Advertisement
ಆನ್‌ಲೈನ್ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಕಲಿಕೆ ಪದ್ಧತಿಯಲ್ಲಿ ಅತೀ ದೊಡ್ಡ ಬದಲಾವಣೆಯಾಗಿದೆ. ಕ್ಲಾಸ್‌ರೂಂ ಶಿಕ್ಷಣದ ಬದಲಾಗಿ ಮೊಬೈಲ್, ಲ್ಯಾಪ್‌ಟಾಪ್ ಮೂಲಕ ಶಿಕ್ಷಣ ಪಡೆಯುವ ಅನಿವಾರ್ಯ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾಲ್ಕೈದು ತಾಸು ನಿರಂತರ ಮೊಬೈಲ್, ಕಂಪ್ಯೂಟರ್ ವೀಕ್ಷಣೆಯಿಂದ ಕಣ್ಣು, ತಲೆನೋವಿಗಾಗಿ ಆಸ್ಪತ್ರೆಗಳಿಗೆ ಬರುತ್ತಿರುವ ಮಕ್ಕಳ ಸಂಖ್ಯೆ ಎರಡು ತಿಂಗಳುಗಳಿಂದ ಹೆಚ್ಚಾಗುತ್ತಿದೆ. ಮಕ್ಕಳ ಕಣ್ಣಿಗೆ ಆದಷ್ಟು ತೊಂದರೆಯಾಗದಂತೆ ತಡೆಯುವ ಸಲುವಾಗಿ ಶಿಕ್ಷಕರು ಅಥವಾ ಹೆತ್ತವರು ಏನು ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂಬ ಬಗ್ಗೆ ನೇತ್ರತಜ್ಞ ಡಾ| ವಿಕ್ರಮ್ ಜೈನ್ ವಿವರಿಸಿದ್ದಾರೆ.
ಮಕ್ಕಳಿನ್ನೂ ಎಳೆ ವಯಸ್ಸಿನವರಾದ್ದರಿಂದ ಆನ್‌ಲೈನ್ ಶಿಕ್ಷಣಕ್ಕಾಗಿ ದಿನವಿಡೀ ಕಂಪ್ಯೂಟರ್, ಮೊಬೈಲ್ ಮುಂದೆ ಕುಳಿತರೆ ಅವರಿಗೂ ಕಂಪ್ಯೂಟರ್ ವಿಶನ್ ಸಿಂಡ್ರೋಮ್ ಬಾಧಿಸುವ ಸಾಧ್ಯತೆ ಇರುತ್ತದೆ. ನಿರಂತರ ಮೊಬೈಲ್ ವೀಕ್ಷಣೆ, ಕಿವಿಗೆ ಇಯರ್‌ಫೋನ್ ಹಾಕುವುದರಿಂದ ಕಿವಿಯ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳು ಕಣ್ಣಿನೊಂದಿಗೆ ಕಿವಿ ನೋವಿನ ಬಗ್ಗೆಯೂ ಹೇಳುತ್ತಿದ್ದಾರೆ. ಶಿಕ್ಷಕರು ಬರೆದದ್ದನ್ನು ಫೋಟೋ ತೆಗೆದು ವಾಟ್ಸ್‌ಆ್ಯಪ್ ಮಾಡುವುದರಿಂದ ಮಕ್ಕಳಿಗೆ ಅಕ್ಷರಗಳು ಸ್ಪಷ್ಟವಾಗಿ ಕಾಣದೆ ಝೂಮ್ ಮಾಡಿ ಕಣ್ಣಿನ ಹತ್ತಿರ ಹಿಡಿದು ಓದಬೇಕಾಗುತ್ತದೆ. ಇದರಿಂದ ಹಲವರಿಗೆ ಕಣ್ಣಿಗೆ ಆಯಾಸವಾಗಿ ನೋವು ಕಾಣಿಸಿಕೊಳ್ಳುತ್ತಿದೆ. ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಕಣ್ಣಿಗೆ ಹಾನಿಯಾಗುವಂತೆ ಶಿಕ್ಷಣ ಕೊಡಿಸದಿರಿ. ದಿನಕ್ಕೆ 2 ತಾಸಿಗಿಂತ ಹೆಚ್ಚು ಕಾಲ ಆನ್‌ಲೈನ್ ಶಿಕ್ಷಣ ಬೇಡ. ಪ್ರತೀ ಅರ್ಧ, 1 ಗಂಟೆಗೊಮ್ಮೆ 10-15 ನಿಮಿಷ ಬ್ರೇಕ್ ನೀಡಿ. ಎಲ್‌ಕೆಜಿ, ಯುಕೆಜಿಗೆ ದಿನಕ್ಕೆ ಅರ್ಧ ತಾಸು, 1-5ನೇ ತರಗತಿ ವಿದ್ಯಾರ್ಥಿ ಗಳಿಗೆ ಒಂದು ತಾಸು, ಉಳಿದವರಿಗೆ ಎರಡು ತಾಸು ಮಾತ್ರ ಆನ್‌ಲೈನ್ ಶಿಕ್ಷಣ ನೀಡಿದರೆ ಉತ್ತಮ. ಅದಕ್ಕಿಂತ ಹೆಚ್ಚಿನ ಕಾಲ ಮೊಬೈಲ್, ಲ್ಯಾಪ್‌ಟಾಪ್ ಸ್ಕ್ರೀನ್ ನೋಡುವುದು ಮಕ್ಕಳ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಶಿಕ್ಷಕರು ಮಕ್ಕಳಿಗೆ ಕಳುಹಿಸುವುದಕ್ಕಾಗಿ ತೆಗೆಯುವ ಪುಟಗಳ ಫೋಟೋಗಳು ಸ್ಪಷ್ಟವಾಗಿರಲಿ. ಇದನ್ನು ಝೂಮ್ ಮಾಡಿ ನೋಡುವಾಗ ಮಕ್ಕಳ ಕಣ್ಣಿಗೆ ಯಾವುದೇ ತೊಂದರೆ ಆಗದಂತಿರಲಿ.
Related Articles
ಆನ್‌ಲೈನ್ ಶಿಕ್ಷಣ ಮಕ್ಕಳ ಕಣ್ಣಿಗೆ ಹೊರೆಯಾಗದಂತೆ ತಡೆಯುವಲ್ಲಿ ಹೆತ್ತವರ ಪಾತ್ರ ದೊಡ್ಡದು. ಶಿಕ್ಷಕರು ಕಳುಹಿಸಿದ ಶಿಕ್ಷಣ ಸಂಬಂಧಿ ಫೋಟೋಗಳನ್ನು ಪೋಷಕರೇ ಡೌನ್‌ಲೋಡ್ ಮಾಡಿ ಅದರಲ್ಲೇನಿದೆ ಎಂಬುದನ್ನು ಮಕ್ಕಳಿಗೆ ತಿಳಿಸಿದರೆ ಉತ್ತಮ. ಇದು ಮಕ್ಕಳೇ ಓದುವುದರಿಂದ ಕಣ್ಣಿಗೆ ಆಗುವ ಹಾನಿಯನ್ನು ತಪ್ಪಿಸುತ್ತದೆ. ಮಕ್ಕಳಿಗೆ ತಲೆನೋವು, ಕಣ್ಣು ನೋವಿನಂತಹ ಸಮಸ್ಯೆಗಳು ಬಂದಲ್ಲಿ ತಡಮಾಡದೆ ಅದನ್ನು ಶಿಕ್ಷಕರಲ್ಲಿ ತಿಳಿಸಿ, ಒಂದೆರಡು ದಿನ ಆನ್‌ಲೈನ್ ಪಾಠದಿಂದ ವಿನಾಯಿತಿ ಅವಕಾಶ ಕೇಳಬಹುದು. ಸಮಸ್ಯೆ ಹೆಚ್ಚಾದಲ್ಲಿ ವೈದ್ಯರ ಭೇಟಿ ಮರೆಯದಿರಿ. ಎಳೆಯ ಮಕ್ಕಳಿಗೆ ಕಣ್ಣಿಗಾಗುವ ನೋವು ತಿಳಿಯದೇ ಇರಬಹುದು. ಮಕ್ಕಳನ್ನು ಓದು, ಆನ್‌ಲೈನ್ ಶಿಕ್ಷಣ ಆಲಿಸು ಎಂದು ಗದರದೆ ಪ್ರತೀ ದಿನ ಆತ/ಆಕೆಗೆ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಕಣ್ಣಿನ ಆರೋಗ್ಯಕ್ಕಿಂತ ಆನ್‌ಲೈನ್ ಶಿಕ್ಷಣ ಮುಖ್ಯವಲ್ಲ.
