Advertisement

ವಾಹನ ಕಳವಿಗೆ ಆನ್‌ಲೈನ್‌ ಎಫ್ಐಆರ್‌!

12:38 AM Nov 14, 2022 | Team Udayavani |

ಮಂಗಳೂರು: ಆನ್‌ಲೈನ್‌ ಸೇವೆಗಳಿಗೆ ಆದ್ಯತೆ ನೀಡುತ್ತಿರುವ ರಾಜ್ಯ ಪೊಲೀಸ್‌ ಇಲಾಖೆ ಈಗ ವಾಹನ ಕಳವು ಸಂದರ್ಭ ಆನ್‌ಲೈನ್‌ನಲ್ಲಿಯೇ ದೂರು ದಾಖಲಿಸಿ ಆನ್‌ಲೈನ್‌ನಲ್ಲಿಯೇ ಎಫ್ಐಆರ್‌ ಸ್ವೀಕರಿಸುವ ಸೌಲಭ್ಯ ಕಲ್ಪಿಸಿದೆ.

Advertisement

ರಾಜ್ಯ ಪೊಲೀಸ್‌ನ ಅಧಿಕೃತ ವೆಬ್‌ಸೈಟ್‌ //www.ksp.karnataka.gov.in ನ ಸಿಟಿಜನ್‌ ಸೆಂಟ್ರಿಕ್‌ ಪೋರ್ಟಲ್‌ ಮೂಲಕ ಇ-ಎಫ್ಐಆರ್‌ ಪಡೆಯಬಹುದು. ಪೋರ್ಟಲ್‌ನಲ್ಲಿ ಹೆಸರು, ವಿಳಾಸ, ಆಧಾರ್‌ ಸಂಖ್ಯೆ, ಕಳವಾದ ವಾಹನದ ಮಾಹಿತಿ ನಮೂದಿಸಿ ಪೂರಕ ದಾಖಲೆ ಅಪ್‌ ಲೋಡ್‌ ಮಾಡಬೇಕು. ಕಳವಾದ ಸ್ಥಳದ ಮಾಹಿತಿ ನೀಡಬೇಕು. ಮ್ಯಾಪ್‌ ಮೂಲಕವೂ ಲೊಕೇಶನ್‌ ಆಯ್ಕೆ ಮಾಡಬಹುದು. ಪೋರ್ಟಲ್‌ ನಲ್ಲಿ ದೂರು ದಾಖಲಾದ ಬಳಿಕ ಸಂಬಂಧಿಸಿದ ಠಾಣಾಧಿಕಾರಿ, ದೂರುದಾರರಿಗೆ ಎಸ್‌ಎಂಎಸ್‌ ಬರುತ್ತದೆ. ಬಳಿಕ ಆನ್‌ಲೈನ್‌ ದಾಖಲೆ ಪರಿಶೀಲನೆ ಮುಗಿದು ಠಾಣಾಧಿಕಾರಿಯ ಇ ಸಹಿಯೊಂದಿಗೆ ಇ-ಎಫ್ಐಆರ್‌ ಸಿದ್ಧವಾಗು ತ್ತದೆ. ಇದನ್ನು ದೂರುದಾರರು ಡೌನ್‌ಲೋಡ್‌ ಮಾಡಬಹುದು.

300ಕ್ಕೂ ಅಧಿಕ ದೂರು ದಾಖಲು
ವಾಹನ ಕಳವಾದ ಸಂದರ್ಭ ವಾಹನ ಮಾಲಕರು ಹಲವು ಬಾರಿ ಪೊಲೀಸ್‌ ಠಾಣೆಗೆ ತೆರಳುವ ಪ್ರಮೇಯ ಬರುತ್ತದೆ. ಕೆಲವೊಮ್ಮೆ ದೂರು ನೀಡಿದರೂ ಎಫ್ಐಆರ್‌ ದಾಖಲಾಗಲು ಹಲವು ದಿನಗಳು ತಗಲುತ್ತವೆ. ಇದನ್ನು ಇ-ಎಫ್ಐಆರ್‌ ತಪ್ಪಿಸುತ್ತದೆ. ಸಾಮಾನ್ಯವಾಗಿ ವಾಹನ ಕಳವು ಪ್ರಕರಣಗಳಲ್ಲಿ ಸುಳ್ಳು ಮಾಹಿತಿ ನೀಡುವುದು ಅಸಾಧ್ಯ. ಹಾಗಾಗಿ ವಾಹನ ಕಳವು ಪ್ರಕರಣಗಳಲ್ಲಿ ಮಾತ್ರ ಇ-ಎಫ್ಐಆರ್‌ಗೆ ಅವಕಾಶ ನೀಡಲಾಗಿದೆ. ಇ-ಎಫ್ಐಆರ್‌ ಅನುಷ್ಠಾನಗೊಳಿಸಿದ 10 ದಿನಗಳಲ್ಲಿ 300ಕ್ಕೂ ಅಧಿಕ ಮಂದಿ ಆನ್‌ಲೈನ್‌ನಲ್ಲಿಯೇ ದೂರು ಸಲ್ಲಿಸಿದ್ದಾರೆ.

