ಮುಂಬೈ/ನವದೆಹಲಿ: ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ವ್ಯವಸ್ಥೆಗಳಾದ ಆರ್‌ಟಿಜಿಎಸ್ ಹಾಗೂ ಎನ್‌ಇಎಫ್ಟಿಯಲ್ಲಿ ವಿಧಿಸಲಾಗುತ್ತಿದ್ದ ವ್ಯಾವಹಾರಿಕ ಶುಲ್ಕವನ್ನು ಆರ್‌ಬಿಐ ರದ್ದುಗೊಳಿಸಿದೆ. ಜತೆಗೆ, ಎಟಿಎಂ ಬಳಕೆಯ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಪರಿಷ್ಕರಿಸಲು ಹೊಸ ಸಮಿತಿಯನ್ನು (ರಿವ್ಯೂ ಸಮಿತಿ) ನೇಮಿಸಿದೆ.
ಮುಂಬೈನಲ್ಲಿ ಗುರುವಾರ ನಡೆದ ತ್ತೈಮಾಸಿಕ ಸಾಲ ನೀತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎನ್‌ಇಟಿಎಫ್ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್) ಹಾಗೂ ಆರ್‌ಟಿಜಿಎಸ್ (ರಿಯಲ್ ಟೈಂ ಗ್ರಾಸ್ ಸೆಟಲ್ಮೆಂಟ್ ಸಿಸ್ಟಂ) ಮೂಲಕ ಆರ್‌ಬಿಐ, ಬ್ಯಾಂಕುಗಳ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ಬ್ಯಾಂಕುಗಳು ಗ್ರಾಹಕರ ಮೇಲೆ ವಿಧಿಸುತ್ತಿದ್ದವು. ಆದರೆ, ಬ್ಯಾಂಕುಗಳ ಮೇಲಿನ ಶುಲ್ಕವನ್ನು ರದ್ದುಗೊಳಿಸಿರುವುದರಿಂದ ಅದರ ಲಾಭವನ್ನು ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸಬೇಕು. ಇನ್ನೊಂದು ವಾರದೊಳಗೆ ಈ ಬಗ್ಗೆ ಪ್ರಕಟಣೆ ಹೊರಡಿಸಬೇಕೆಂದು ಆರ್‌ಬಿಐ, ಎಲ್ಲಾ ಬ್ಯಾಂಕುಗಳಿಗೆ ಆದೇಶಿಸಿದೆ.
ಷೇರು ಮಾರುಕಟ್ಟೆ ಕುಸಿತ: ಆರ್‌ಬಿಐ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಮುಂಬೈ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ 553.82 ಅಂಶಗಳಷ್ಟು ಕುಸಿಯಿತು. ಇದು 2019ನೇ ಸಾಲಿನಲ್ಲಿ ಅತ್ಯಂತ ದೊಡ್ಡ ಕುಸಿತವಾಗಿದೆ. ಗುರುವಾರದ ಅಂತ್ಯಕ್ಕೆ ಮುಂಬೈ ಷೇರು ಪೇಟೆ ಸೂಚ್ಯಂಕ 39,529.72ರಲ್ಲಿ ಮುಕ್ತಾಯವಾಯಿತು. ಇಂಡಸ್ ಇಂಡ್ ಬ್ಯಾಕ್, ಯೆಸ್ ಬ್ಯಾಂಕ್, ಎಸ್‌ಬಿಐ, ಎಲ್ ಆ್ಯಂಡ್ ಟಿ ಸೇರಿದಂತೆ ಪ್ರಮುಖ ಕಂಪನಿಗಳ ಷೇರುಗಳು ಕುಸಿದಿವೆ. ನಿಫ್ಟಿ ಸೂಚ್ಯಂಕ 177.90ರಷ್ಟು ಕುಸಿದು ದಿನಾಂತ್ಯಕ್ಕೆ 11,843.75ರಲ್ಲಿ ಮುಕ್ತಾಯವಾಯಿತು. ಏಷ್ಯಾದ ಇತರ ರಾಷ್ಟ್ರಗಳ ಷೇರು ಮಾರುಕಟ್ಟೆಯಲ್ಲಿ ಅಮೆರಿಕ ಚೀನಾ ತೆರಿಗೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತ್ತು.