Advertisement
ನಿರಂತರ ವೀಕ್ಷಣೆಯಿಂದ ಕಣ್ಣಿಗೆ ಹಾನಿ– ಆನ್‌ಲೈನ್ ಶಿಕ್ಷಣ ಎಳೆಯ ಮಕ್ಕಳ ಕಣ್ಣಿನ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತದೆ. ಹಲವು ಮಕ್ಕಳಲ್ಲಿ ಕಣ್ಣು, ತಲೆ, ಕಿವಿ ನೋವಿಗೆ ಕಾರಣವಾಗುತ್ತಿದೆ. ಆನ್‌ಲೈನ್ ಪಾಠ ಆರಂಭವಾಗುವುದಕ್ಕಿಂತ ಮೊದಲು ಕಣ್ಣಿನ ದೋಷ, ಕಣ್ಣು ನೋವಿನ ಸಮಸ್ಯೆಗಾಗಿ ಬರುವ ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಪ್ರಸ್ತುತ ಒಂದೆರಡು ತಿಂಗಳಿನಿಂದ ವಾರಕ್ಕೆ ಕನಿಷ್ಠ 10 ಮಕ್ಕಳು ಬರುತ್ತಿದ್ದಾರೆ. – ತಲೆನೋವು, ಕಣ್ಣು ಭಾರ ಆದಂತಾಗುವುದು, ದೃಷ್ಟಿದೋಷ ಮುಂತಾದ ಸಮಸ್ಯೆಗಳಿಗಾಗಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು. 12-18 ವರ್ಷದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಸ್ಯೆಯೊಂದಿಗೆ ಬರುತ್ತಿದ್ದರೆ, 6-11 ವರ್ಷದ ಮಕ್ಕಳು ವಾರಕ್ಕೆ ಕನಿಷ್ಠ 5-6 ಮಂದಿ ಬರುತ್ತಿದ್ದಾರೆ. ಆನ್‌ಲೈನ್ ಶಿಕ್ಷಣ ಈ ಹೊತ್ತಿನ ಅನಿವಾರ್ಯ. ಆದರೆ ಇದರಿಂದ ಕಣ್ಣು, ತಲೆನೋವು ಸಮಸ್ಯೆಗಳೂ ಮಕ್ಕಳಲ್ಲಿ ಜಾಸ್ತಿಯಾಗುತ್ತಿವೆ. ಶಿಕ್ಷಕರು ನಿರಂತರ ಆನ್‌ಲೈನ್ ಪಾಠ ಮಾಡದೆ, ನಡುವೆ ಬ್ರೇಕ್ ನೀಡುತ್ತಿರಬೇಕು. ಸಾಧ್ಯವಾದಷ್ಟು ದಿನಕ್ಕೆ ಕಡಿಮೆ ಅವಧಿಯಲ್ಲಿ ಪಾಠ ಮಾಡಿ ಮುಗಿಸಬೇಕು. ಇದು ನಿರಂತರ ಕಂಪ್ಯೂಟರ್, ಮೊಬೈಲ್ ಸ್ಕ್ರೀನ್ ನೋಡುವುದರಿಂದ ಮಕ್ಕಳಿಗೆ ವಿರಾಮ ನೀಡುತ್ತದೆ.
-ಡಾ| ವಿಕ್ರಮ್ ಜೈನ್, ನೇತ್ರ ತಜ್ಞರು, ಮಂಗಳೂರು