ಕಲಬುರಗಿ: ಪ್ರಸಕ್ತ ವರ್ಷದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಆನ್ ಲೈನ್ ಕಲಿಕಾ ಕೋರ್ಸ್ ಶುರು ಮಾಡಲಾಗಿದೆ ಎಂದು ವಿವಿಯ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ. ಬಸವರಸಜ ಗಾದಗಿ ತಿಳಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಆನ್ ಲೈನ್ ಕೋರ್ಸ್ ಗಳಿಗೆ ಯುಜಿಸಿ ