ಬಳ್ಳಾರಿ: ಹೂಡಿಕೆಗೆ ಪ್ರತಿಯಾಗಿ ಶೇ. 500ರಷ್ಟು ಲಾಭಾಂಶ ನೀಡುವ ಆಮಿಷವೊಡ್ಡಿ ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 25.60 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಷೇರು ಮಾರುಕಟ್ಟೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಂಚನೆಗೆ ಒಳಗಾಗಿದ್ದ ವ್ಯಕ್ತಿಗೆ ಮೊದಲಿಗೆ ವಾಟ್ಸ್‌ಆ್ಯಪ್ ನಲ್ಲಿ ಸಂದೇಶ ಬಂದಿದೆ. ಅದರಲ್ಲಿ ತಿಳಿಸಿದ್ದ ಗ್ರೂಪ್‌ಗೆ ವ್ಯಕ್ತಿ ಸೇರ್ಪಡೆಗೊಂಡಿದ್ದಾರೆ. ಬಳಿಕ ₹2 ಲಕ್ಷ ರೂ. ಹೂಡಿಕೆ ಮಾಡಿದರೆ, ಶೇ.500ರಷ್ಟು ಲಾಭಾಂಶ ನಿಡುವುದಾಗಿ ಗ್ರೂಪ್‌ನಲ್ಲಿ ತಿಳಿಸಲಾಗಿದೆ.
ಇದನ್ನು ನಂಬಿದ ವ್ಯಕ್ತಿ ₹2,52,000 ಹಣ ಹೂಡಿಕೆ ಮಾಡಿದ್ದಾರೆ. ಇದರ ಬೆನ್ನಿಗೇ ಹೂಡಿಕೆಗೆ ಪ್ರತಿಯಾಗಿ ₹10 ಲಕ್ಷ ಹಣ ಬಂದಿರುವುದಾಗಿ ಅವರಿಗೆ ಸಂದೇಶ ಬಂದಿದೆ. ಹೀಗಿರುವಾಗಲೇ ನಿಮಗೆ 30 ಲಕ್ಷ ರೂ. ಸಾಲ ಮಂಜೂರಾಗಿದ್ದು, ಅದನ್ನು ಪಡೆಯಲು ₹23,08,936 ಪಾವತಿಸಬೇಕು ಎಂದು ಅದೇ ವಾಟ್ಸ್‌ಆ್ಯಪ್ ಗ್ರೂಪ್‌ನ ಸದಸ್ಯನೊಬ್ಬ ಹೇಳಿದ್ದಾನೆ. ಇದನ್ನು ನಂಬಿದ ವ್ಯಕ್ತಿ ಹಣವನ್ನು ಸಂದಾಯ ಮಾಡಿದ್ದಾರೆ. ಇದಾದ ಬಳಿಕ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ತಾವು ಮೋಸ ಹೋಗಿರುವುದು ವ್ಯಕ್ತಿಯ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಜಮೀನು ವಿವಾದ: ಅಣ್ಣನ ಮಗನಿಂದಲೇ ಚಿಕ್ಕಪ್ಪನ ಹತ್ಯೆ… ಆರೋಪಿ ಪರಾರಿ