ಉಡುಪಿ: ಆನ್‌ಲೈನ್ ಆಮಿಷಕ್ಕೊಳಗಾದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ.
ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಹೆರ್ಗದ ರೋಶನ್ ಕೋಟ್ಯಾನ್ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಕೊರಿಯರ್ ಸಂಸ್ಥೆಯಿಂದ ಎಂದು ತಿಳಿಸಿ ತನ್ನ ಮೊಬೈಲ್ ಸಂಖ್ಯೆಯಲ್ಲಿ ಅಕ್ರಮ ಮಾದಕ ವಸ್ತು, ಬಟ್ಟೆ, ಲ್ಯಾಪ್‌ಟಾಪ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿರುವ ಪಾರ್ಸೆಲ್ ಬಗ್ಗೆ ತಿಳಿಸಿ ಈ ಬಗ್ಗೆ ಕೇಸ್ ದಾಖಲಾಗಿದೆ. ಈ ವಸ್ತು ನಿಮ್ಮದು ಅಲ್ಲ ಎಂದಾದರೆ ಕೂಡಲೇ ನಾರ್ಕೋಟಿಕ್ಸ್ ಬ್ಯೂರೋ ಮುಂಬಯಿಗೆ ದೂರು ನೀಡಲು ತಿಳಿಸುವಂತೆ ಸೂಚಿಸಿದ್ದಾರೆ.
ಅನಂತರ ರೋಶನ್ ಕೋಟ್ಯಾನ್ ಅವರೊಂದಿಗೆ ಮಾತನಾಡಿದ್ದು, ತಾವು ಮುಂಬಯಿ ಪೊಲೀಸ್ ಅಧಿಕಾರಿಗಳು ಎಂದು ನಂಬಿಸಿ, ನನ್ನಲ್ಲಿ ವೆರಿಫಿಕೇಶನ್ ಮಾಡಲು ಆಧಾರ್ ಕಾರ್ಡ್, ಮೊಬೈಲ್ ನಂಬ್ರ, ಫೋಟೋ ಪಡೆದು ಇದೇ ಆಧಾರ್ ನಂಬ್ರನಲ್ಲಿ ಅಕ್ರಮ ಹಣ ವರ್ಗಾವಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿ ಹಂತ ಹಂತವಾಗಿ 49,554 ರೂ.ಗಳನ್ನು ಕಳುಹಿಸುವಂತೆ ಸೂಚಿಸಿ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆಗೆ ಡೆಪಾಸಿಟ್ ಮಾಡಿಸಿಕೊಂಡಿದ್ದಾರೆ.
ಬ್ಯಾಂಕ್‌ನವರೆಂದು ಹೇಳಿ ವಂಚನೆ
ಮಂಗಳೂರು: ಬ್ಯಾಂಕ್‌ನವರೆಂದು ಹೇಳಿ ಖಾತೆ ವಿವರ, ಒಟಿಪಿ ಪಡೆದು ವಂಚಿಸಿರುವ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿವೆ.
ಪ್ರಕರಣ ಒಂದರಲ್ಲಿ ಜೂ. 11ರಂದು ದೂರುದಾರರಿಗೆ 9038144987 ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ ಕೆವೈಸಿ ಅಪ್‌ಡೇಟ್ ಮಾಡಬೇಕೆಂಬುದಾಗಿಯೂ ಸಂದೇಶ ಕಳುಹಿಸಿದ್ದ. ದೂರುದಾರರು ಆ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ತಾನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವಂತೆ ಹೇಳಿದ. ಅದರಂತೆ ದೂರುದಾರರು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದರು. ಬಳಿಕ ಅವರ ಮೊಬೈಲ್‌ಗೆ ಬಂದ ಒಟಿಪಿ ಕೂಡ ನೀಡಿದರು. ಕೂಡಲೇ ಅವರ ಖಾತೆಯಿಂದ 99, 999 ರೂ. ಅನಧಿಕೃತವಾಗಿ ವರ್ಗಾವಣೆಗೊಂಡಿತ್ತು.
ಪ್ರಕರಣ ಎರಡರಲ್ಲಿ ಜೂ.12ರಂದು ಇನ್ನೋರ್ವರು ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿ ಕೆವೈಸಿ ಅಪ್‌ಡೇಟ್ ನೆಪ ಹೇಳಿ ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಸಂಖ್ಯೆ, ಒಟಿಪಿ ಪಡೆದು 1.75 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.