Advertisement

Online Fraud; 1.21 ಕೋಟಿ ರೂ. ವಶ, ಮಧ್ಯಪ್ರದೇಶದ ಆರೋಪಿ ಬಂಧನ

08:28 PM Sep 18, 2024 | Team Udayavani |

ಬಳ್ಳಾರಿ: ನಗರ ಸೇರಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಆನ್‌ಲೈನ್ ವಂಚನೆ ಪ್ರಕರಣ ಬೇಧಿಸಿರುವ ಪೊಲೀಸರು ಆರೋಪಿಯೊಂದಿಗೆ ಅವನಿಂದ 1.21 ಕೋಟಿ ರೂ. ನಗದು ವಶ ಪಡಿಸಿಕೊಳ್ಳುವ ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ಡಾ. ವಿ.ಜೆ.ಶೋಭಾರಾಣಿ ಹೇಳಿದರು.

Advertisement

ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಧ್ಯಪ್ರದೇಶ ಮೂಲದ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಬಂಧಿಸಲಾಗಿದ್ದು, ಆರೋಪಿಯ ಖಾತೆಯಲ್ಲಿದ್ದ 1,21,04,500 ರೂ.ಗಳನ್ನು ವಶಕ್ಕೆ ಪಡೆದಿದ್ದು, ಬೇರೆ ಬೇರೆ ಖಾತೆಗಳಲ್ಲಿದ್ದ 27,97,582 ರೂ.ಗಳನ್ನು ಫ್ರಿಜ್ ಮಾಡಲಾಗಿದೆ. ಒಟ್ಟು 1,49,02,082 ರೂ.ಗಳನ್ನು ಮತ್ತು ಆರೋಪಿಯು ಆನ್‌ಲೈನ್ ವಂಚನೆಗೆ ಬಳಸಿದ್ದ ಒಂದು ವಿವೊ ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಏನಿದು ವಂಚನೆ;
ಬಳ್ಳಾರಿ ನಗರದಲ್ಲಿನ ಹಿಂದೂಸ್ತಾನ್ ಕ್ಯಾಲ್ಸಿನೆಡ್ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಅಗರ್‌ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೆಟ್ ಲಿಮಿಟೆಡ್ ಕಂಪನಿಯಿಂದ ಕೋಲ್ ಖರೀದಿ ಮಾಡುತ್ತಿದ್ದರು. ಕಂಪನಿಯವರು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಈ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿದ್ದ ಆರೋಪಿ ಅಜಯ್ ಕುಮಾರ್ ಜೈಸ್ವಾಲ್, ಅಗರ್‌ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬ್ಯಾಂಕ್ ಖಾತೆ ಸಂಖ್ಯೆ ಬದಲಾವಣೆಯಾಗಿದೆ ಎಂದು ಹೇಳಿ ಫೇಕ್ ಇ-ಮೇಲ್ ಐಡಿ ಸೃಷ್ಟಿಸಿ, ತನ್ನ ಮಧ್ಯಪ್ರದೇಶ ರಾಜ್ಯದ ಖಾಸಗಿ ಇಂಡಸಿಂಡ್ ಬ್ಯಾಂಕ್‌ನ ಖಾತೆಯ ಸಂಖ್ಯೆ ಕಳುಹಿಸಿ, ಆನ್‌ಲೈನ್ ಮೂಲಕ ೨.೧೧ ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡು ಕಂಪನಿಗೆ ಮೋಸ ಮಾಡಿದ್ದನು.

ಈ ಕುರಿತು ಇದೇ ಸೆ.3 ರಂದು ಬಳ್ಳಾರಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಎಸ್‌ಪಿ, ಎಎಸ್‌ಪಿ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಡಾ. ಸಂತೋಷ್ ಚವ್ಹಾಣ್ ನೇತೃತ್ವದಲ್ಲಿ ತನಿಖಾಕಾರಿ ಪೊಲೀಸ್ ಇನ್ಸ್ಪೆಕ್ಟರ್ ವೈ.ಎಚ್.ರಮಾಕಾಂತ್, ಎಎಸ್‌ಐಗಳಾದ ಎಂ.ಜಿ.ತಿಪ್ಪೇರುದ್ರಪ್ಪ, ಹನುಮಂತರೆಡ್ಡಿ, ಯಲ್ಲೇಶಿ, ವೆಂಕಟೇಶ್‌ರೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ. ತಾಂತ್ರಿಕ ಸಹಾಯದೊಂದಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಬಂಧಿತ ಆರೋಪಿ ಅಜಯ್ ಕುಮಾರ್ ಜೈಸ್ವಾಲ್‌ನಿಂದ 1.21 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಬೇರೆ ಬೇರೆ ಖಾತೆಗಳಲ್ಲಿದ್ದ 27,97,582 ಲಕ್ಷ ರೂ.ಗಳನ್ನು ಫ್ರಿಜ್ ಮಾಡಲಾಗಿದೆ. ಒಟ್ಟು 1,49,02,082 ರೂ., ಒಂದು ಮೊಬೈಲ್‌ನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ನವೀನ್ ಕುಮಾರ್, ಡಿಎಸ್‌ಪಿ ಡಾ. ಸಂತೋಷ್ ಚವ್ಹಾಣ್, ತನಿಖಾಧಿಕಾರಿ ಸಿಪಿಐ ಎಚ್.ರಮಾಕಾಂತ್ ಸೇರಿದಂತೆ ಹಲವರು ಇದ್ದರು.

Advertisement

ಇದನ್ನೂ ಓದಿ: ಚಿಕ್ಕಮಗಳೂರು: ಸೌಲಭ್ಯ ಕಲ್ಪಿಸುವಂತೆ ಮಾಜಿ ನಕ್ಸಲರಿಂದ ಡಿಸಿಗೆ ಮನವಿ

Advertisement

Udayavani is now on Telegram. Click here to join our channel and stay updated with the latest news.

Next