆ ನೀಡುತ್ತಿದ್ದ ಮ್ಯಾನುವಲ್ ರಸೀದಿಗೆ ಬ್ರೇಕ್ ಹಾಕಿ ತೆರಿಗೆ ಸಂಗ್ರಹಿಸುವ ಸ್ಥಳದಲ್ಲಿಯೇ ಆನ್‌ಲೈನ್ ರಸೀದಿ ನೀಡಲು ಮುಂದಾಗಿವೆ.
ತೆರಿಗೆ ಸೋರಿಕೆ ತಡೆ ಉದ್ದೇಶ: ಗ್ರಾಪಂಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಸ್ವತ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ. ಹೀಗಾಗಿ ಗ್ರಾಪಂಗಳಿಗೆ ಸಾಕಷ್ಟು ವರಮಾನ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಜತೆಗೆ ತೆರಿಗೆ ಲೆಕ್ಕಾಚಾರವೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಈ ವರ್ಷ ದಿಂದ ರಾಜ್ಯದ ಎಲ್ಲಾ ಗ್ರಾಪಂಗಳಿಗೆ ಅತ್ಯಾಧುನಿಕ ಮೆಷಿನ್‌ಗಳನ್ನು ನೀಡಿ ತೆರಿಗೆ ಪಾವತಿಯಾದ ಕೂಡಲೇ ರಸೀದಿ ನೀಡಿ ತೆರಿಗೆ ಲೆಕ್ಕಾಚಾರವನ್ನು ಸಮರ್ಪಕವಾಗಿ ನಿರ್ವಹಿಸಲು ಮುಂದಾಗಿದೆ.
ಜಿಲ್ಲೆಯಲ್ಲಿವೆ ಬರೋಬ್ಬರಿ 157 ಗ್ರಾಪಂ: ಜಿಲ್ಲೆಯಲ್ಲಿ ಬರೋಬ್ಬರಿ 157 ಗ್ರಾಪಂ ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಗ್ರಾಪಂಗಳು ಆರ್ಥಿಕವಾಗಿ ಸದೃಢವಾಗಿದ್ದು ಮಾಸಿಕ ಲಕ್ಷಾಂತರ ರೂ. ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸುತ್ತೇವೆ. ಜಿಲ್ಲೆಯ ಪೈಕಿ ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ತಾಲೂಕಿನಲ್ಲಿ ಮಾತ್ರ ಬೆರಳಣಿಕೆ ಗ್ರಾಪಂಗಳಿದ್ದು ಉಳಿದಂತೆ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಹೆಚ್ಚಿನ ಗ್ರಾಪಂಗಳು ಕಾರ್ಯನಿರ್ವಹಿಸುತ್ತಿವೆ.
ಯಂತ್ರ ಬಳಕೆ ಬಗ್ಗೆ ಗ್ರಾಪಂ ಸಿಬ್ಬಂದಿಗೆ ತರಬೇತಿ: ಈಗಾಗಲೇ ಜಿಲ್ಲಾದ್ಯಂತ ಎಲ್ಲಾ ಗ್ರಾಪಂಗಳಿಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅತ್ಯಾಧುನಿಕ ಮಿಷನ್‌ಗಳನ್ನು ವಿತರಿಸಲಾಗಿದ್ದು, ಅದರ ಬಳಕೆ ಬಗ್ಗೆಯೂ ಗ್ರಾಪಂಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿ ಗಾರರಿಗೆ ತಾಲೂಕುವಾರು ಜಿಪಂ ಮೂಲಕ ಸೂಕ್ತ ತರಬೇತಿ ಕಾರ್ಯ ಭರದಿಂದ ಸಾಗು ತ್ತಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಪಂ ಗಳಿಗೂ ತೆರಿಗೆ ಸಂಗ್ರಹಿಸುವ ಮೆಷಿನ್‌ಗಳನ್ನು ಸರಬರಾಜು ಮಾಡಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಬಿ.ಶಿವಕುಮಾರ್ “ಉದಯವಾಣಿ’ಗೆ ತಿಳಿಸಿದರು..
ವರ್ಷಕ್ಕೆ 16ಕೋಟಿಗೂ ಅಧಿಕ ತೆರಿಗೆ ಸಂಗ್ರಹ: ಜಿಪಂನ ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿರುವ ಒಟ್ಟು 157 ಗ್ರಾಪಂಗಳಲ್ಲಿ ಕುಡಿವ ನೀರು, ಕಟ್ಟಡ, ಆಸ್ತಿ, ವಿದ್ಯುತ್, ಸಂತೆ, ಮಾರುಕಟ್ಟೆ, ಅಂಗಡಿ ಬಾಡಿಗೆಗೆ ಬರೋಬ್ಬರಿ 16 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣ ತೆರಿಗೆ ಪಾರದರ್ಶಕವಾಗಿ ಆಗಬೇಕು ಎಂಬ ದೃಷ್ಟಿಯಿಂದ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜಿಲ್ಲೆಯ ಎಲ್ಲಾ ಗ್ರಾಪಂಗೆ ತೆರಿಗೆ ಸಂಗ್ರಹಿಸಲು ಅತ್ಯಾಧುನಿಕ ಆ್ಯಪ್ ಇರುವ ಮಿಷನ್ ವಿತರಿಸಿದೆ.
ಗ್ರಾಪಂಗಳಲ್ಲಿ ಪಾರದರ್ಶಕವಾಗಿ ತೆರಿಗೆ ಸಂಗ್ರಹಿಸಲು ಸರ್ಕಾರ ಪ್ರತಿ ಗ್ರಾಪಂಗೆ ಮೆಷಿನ್ ವಿತರಿಸುತ್ತಿದೆ. ಬೆಸ್ಕಾಂ ಮಾದರಿಯಲ್ಲಿ ವಿದ್ಯುತ್ ಬಿಲ್ ಪಾವತಿಗೆ ಬಳಸುವ ಯಂತ್ರದ ಮಾದರಿಯಲ್ಲಿಯೇ ಇದ್ದು ಸ್ಥಳದಲ್ಲಿಯೇ ತೆರಿಗೆದಾರರಿಗೆ ರಸೀದಿ ಸಿಗಲಿದೆ. ಇದು ಹೆಚ್ಚು ಅನುಕೂಲವಾಗಲಿದೆ.
– ಬಿ.ಶಿವಕುಮಾರ್, ಉಪ ಕಾರ್ಯದರ್ಶಿ ಜಿಪಂ ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