Advertisement

Online ಮೂಲಕ ಕಡತ ವಿಲೇವಾರಿ ಮಾಡುವುದರಿಂದ ಭ್ರಷ್ಟಾಚಾರ ಕಡಿವಾಣ ಸಾಧ್ಯ: ಕೃಷ್ಣ ಬೈರೇಗೌಡ

03:25 PM Sep 14, 2023 | Team Udayavani |

ಹುಬ್ಬಳ್ಳಿ: ತಹಸಿಲ್ದಾರ್ ಕಚೇರಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿ ಅವರಿಗೆ ಕಡತಗಳ ವಿಲೇವಾರಿಯನ್ನು ಆನ್ ಲೈನ್ ಮೂಲಕ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಮಿತಿಗಳು ನೀಡಲಾಗುತ್ತಿದ್ದು, ನನ್ನ ಕಚೇರಿಯಲ್ಲಿ ಬಹುತೇಕ ಕಡತಗಳ ವಿಲೇವಾರಿಯನ್ನು ಆನ್ ಲೈನ್ ಮೂಲಕವೇ ಕೈಗೊಳ್ಳುತ್ತಿರುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

Advertisement

ಗುರುವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡತಗಳ ವಿಲೇವಾರಿಯನ್ನು ಆನ್ ಲೈನ್ ಮೂಲಕ ಕೈಗೊಳ್ಳುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿದ್ದು, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದಂತಾಗಲಿದೆ ಎಂದರು.

ನನ್ನ ಕಚೇರಿಯಲ್ಲಿ ಕೋರ್ಟಗೆ ಸಂಬಂಧಿಸಿದ ಪ್ರಕರಣ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡತಗಳನ್ನು ಆನ್ ಲೈನ್ ಮೂಲಕವೇ ಕೈಗೊಳ್ಳುತ್ತಿದ್ದು ಕಂದಾಯ ಇಲಾಖೆಯ ಆಡಳಿತವನ್ನು ಕಾಗದರಹಿತ ವಾಗಿಸಲಾಗುವುದು ಎಂದರು.

ತಹಶಿಲ್ದಾರ ಕಚೇರಿಗಳು ಉಪ ನೋಂದಣಿ ಕಚೇರಿಗಳು ಇನ್ನಿತರ ಕಡೆಗಳಲ್ಲಿ ಭ್ರಷ್ಟಾಚಾರ ಈಗಲೂ ಇದೆ ಎಂದ ಸಚಿವರು, ಕಡತಗಳ ವಿಲೇವಾರಿ ಆನ್ ಲೈನ್ ಗೊಳಿಸುವ  ಮೂಲಕ ಇದಕ್ಕೆ ತಕ್ಕಮಟ್ಟಿಗೆ ಕಡಿವಾಣ ಹಾಕಬಹುದು ಎಂದರು.

ಕಡತಗಳ ವಿಲೇವಾರಿಯನ್ನು ಆನ್ ಲೈನ್ ಮೂಲಕ ಕೈಗೊಂಡರೆ ತ್ವರಿತ ವಿಲೇವಾರಿಯ ಜೊತೆಗೆ ಕಡತಗಳು ಯಾವ ಹಂತದಲ್ಲಿವೆ ಎಂಬುದರ ಮಾಹಿತಿ ಮೇಲಾಧಿಕಾರಿಗಳಿಗೆ ತಿಳಿಯಲಿದೆ ಎಂದು ನುಡಿದರು.

Advertisement

ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ ಮೂರು ಕಚೇರಿಗಳ ನಡುವೆ ಕಡತಗಳನ್ನು ಆನ್ ಲೈನ್ ಮೂಲಕ ಕೈಗೊಳ್ಳಲು ಅಕ್ಟೋಬರ್ 1ರ ವರೆಗೆ ಗಡವು ನೀಡಲಾಗಿದ್ದು, ಇದೇ ರೀತಿ ವಿವಿಧ ಜಿಲ್ಲೆಗಳಿಗೂ ಕಾಲಮಿತಿ ನೀಡಲಾಗುವುದು ಎಂದರು.

ಕಂದಾಯ ಸಚಿವನಾಗಿ ನಾನು ಅಧಿಕಾರವಹಿಸಿಕೊಂಡ ಕಳೆದ ಎರಡು ತಿಂಗಳಲ್ಲಿ ಮೂರ್ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದು, ಶಿಸ್ತು ಕ್ರಮದ ಕುರಿತಾದ ಸುಮಾರು 180 ಅಧಿಕಾರಿಗಳ ವಿರುದ್ಧದ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ವಿಚಾರಣೆ ಮುಗಿದು ಎರಡು ಮೂರು ವರ್ಷಗಳಾದರೂ ಕಡತ ಬಾಕಿ ಉಳಿದಿತ್ತು ಅಂತಹ ಎಲ್ಲ ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೆಲ ಪ್ರಕರಣಗಳಲ್ಲಿ ಬಡ್ತಿ ಕಡಿತ, ಅಮಾನತು ಹಾಗೂ ಸೇವೆಯಿಂದಲೇ ವಜಾದಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಭ್ರಷ್ಟ ಅಧಿಕಾರಿಗಳ ವಿರುದ್ಧ ದಂಡಂ ದಶಗುಣಂ ಜೊತೆಗೆ ಉತ್ತಮ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ವೋತ್ತಮ ಅಧಿಕಾರಿ ಎಂಬ ಪ್ರಶಸ್ತಿ ನೀಡಲು ಸಹ ಚಿಂತನೆ ನಡೆದಿದೆ ಎಂದರು.

ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ರೈತರು ಆ ನಿವೇಶನದ ಪರಿವರ್ತನೆ ವಿಚಾರದಲ್ಲಿ ಸಮಸ್ಯೆ ಇದ್ದು, ಇದಕ್ಕೆ ಕ್ರಮ ಕೈಗೊಳ್ಳಲು ನಮ್ಮ ಬೆಂಗಳೂರು ಫೌಂಡೇಶನ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಏನು ಮಾಡಲು ಆಗುತ್ತಿಲ್ಲ ಎಂದರು.

ರಾಜ್ಯದಲ್ಲಿನ ಅನೇಕ ಉಪ ನೋಂದಣಿ ಕಚೇರಿಗಳಿಗೆ ಮೂಲಭೂತ ಸೌಲಭ್ಯಗಳಿಲ್ಲ ಎಂಬ ದೂರು ಕೇಳಿ ಬಂದಿದ್ದು, ಮೂಲಭೂತ ಸೌಲಭ್ಯ ಒದಗಿಸಲು ಹಾಗೂ ಅಲ್ಲಿನ ಏಜೆಂಟರುಗಳ ಹಾವಳಿ ತಪ್ಪಿಸಿ, ಜನರಿಗೆ ಸುಲಲಿತ ಅವಕಾಶಗಳನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next