ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆಯನ್ನು ಮೊದಲ ಬಾರಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸುವುದರ ಮೂಲಕ ವಿವಿ ಮತ್ತೂಂದು ಗರಿಮೆಗೆ ಪಾತ್ರವಾಗಿದೆ.
ಶರಣಬಸವ ವಿಶ್ವವಿದ್ಯಾಲಯ ಈ ಭಾಗದಲ್ಲಿ ಡೀಮ್ಡ್ ಅಥವಾ ಖಾಸಗಿ ವಿಶ್ವವಿದ್ಯಾಲಯವಾಗಿದ್ದು, ಆನ್‌ಲೈನ್ ಪರೀಕ್ಷೆ ನಡೆಸಿರುವ ಮೊದಲ ವಿಶ್ವವಿದ್ಯಾಲಯವಾಗಿದೆ.
ಶರಣಬಸವ ವಿಶ್ವವಿದ್ಯಾಲಯ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಕಾಗದರಹಿತ ಪರೀಕ್ಷೆ ನಡೆಸಲು ಮುಂದಾಳತ್ವ ತೆಗೆದುಕೊಂಡಿದ್ದಾರೆ. ಈ ಕ್ರಮ ಪಾರದರ್ಶಕದಿಂದ ಕೂಡಿದ್ದಲ್ಲದೇ ಹಣ ಮತ್ತು ಮೌಲ್ಯಮಾಪನ ಸಮಯ ಉಳಿತಾಯ ಆಗುತ್ತದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿ ಅವ್ವಾ, ಆನ್‌ಲೈನ್ ಪರೀಕ್ಷೆಯಿಂದ ವಿಶ್ವವಿದ್ಯಾಲಯದ ಗುಣಮಟ್ಟ ಸುಧಾರಿಸುವುದರಲ್ಲಿ ಸಹಕಾರಿಯಾಗುತ್ತದೆ. ಮೌಲ್ಯಮಾಪನ, ಫಲಿತಾಂಶ ಘೋಷಣೆ ಮಾಡುವುದರಲ್ಲಿ ಸಮಯ ಉಳಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ| ನಿರಂಜನ್ ನಿಷ್ಠಿ, ಉಪಕುಲಪತಿ ಡಾ| ವಿ.ಡಿ. ಮೈತ್ರಿ, ಎನ್.ಎಸ್. ದೇವರಲ್ ವಿಶ್ವವಿದ್ಯಾಲಯ ಸಿಬ್ಬಂದಿ ಯಶಸ್ವಿಯಾಗಿ ಕೈಗೊಂಡಿರುವ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.