Advertisement

ಆನ್‌ಲೈನ್‌ ವಂಚನೆ: ಸೆನ್‌ ಪೊಲೀಸರಿಂದ ಜಾಗೃತಿ ಪ್ರಯತ್ನ

11:08 PM Jun 21, 2019 | Sriram |

ಉಡುಪಿ: ಆನ್‌ಲೈನ್‌ ವ್ಯವಹಾರಗಳು ಹೆಚ್ಚುತ್ತಿರುವ ಜತೆಗೆ ಆನ್‌ಲೈನ್‌ ವಂಚನೆಗಳ ಪ್ರಮಾಣವೂ ಅಧಿಕವಾಗುತ್ತಿದೆ. ಇದನ್ನು ಭೇದಿಸುವುದು ಪೊಲೀಸರಿಗೂ ಸವಾಲಾಗಿದೆ.

Advertisement

ಒಂದೆಡೆ ಆನ್‌ಲೈನ್‌ ವಂಚಕರ ಬೆನ್ನುಬಿದ್ದಿರುವ ಉಡುಪಿಯ ಸೆನ್‌ ಅಪರಾಧ ಠಾಣೆ (ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಸಂಬಂಧಿಸಿದ ಅಪರಾಧ) ಪೊಲೀಸರು ಇನ್ನೊಂದೆಡೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ವೈವಾಹಿಕ ಜಾಲತಾಣಗಳಲ್ಲಿ ವಂಚನೆ, ಉದ್ಯೋಗ ಆಮಿಷ ನೀಡಿ ವಂಚನೆ, ಎಟಿಎಂ ವಂಚನೆಗಳ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಮಾದರಿಯಲ್ಲಿ ಎಚ್ಚರಿಕೆಯ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ. ಇದೇ ರೀತಿಯ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿಯೂ ಅಳವಡಿಸಲು ನಿರ್ಧರಿಸಿದ್ದಾರೆ.

ವೈವಾಹಿಕ ಜಾಲತಾಣದಲ್ಲಿ
ವೈವಾಹಿಕ ಜಾಲತಾಣಗಳಲ್ಲಿ ಪರಿಚಯವಾಗುವ ವ್ಯಕ್ತಿಗಳ ಬಣ್ಣದ ಮಾತು, ಸಂದೇಶ ಮತ್ತು ಭರವಸೆಗಳಿಗೆ ಮರುಳಾಗಬೇಡಿ. ವಂಚಕರು ನಿಮ್ಮ ನಂಬಿಕೆ ಮತ್ತು ಭಾವನಾತ್ಮಕ ಸಂಬಂಧವನ್ನು ದುರ್ಬಳಕೆ ಮಾಡಿಕೊಂಡು ಹಣ ಮತ್ತು ಬೆಲೆಬಾಳುವ ವಸ್ತು¤ಗಳನ್ನು ಪಡೆದು ಮೋಸ ಮಾಡುತ್ತಾರೆ. ಹೆಚ್ಚು ಜಾಗರೂಕತೆ ವಹಿಸಿ ಎಂದು ಎಚ್ಚರಿಸಿದ್ದಾರೆ.

ಉದ್ಯೋಗ ಆಮಿಷ
ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್‌ ಮೂಲಕ ವಿವಿಧ ಬ್ಯಾಂಕ್‌ ಖಾತೆಗಳಿಗೆ ಮುಂಗಡವಾಗಿ ಹಣ ಹಾಕಿಸಿಕೊಂಡು ವಿವಿಧ ಕಾರಣಗಳನ್ನು ನೀಡಿ (ಪ್ರೊಸೆಸ್‌ ಫೀಸ್‌, ಪ್ಲೇಸ್‌ಮೆಂಟ್‌ ಫೀಸ್‌ ಮತ್ತು ಜಾಬ್‌ ಪ್ಯಾಕೇಜ್‌ ಫೀಸ್‌) ಎಂದು ನಾನಾ ರೀತಿಯಲ್ಲಿ ಹಣ ಪಡೆದು ಉದ್ಯೋಗ ಕೊಡಿಸದೆ ಮೋಸ ಮಾಡುತ್ತಾರೆ ಎಂದು ಎಚ್ಚರಿಸಲಾಗಿದೆ.

Advertisement

ಎಟಿಎಂ
ಬ್ಯಾಂಕ್‌ ಖಾತೆ ಸಂಖ್ಯೆ, ಎಟಿಎಂ ಕಾರ್ಡ್‌ ಸಂಖ್ಯೆ, ಎಟಿಎಂ ಕಾರ್ಡ್‌ ಮಾನ್ಯತೆ(ವ್ಯಾಲಿಡಿಟಿ), 16 ಡಿಜಿಟ್‌ ಇರುವ ಸಿವಿವಿ, ಒಟಿಪಿ ಮೊದಲಾದವುಗಳನ್ನು ಅಪರಿಚಿತರೊಂದಿಗೆ ಆನ್‌ಲೈನ್‌/ಆಫ್ಲೈನ್‌ನಲ್ಲಿ ಹಂಚಿಕೊಳ್ಳದಿರಿ.

