ರಾಯಚೂರು : ಕೋವಿಡ್ ವೈರಸ್ ಭೀತಿ ಮಧ್ಯೆಯೂ ಸರ್ಕಾರ ಪಿಯುಸಿ, ಎಸ್ಸೆಸ್ಸೆಲ್ಸಿ,ಸಿಇಟಿ ಪರೀಕ್ಷೆಗಳನ್ನು ನಡೆಸಿದರೆ, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಮಾತ್ರ ಆನ್ ಲೈನ್ ಪರೀಕ್ಷೆ ನಡೆಸುವ ವಿನೂತನ ಪ್ರಯತ್ನಕ್ಕೆ ಮುಂದಾಗಿವೆ.
ಕೃಷಿ ವಿವಿಗಳ ಹೊಸ ಶೈಕ್ಷಣಿಕ ವರ್ಷಾರಂಭಕ್ಕೆ ದಿನಗಣನೆ ಶುರುವಾಗುತ್ತಿದೆ. ಆದರೆ, ಹಿಂದಿನ ತರಗತಿಗಳ ಒಂದು ಸೆಮಿಸ್ಟರ್ ಪರೀಕ್ಷೆ ಇನ್ನೂ ಬಾಕಿ ಇದೆ. ಅದನ್ನು ಹೇಗೆ ಮಾಡಬೇಕು ಎಂಬ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಎಲ್ಲ ಕೃಷಿ ವಿವಿಗಳ ಜತೆ ಸಮಾಲೋಚನೆ ನಡೆಸಿದ್ದು, ಆನ್ ಲೈನ್ ಪರೀಕ್ಷೆ ನಡೆಸುವ ನಿಲುವಿಗೆ ಬಂದಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯವು ಈಗಾಗಲೇ ಇದಕ್ಕೆ ಸಂಬಂಧಿ ಸಿ ಸಾಫ್ಟ್‌ವೇರ್ ಖರೀದಿಸಿದೆ. ಆ.14ರಿಂದ ಪರೀಕ್ಷೆ ಆರಂಭಿಸುತ್ತಿದ್ದು, ಆ.31ರೊಳಗಾಗಿ ಪರೀಕ್ಷೆ ಮುಗಿಸುವ ಉದ್ದೇಶ ಹೊಂದಲಾಗಿದೆ.
ಹೇಗಿರಲಿದೆ ಪರೀಕ್ಷೆ?: ಈ ಹಿಂದೆ ಕೂಡ ಸಾಕಷ್ಟು ಕಡೆ ಇಂಥ ಪರೀಕ್ಷೆಗಳು ನಡೆದಿದ್ದರೂ ಕೃಷಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದೆ. ಗುಣಮಟ್ಟದ ಸಾಫ್ಟ್‌ವೇರ್‌ನ ಐದು ಲೈಸೆನ್ಸ್ ಖರೀದಿಸಿ ವಿವಿ ಅಧಿಧೀನಕ್ಕೆ ಬರುವ ಕಾಲೇಜುಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರಥಮ, ದ್ವಿತೀಯ, ತೃತೀಯ ವರ್ಷ ಹಾಗೂ ಇಂಜಿನಿಯಂರಿಂಗ್, ತಾಂತ್ರಿಕ ವಿಭಾಗ ಸೇರಿದಂತೆ 1200 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆ ಇದಾಗಿರಲಿದ್ದು, 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅದರಲ್ಲಿ 35 ಅಂಕಗಳು ಪಠ್ಯಕ್ಕೆ ಸಂಬಂಧಿಸಿದ್ದರೆ, ಐದು ಅಂಕಗಳನ್ನು ಹಾಜರಾತಿ ಆಧಾರದಡಿ ನೀಡಲಾಗುವುದು. 10 ಅಂಕಗಳಿಗೆ ಒಂದು ವಿಷಯ ಮಂಡನೆ ಮಾಡಬೇಕಿದೆ. ಇನ್ನು ಬಾಕಿ 50 ಅಂಕಗಳನ್ನು ಹಿಂದಿನ ಸೆಮಿಸ್ಟರ್‌ಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೀಡಲಾಗುತ್ತಿದೆ.
