ಲಾಲ್‌ಬಾಗ್: ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಕ್ರಮವನ್ನು ಆನ್ ಲೈನ್ ಮಾಡಿದ್ದರೂ ಆನ್ ಲೈನ್ ಪೋರ್ಟಲ್‌ನಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ!
ಹೊಸ ವೆಬ್‌ಸೈಟ್ ಡಿಸೈನ್ ಮಾಡುವಾಗ ಅದರ ಸಾಧಕ ಬಾಧಕಗಳ ಬಗ್ಗೆ ಸ್ಥೂಲ ಅಧ್ಯಯನ ನಡೆಸಿ, ಪರಿಶೀಲಿಸಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಸ್ಪಷ್ಟವಾದ ಬಳಿಕ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಬೇಕು. ಆದರೆ ಪಾಲಿಕೆಯಲ್ಲಿ ಸದ್ಯ ಅನುಷ್ಠಾನಿಸಿರುವ ಆನ್‌ಲೈನ್ ವ್ಯವಸ್ಥೆ ಮಾತ್ರ ಹಲವರಿಗೆ ಕಿರಿಕಿರಿ ಉಂಟು ಮಾಡಿದೆ.
ಸಾರ್ವಜನಿಕರು ಆನ್‌ಲೈನ್ ಮುಖೇನ ಹಣ ಪಾವತಿ ಮಾಡುವ ವೇಳೆ ಹೆಚ್ಚಿನ ಬ್ಯಾಂಕ್‌ಗಳಿಗೆ ಸಪೋರ್ಟ್ ಮಾಡದಿರುವ ಸಮಸ್ಯೆ ಇದೆ. ಜತೆಗೆ ಕಳೆದ ವರ್ಷ ಆಸ್ತಿ ತೆರಿಗೆ ಪಾವತಿ ಮಾಡಿದ ಅನೇಕರ ಮಾಹಿತಿ ಆನ್‌ಲೈನ್ ವ್ಯವಸ್ಥೆಯಲ್ಲಿ ಅಪ್ ಡೇಟ್ ಆಗದಿರುವುದರಿಂದ ‘ತೆರಿಗೆ ಬಾಕಿ’ ಎಂಬ ಹೊರೆಯನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಇದಕ್ಕಾಗಿ ದಾಖಲೆಗಾಗಿ ಅಲೆದಾಡುವ ಪ್ರಸಂಗ ಎದುರಾಗಿದೆ!
ಸಾರ್ವಜನಿಕರೊಬ್ಬರು ‘ಸುದಿನ’ ಜತೆಗೆ ಮಾತನಾಡಿ, ತಾನು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದೆ. ಆದರೆ ಆನ್‌ಲೈನ್ ಪೋರ್ಟಲ್ ಮಾಡಿದ ಅನಂತರ ಕೆಲವು ಸಮಸ್ಯೆ ಎದುರಾಯಿತು. ಪೋರ್ಟಲ್ ಲಾಗಿನ್ ಮಾಡಿದ ಅನಂತರ 3 ವರ್ಷಗಳ ತೆರಿಗೆ ಬಾಕಿ ಇದೆ ಎಂದು ತೋರಿಸುತ್ತಿದೆ. ತೆರಿಗೆ ವಿವರಗಳನ್ನು ಭರ್ತಿ ಮಾಡಿ ತೆರಿಗೆ ರಶೀದಿ, ಚಲನ್‌ಗಳನ್ನು ಅಪ್‌ಲೋಡ್ ಮಾಡಿದ ಬಳಿಕವೂ ತೆರಿಗೆ ಬಾಕಿ ಇದೆ ಎಂದು ತೋರಿಸುತ್ತಿತ್ತು. ಕೊನೆಗೆ ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ ಅನಂತರ ಸಮಸ್ಯೆ ಪರಿಹಾರವಾಯಿತು. ಇಂತಹ ಪರಿಸ್ಥಿತಿ ನಗರದ ಹಲವು ಮಂದಿಗೆ ಈಗಲೂ ಇದೆ’ ಎನ್ನುತ್ತಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 2008ರ ಎ. 1ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿಂದೆ ತೆರಿಗೆದಾರರು ನಿಗದಿತ ನಮೂನೆಗಳಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಸೇವಾ ಕೇಂದ್ರ ಹಾಗೂ ಬ್ಯಾಂಕ್‌ಗಳಲ್ಲಿ ಪಾವತಿ ಮಾಡಬೇಕಿತ್ತು. ಇದೀಗ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದ್ದು, ಆನ್‌ಲೈನ್ ಮುಖೇನ ಬಳಸಿಕೊಳ್ಳಲು ವೆಬ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಆದರೆ ಈ ವ್ಯವಸ್ಥೆಯಲ್ಲಿ ಇದೀಗ ಸಮಸ್ಯೆಯೇ ಕಾಣಿಸಿಕೊಂಡಿದೆ ಎಂಬುದು ನಾಗರಿಕರೊಬ್ಬರ ಅಭಿಪ್ರಾಯ.
ಸರಿಪಡಿಸಲು ಕ್ರಮ
ಆನ್‌ಲೈನ್ ಪೋರ್ಟಲ್ ಬಂದ ಬಳಿಕ ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿ ಸುಲಭ ಮಾಡಲಾಗಿದೆ. ಆದರೆ, ಹಿಂದಿನ ತೆರಿಗೆ ಪಾವತಿ ಮಾಡಿದ ದಾಖಲೆ ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ. ಹಲವು ಮಂದಿ ಈ ಕಾರಣದಿಂದ ಪಾಲಿಕೆ ಕಚೇರಿಗೆ ಬರುತ್ತಿದ್ದಾರೆ. ಹೀಗಾಗಿ ಅಲ್ಲಿಗೆ ಹೆಚ್ಚುವರಿ ಸಿಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೂ ಸದ್ಯ ಎದುರಾಗಿರುವ ನ್ಯೂನತೆಗಳನ್ನು ಸರಿಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ, ಮೇಯರ್, ಮನಪಾ