ಹೊಸದಿಲ್ಲಿ: ಖ್ಯಾತ ಆನ್‌ಲೈನ್ ಮಾರಾಟ ಸಂಸ್ಥೆಯೊಂದಕ್ಕೆ ಇದೇ ವರ್ಷ ಎಪ್ರಿಲ್- ಮೇ ಅವಧಿಯಲ್ಲಿ ಮಕ್ಮಲ್ ಟೋಪಿ ಹಾಕಿ ಸುಮಾರು 50 ಲಕ್ಷ ರೂ. ಸಂಪಾದಿಸಿದ್ದ ದಿಲ್ಲಿಯ ಶಿವರಾಮ್ ಚೋಪ್ರಾ ಎಂಬ 21ರ ಪ್ರಾಯದ ಯುವಕನೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆ್ಯಪಲ್, ಸ್ಯಾಮ್‌ಸಂಗ್ ಮುಂತಾದ ಪ್ರತಿಷ್ಠಿತ ಬ್ರಾಂಡ್ ಗಳ ದುಬಾರಿ ಮೊಬೈಲ್‌ಗಳನ್ನು ಆನ್‌ಲೈನ್ ಮಾರಾಟ ಜಾಲತಾಣದಲ್ಲಿ ಆರ್ಡರ್ ಮಾಡಿ, ಆ ವಸ್ತುಗಳು ಬಂದ ಅನಂತರ, ಅವುಗಳನ್ನು ಬಳಕೆ ಮಾಡಿದ ವಸ್ತು ಗಳ ಮಾರಾಟ ಜಾಲತಾಣವಾದ ಒಎಲ್‌ಎಕ್ಸ್ ಅಥವಾ ನಕಲಿ ಪರಿಕರ ಮಾರಾಟ ಮಾಡುವ ಮಳಿಗೆಗಳಿಗೆ ಮಾರುತ್ತಿದ್ದ.
ಹಾಗೆ ಮಾರಿದ ಬೆನ್ನಲ್ಲೇ, ತಾನು ಮೊಬೈಲ್ ಗಳನ್ನು ಆರ್ಡರ್ ಮಾಡಿದ್ದ ಆನ್‌ಲೈನ್ ಕಂಪೆನಿಯ ಗ್ರಾಹಕ ಸೇವೆ ವಿಭಾಗಕ್ಕೆ ಫೋನಾ ಯಿಸಿ ತನಗೆ ಬಂದಿದ್ದ ಪಾರ್ಸೆಲ್ ಖಾಲಿ ಇತ್ತೆಂದು ಹೇಳಿ ತಾನು ನೀಡಿದ ಹಣವನ್ನು ಮರಳಿ ಪಡೆಯುತ್ತಿದ್ದ. ಹೀಗೆ, ಎರಡೂ ಮಾರ್ಗಗಳಲ್ಲಿ ಹಣ ಸಂಪಾದಿಸುತ್ತಿದ್ದ.
ಈ ಪ್ರಕರಣದಲ್ಲಿ ಈತನಿಗೆ ಸಾಥ್ ನೀಡಿದ್ದ ಸಚಿನ್ ಜೈನ್ ಎಂಬ ಒಬ್ಬ ಮೊಬೈಲ್ ಅಂಗಡಿ ಮಾಲೀಕ 141 ಬೇರೆ ಸಿಮ್ ಕಾರ್ಡುಗಳನ್ನು ಚೋಪ್ರಾಗೆ ಕೊಟ್ಟು ಆತ ಬೇರೆ ಬೇರೆ ಸಂಖ್ಯೆ ಯಿಂದ ಆರ್ಡರ್ ಮಾಡಲು ನೆರವಾ ಗಿದ್ದ. ಈತ ಕೂಡ ಪೊಲೀಸರ ಅತಿಥಿ ಯಾಗಿದ್ದಾನೆ.
ಪದೇ ಪದೇ ಇಂಥ ಘಟನೆಗಳು ನಡೆದಿದ್ದು ಗಮನಿಸಿದ ಆ ಕಂಪೆನಿ, ಪೊಲೀಸರಿಗೆ ದೂರು ದಾಖಲಿಸಿತ್ತು. ಇದರ ತನಿಖೆ ನ‚ಡೆಸಿದ್ದ ಪೊಲೀಸರು ಈತ ಚೋಪ್ರಾನನ್ನು ಬಂಧಿಸಿ 22 ಲಕ್ಷ ರೂ. ನಗದು, 19 ಮೊಬೈಲ್‌ಗಳು, 40 ವಿವಿಧ ಬ್ಯಾಂಕ್ ಖಾತೆಗಳ ಪಾಸ್ ಬುಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.