ಸ್ಕಿಮ್ಮಿಂಗ್‌ ಡಿವೈಸ್‌
ಕೆಲವು ಎಟಿಎಂಗಳಲ್ಲಿ ಸ್ಕಿಮ್ಮಿಂಗ್‌ ಡಿವೈಸ್‌ ಅಳವಡಿಸಿ ಎಟಿಎಂ ಕಾರ್ಡ್‌ನ ಮಾಹಿತಿ ಪಡೆದು ಹಣ ಲಪಟಾಯಿಸುವ ಸಾಧ್ಯತೆ ಇದೆ. ಹಾಗಾಗಿ ಸಾಧ್ಯವಾದಷ್ಟು ಸೆಕ್ಯೂರಿಟಿ ಗಾರ್ಡ್‌ಗಳು ಇರುವ ಎಟಿಎಂಗಳನ್ನು ಬಳಸಬೇಕು. ಎಟಿಎಂ ಕೇಂದ್ರ ಪ್ರವೇಶಿಸುವಾಗ ಬಳಸುವಾಗ ಹೆಚ್ಚು ಎಚ್ಚರಿಕೆ ಇರಲಿ.

ನಕಲಿ ಕಸ್ಟಮರ್‌ ಕೇರ್‌
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನಕಲಿ ಕಸ್ಟಮರ್‌ ಕೇರ್‌ ಮೊಬೈಲ್‌ ನಂಬರ್‌, ವೆಬ್‌ಸೈಟ್‌, ಇಮೇಲ್‌ ಇರುತ್ತದೆ. ಯಾವುದೇ ಕಸ್ಟಮರ್‌ ಕೇರ್‌ಗೆ ಸಂಪರ್ಕಿಸುವ ಮೊದಲು ಅವುಗಳು ನಕಲಿಯೋ ಅಸಲಿಯೋ ಎಂದು ಪರಿಶೀಲಿಸುವುದು ಅಗತ್ಯ.

25ಕ್ಕೂ ಅಧಿಕ ಎಟಿಎಂ ವಂಚನೆ
ಉಡುಪಿಯ ಸೆನ್‌ ಅಪರಾಧ ಪತ್ತೆ ದಳದಲ್ಲಿ ಉಡುಪಿಗೆ ಸಂಬಂಧಿಸಿ ಕೆಲವು ತಿಂಗಳಲ್ಲಿ ಒಟ್ಟು 25ಕ್ಕೂ ಅಧಿಕ ಮಂದಿ ಎಟಿಎಂ ವಂಚನೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಿದ್ದರು. ಮಣಿಪಾಲದ ಬಟ್ಟೆ ಮಳಿಗೆಯೊಂದರಲ್ಲಿ ಎರಡು ಸ್ವೆ„ಪ್‌ ಮೆಷಿನ್‌ಗಳನ್ನಿಟ್ಟು ಮಾಹಿತಿ ಕದ್ದು ಎಟಿಎಂನಿಂದ ಹಣ ಪಡೆದು ವಂಚಿಸಿದ ಬಗ್ಗೆ ಛತ್ತೀಸ್‌ಗಢದ ಓರ್ವರು ದೂರು ನೀಡಿದ್ದರು. ದತ್ತು ಮಗು ನೀಡುವುದಾಗಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚಿಸಿದ ಬಗ್ಗೆ ಮಹಿಳೆಯೋರ್ವರು ದೂರು ನೀಡಿದ್ದರು. ಚಿಕಿತ್ಸಾಲಯ ನೋಂದಣಿಗೆ ಸಂಬಂಧಿಸಿ ಆನ್‌ಲೈನ್‌ನಲ್ಲಿ ವಂಚಿಸಿರುವ ಬಗ್ಗೆ ಇನ್ನೋರ್ವ ಮಹಿಳೆ ದೂರು ನೀಡಿದ್ದರು.

ಜಾಗರೂಕತೆ ಬೇಕು
ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಹೆಚ್ಚಿನ ಜಾಗರೂಕತೆ ಬೇಕು. ಆಮಿಷಗಳಿಗೆ ಒಳಗಾಗಿ ಅಥವಾ ದುರಾಸೆಯಿಂದ ಹಣ ಕಳೆದುಕೊಂಡವರು ಅನೇಕ ಮಂದಿ ಇದ್ದಾರೆ. ಜನರು ಎಚ್ಚರಿಕೆಯಿಂದ ಇದ್ದರೆ ಇಂಥ ಅನೇಕ ವಂಚನೆಗಳಿಂದ ಪಾರಾಗಬಹುದು.
-ಸೀತಾರಾಮ್‌,
ಇನ್ಸ್‌ಪೆಕ್ಟರ್‌,ಸೆನ್‌ ಅಪರಾಧ ಪೊಲೀಸ್‌ ಠಾಣೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next