ಬೆಂಗಳೂರು: ಯುಟ್ಯೂಬ್ ನೋಡಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಹಾಗೂ ಅದರ ಕುರಿತು ಸಲಹೆಗಳನ್ನು ನೀಡುವುದಾಗಿ ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಮೂವರು ಆರೋಪಿಗಳು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ರೆಹಮತ್ ಉಲ್ಲಾ (29), ಎಂ.ಸಿ.ಮಲ್ಲಯ್ಯ ಸ್ವಾಮಿ (29) ಮತ್ತು ಸಿ. ದುರ್ಗಪ್ಪ (28) ಬಂಧಿತರು.
ಆರೋಪಿಗಳಿಂದ 3 ಮೊಬೈಲ್‌ಗಳು, 6 ಸಿಮ್‌ಕಾರ್ಡ್‌ಗಳು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು. ಆರೋಪಿಗಳು ಒಂದೇ ಊರಿನವರಾಗಿದ್ದು, ಪಿಯುಸಿವರೆಗೆ ಓದಿದ್ದಾರೆ. ಕೆಲಸಕ್ಕೆ ಹೋಗದೆ ಯುಟ್ಯೂಬ್‌ನಲ್ಲಿ ಆನ್‌ಲೈನ್ ವಂಚನೆ ಬಗ್ಗೆ ತಿಳಿದುಕೊಂಡು ಕೃತ್ಯ ಎಸಗಿದ್ದಾರೆ.
ಆರೋಪಿಗಳು ಮೇಕ್ ಇನ್ ಪ್ರಾಫಿಟ್ ಎಂಬ ಕಂಪನಿ ತೆರೆದಿದ್ದು, ವಿವಿಧ ಮೂಲಗಳಿಂದ ಸಿಗುವ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿ, ಹಣವನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಹಾಗೂ ಹೂಡಿಕೆ ಕುರಿತು ಸಾಕಷ್ಟು ಸಲಹೆ ನೀಡುತ್ತೇವೆ ಎಂದು ನಂಬಿಸುತ್ತಿದ್ದರು. ಅದೇ ರೀತಿ ಯಲಹಂಕ ನಿವಾಸಿ ಬಿ. ಪುಂಡಲಿಕಪ್ಪ ಎಂಬುವವರಿಗೆ ಕರೆ ಮಾಡಿ, ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿ ದ್ದರು. ಬಳಿಕ 2.15 ಲಕ್ಷ ರೂ. ಹೂಡಿಕೆ ಮಾಡಿಸಿದ್ದರು. ನಂತರ ಜತೆಗೆ ವಿವಿಧ ಸಲಹೆ ನೀಡುವುದಾಗಿ ಹೆಚ್ಚುವರಿಯಾಗಿ ಹಣ ಪಡೆದುಕೊಂಡಿದ್ದರು. ಒಟ್ಟು 2.5 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು ಎಂದು ಪೊಲೀಸರು ಹೇಳಿದರು.
ಯುಟ್ಯೂಬ್ ನೋಡಿ ವಂಚನೆ: ಪಿಯುಸಿ ಓದಿರುವ ಆರೋಪಿಗಳು ಆನ್‌ಲೈನ್ ವಂಚನೆ ಬಗ್ಗೆ ಯುಟ್ಯೂ ಬ್‌ನಲ್ಲಿ ನೋಡಿ ಕರಗತ ಮಾಡಿಕೊಂಡಿದ್ದರು. ಈ ಮೂಲಕ ಅಮಾಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ಹಾಗೂ ಇತರೆ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದರು. ಈ ರೀತಿ ಸಂಪಾದಿಸಿದ್ದ ಹಣದಿಂದ ಮೋಜಿನ ಜೀವನ ಹಾಗೂ ವೈಯಕ್ತಿಕವಾಗಿ ವ್ಯಯಿಸಿದ್ದಾರೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ನಕಲಿ ಖಾತೆಗಳಿಗೆ ಹಣ : ಆರೋಪಿಗಳು ತಮ್ಮ ಊರಿನ ಅಮಾಯಕ ಜನರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಮಾಡಿ, ಆ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಜತೆಗೆ ಅವರ ಹೆಸರಿನಲ್ಲಿಯೇ ಸಿಮ್‌ಕಾರ್ಡ್ ಖರೀದಿಸಿ ಅವುಗಳಿಂದ ಹಣದ ವ್ಯವಹಾರ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.