ಕಲಬುರಗಿ: ಪ್ರಸ್ತುತ ದಿನಗಳಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿಕೊಂಡು ಪ್ರತಿಯೊಬ್ಬರು ಬ್ಯಾಂಕಿನ ಸೇವೆ ಉಪಯೋಗಿಸದೆಯೇ ತಮ್ಮ ಹಣವನ್ನು ಇನ್ನೊಬ್ಬರಿಗೆ ಸರಳವಾಗಿ ವರ್ಗಾಯಿಸಿಕೊಳ್ಳುವುದು ಹಾಗೂ ಜಮೆ ಮಾಡಿಕೊಳ್ಳುವಂತಹ ಕಾರ್ಯಗಳನ್ನು ಸುಲಲಿತವಾಗಿ ಇಂಟರ್‌ನೆಟ್ ಮೂಲಕ ಮಾಡಬಹುದಾಗಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಶ್ರೇಣಿ ಕೈಗಾರಿಕೆ ಮುಖ್ಯ ಕಾರ್ಯದರ್ಶಿ ಡಾ| ಸಂಜೀವ ಲಹೇಕ್ ಹೇಳಿದರು.
ಇಲ್ಲಿನ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾ ವಿಭಾಗದಲ್ಲಿ ನಡೆಯುತ್ತಿರುವ ಎಐಸಿಟಿ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿ ಪ್ರಾಯೋಜಿಸಿದ್ದ ಐದು ದಿನಗಳ ಆನ್‌ಲೈನ್ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸದ್ಯ ಬ್ಲಾಕ್ ಚೈನ್ ಟೆಕ್ನಾಲಜಿಯನ್ನು ಬಹಳ ಜನರು ಸದುಪಯೋಗ ಪಡೆದುಕೊಳ್ಳುತ್ತಿದ್ದು, ಇಂದಿನ ಶೈಕ್ಷಣಿಕ ಅಭ್ಯಾಸ ಕ್ರಮದಲ್ಲಿ ಈ ತಂತ್ರಜ್ಞಾನ ಅಳವಡಿಕೊಂಡು ವಿದ್ಯಾರ್ಥಿಗಳಿಗೆಪ್ರಸ್ತುತ ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ಗುಣಮಟ್ಟ ಕೊಡಬೇಕಾಗಿದೆ. ಎಐಸಿಟಿ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿಯು ದೇಶಾದ್ಯಂತ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರಿಗೆ ಉನ್ನತ ಮಟ್ಟದ ಹಾಗೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನದ ತಿಳಿವಳಿಕೆ ನೀಡುವ ಗುರಿಯನ್ನಿಟ್ಟುಕೊಂಡು ತನ್ನ ಕಾರ್ಯ ನಿರ್ವಹಿಸುತ್ತಿದೆ, ಇದರಡಿಯಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಅನುಮತಿ ದೊರೆತಿದೆ. ಅಲ್ಲದೇ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷರಿಗಾಗಿ ಬ್ಲಾಕ್ ಚೈನ್ ಟೆಕ್ನಾಲಜಿ ಬಗ್ಗೆ ಐದು ದಿನಗಳ ಉಪನ್ಯಾಸ ಮಾಲಿಕೆ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಸಿ. ಬಿಲಗುಂದಿ ಉಪನ್ಯಾಸ ಮಾಲಿಕೆ ಉದ್ಘಾಟಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸಂಸ್ಥೆ ಶ್ರಮಹಿಸುವುದಲ್ಲದೇ ಬೇಕಾಗುವ ಎಲ್ಲಾ ರೀತಿಯ ಅನೂಕೂಲತೆ ಕಲ್ಪಿಸಲಾಗುವುದು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಎಸ್. ಹೆಬ್ಟಾಳ ಮಾತನಾಡಿ, ಪಿಡಿಎ ಕಾಲೇಜಿನ ಇನ್ನು ಹಲವಾರು ವಿಭಾಗಗಳಿಗೆ ಇದೇ ರೀತಿಯ ಉಪನ್ಯಾಸ ಮಾಲಿಕೆಗೆ ಅನುಮತಿ ದೊರೆತಿದೆ ಎಂದು ಹೇಳಿದರು. ಅಲ್ಲದೇ ಅಟಲ್ ರ್‍ಯಾಂಕಿಂಗ್ ನಲ್ಲಿ ಕಾಲೇಜು ತನ್ನ ಸ್ಥಾನ ಗಿಟ್ಟಿಸಿಕೊಂಡಿದ್ದನ್ನು ಸ್ಮರಿಸಿಕೊಂಡರು.
ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಉಪನ್ಯಾನ ಮಾಲಿಕೆ ಸಂಯೋಜಕಿಯಾದ ಡಾ| ಭಾರತಿ ಹರಸೂರ ಮಾತನಾಡಿದರು.ಕಾರ್ಯಕ್ರಮದ ಸಂಚಾಲಕ ಅಶೋಕ ಆರ್. ಪಾಟೀಲ ಅವರು ಬ್ಲಾಕ್ ಚೈನ್ ಟೆಕ್ನಾಲಜಿ ಕುರಿತು ಮಾಹಿತಿ ನೀಡಿದರು. ಸಂಚಾಲಕ ಡಾ| ನಾಗೇಶ ಸಾಲಿಮಠ ವಂದಿಸಿದರು. ಪ್ರೊ| ರಶ್ಮೀ ತಳ್ಳಳ್ಳಿ , ಎಸ್. ಸುಮಾ ನಿರೂಪಿಸಿದರು.