“ಸಿ’ ರಿಪೋರ್ಟ್‌ ಆನ್‌ಲೈನ್‌
ಒಂದು ವೇಳೆ ಕಳವಾದ ವಾಹನ ಪತ್ತೆಯಾಗದಿದ್ದರೆ ಪೊಲೀಸರು “ಸಿ’ ರಿಪೋರ್ಟ್‌ (ಅನ್‌ ಡಿಟೆಕ್ಟ್) ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಫ್ಐಆರ್‌ ದಾಖಲಾದ ಅನಂತರ ವಾಹನ ಪತ್ತೆಯಾಗದಿದ್ದರೆ “ಸಿ’ ರಿಪೋರ್ಟನ್ನು ಕೂಡ ಆನ್‌ಲೈನ್‌ನಲ್ಲಿಯೇ ನೀಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

11ಕ್ಕೂ ಅಧಿಕ ಸೇವೆಗಳು ಆನ್‌ಲೈನ್‌
ಉದ್ಯೋಗ ಪರಿಶೀಲನೆ ಪ್ರಮಾಣಪತ್ರ, ಪೊಲೀಸ್‌ ನಿರಾಕ್ಷೇಪಣ ಪ್ರಮಾಣಪತ್ರ, ಪರವಾನಿಗೆ ಮೊದಲಾದ 11ಕ್ಕೂ ಅಧಿಕ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ (ಸೇವಾ ಸಿಂಧು) ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಶುಲ್ಕವನ್ನು ಪೇಟಿಎಂ, ಗೂಗಲ್‌ ಪೇ, ಪೋನ್‌ ಪೇ ಮೊದಲಾದ ಯುಪಿಐ ಬ್ಯಾಂಕಿಂಗ್‌ ಸಿಸ್ಟಮ್‌ಗಳ ಮೂಲಕ ಪಾವತಿ ಮಾಡಬಹುದು. ಆನ್‌ಲೈನ್‌ನಲ್ಲಿಯೇ ಅರ್ಜಿಯ ಸ್ಟೇಟಸ್‌ ಪರಿಶೀಲನೆ ಮಾಡಬಹುದು. ವರ್ಷಕ್ಕೆ ಸುಮಾರು 6ರಿಂದ 8 ಲಕ್ಷ ಮಂದಿ ಪೊಲೀಸ್‌ ವೆರಿಫಿಕೇಶನ್‌ (ಪರಿಶೀಲನ ಪ್ರಮಾಣಪತ್ರ) ಪಡೆಯುತ್ತಿದ್ದು, ಅಂಥವರಿಗೆ ಆನ್‌ಲೈನ್‌ಸೇವೆಯಿಂದ ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.
2.50 ಲಕ್ಷ ಮಂದಿ “ಇ-ಲಾಸ್ಟ್‌’ ಬಳಕೆ ಈ ಹಿಂದೆ ಬೆಂಗಳೂರಿಗೆ ಸೀಮಿತವಾಗಿದ್ದ “ಇ-ಲಾಸ್ಟ್‌’ ಆ್ಯಪ್‌ (ಛಿ ಔಟsಠಿ) ಸೇವೆಯನ್ನು ಕಳೆದ ವರ್ಷ ರಾಜ್ಯದಾದ್ಯಂತ ವಿಸ್ತರಿಸಲಾಗಿದ್ದು, ಒಂದು ವರ್ಷದಲ್ಲಿ 2.50 ಲಕ್ಷಕ್ಕೂ ಅಧಿಕ ಮಂದಿ ಬಳಸಿದ್ದಾರೆ. ಯಾವುದೇ ದಾಖಲೆ ಕಳೆದುಹೋದರೆ ಇ-ಲಾಸ್ಟ್‌ ಆ್ಯಪ್‌ನಲ್ಲಿಯೇ ಸುಲಭವಾಗಿ ದೂರು ದಾಖಲಿಸುವ ವ್ಯವಸ್ಥೆ ಇದಾಗಿದೆ.

Advertisement

ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ಪೊಲೀಸ್‌ ಠಾಣೆ, ಎಸ್‌ಪಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದು, ಪಾರದರ್ಶಕ ಸೇವೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಒದಗಿಸುವುದು ಆನ್‌ಲೈನ್‌ ಸೇವೆಯ ಉದ್ದೇಶ. ನಮ್ಮ ರಾಜ್ಯದಲ್ಲಿ ಬಹುತೇಕ ಎಲ್ಲ ಹಳ್ಳಿಗಳಲ್ಲಿಯೂ ಇಂಟರ್‌ನೆಟ್‌ ಸಂಪರ್ಕ, ಮಾಹಿತಿ ಇದೆ. ಹಾಗಾಗಿ ಆನ್‌ಲೈನ್‌ ಸೇವೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆನ್‌ಲೈನ್‌ ಸೇವೆಯಿಂದಾಗಿ ವರ್ಷಕ್ಕೆ ಪೊಲೀಸ್‌ ಠಾಣೆಗಳಿಗೆ ಸಾರ್ವಜನಿಕರ ಅಲೆದಾಟದ 50 ಲಕ್ಷ ಹೆಜ್ಜೆ (ಫ‌ೂಟ್‌ಫಾಲ್‌) ಕಡಿಮೆಯಾಗಬಹುದೆಂಬ ಅಂದಾಜು ಇದೆ.
-ಪ್ರವೀಣ್‌ ಸೂದ್‌, ಮಹಾನಿರ್ದೇಶಕರು
ಹಾಗೂ ಆರಕ್ಷಕ ಮಹಾನಿರೀಕ್ಷಕರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next