ಆನ್‌ಲೈನ್ ಪರೀಕ್ಷಾ ತರಬೇತಿ: ಪರೀಕ್ಷೆ ನಡೆಯುವಾಗ ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗದಿರಲಿ ಎಂಬ ಕಾರಣಕ್ಕೆ ಈಗಾಗಲೇ ಎಲ್ಲ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಿದ್ದು, ತರಬೇತಿ ನೀಡಲಾಗುತ್ತಿದೆ. ಪ್ರಾತ್ಯಕ್ಷಿಕೆ ಮೂಲಕ ತಿಳಿ ಹೇಳಲಾಗುತ್ತಿದೆ. ಎಲ್ಲ ವಿಭಾಗದ ಉಪನ್ಯಾಸಕರಿಗೂ ಪರೀಕ್ಷೆಯನ್ನು ಹೇಗೆ ನಿರ್ವಹಿಸಬೇಕು ಎಂಬ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳು ತಾವು ಇದ್ದಲ್ಲಿಂದಲೇ ಪರೀಕ್ಷೆ ಬರೆಯಬೇಕು. ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಮೇಲ್ ಮಾಡಬೇಕು. ಅದಕ್ಕಾಗಿ 10 ನಿಮಿಷ ಕಾಲಾವಕಾಶ ನೀಡಲಾಗಿದೆ. ಬಳಿಕ ಉತ್ತರ ಪತ್ರಿಕೆಗಳನ್ನು ತಮ್ಮ ವಿಭಾಗಗಳಿಗೆ ಸಲ್ಲಿಸಬೇಕಿದೆ.
ಮೊದಲ ಹಂತದಲ್ಲಿ ರಾಯಚೂರು ವಿವಿ : ದೇಶದಲ್ಲಿ 71 ಕೃಷಿ ವಿಶ್ವವಿದ್ಯಾಲಯಗಳಿದ್ದು, ಐಸಿಎಆರ್ ಮೊದಲ ಹಂತದಲ್ಲಿ 20 ವಿವಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ ರಾಯಚೂರು ವಿವಿ ಕೂಡ ಸೇರಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿವೆ. ಇನ್ನು ಸೆಪ್ಟೆಂಬರ್‌ನಲ್ಲಿ ಹೊಸ ಶೈಕ್ಷಣಿಕ ವರ್ಷಾರಂಭವಾಗಲಿದ್ದು, ಕೊರೊನಾ ಸಮಸ್ಯೆ ಇನ್ನೂ ಇದ್ದಲ್ಲಿ ಆನ್‌ಲೈನ್ ತರಗತಿ ನಡೆಸಲು ವಿವಿ ಸಿದ್ಧವಾಗಿದೆ ಎನ್ನುತ್ತಾರೆ ವಿವಿ ಸಿಬ್ಬಂದಿ.
ಸುಖಾಸುಮ್ಮನೆ ಒಂದಷ್ಟು ಅಂಕ ನೀಡಿ ತೇರ್ಗಡೆ ಮಾಡುವುದಕ್ಕಿಂತ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಕಾರಣಕ್ಕೆ ಆನ್‌ಲೈನ್ ಪರೀಕ್ಷೆ ಕೈಗೊಳ್ಳಲಾಗಿದೆ. ಅದರ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ವಿದ್ಯಾರ್ಥಿಗಳಿಗೂ ನೆಟ್‌ವರ್ಕ್ ಸಮಸ್ಯೆ ಇರದ ಕಡೆ ಪರೀಕ್ಷೆ ಬರೆಯುವಂತೆ ತಿಳಿಸಲಾಗಿದೆ.
– ಎಂ.ಜಿ.ಪಾಟೀಲ್, ಕುಲಸಚಿವ, ಕೃಷಿ ವಿವಿ ರಾಯಚೂರು.
-ಸಿದ್ದಯ್ಯಸ್ವಾಮಿ ಕುಕುನೂರು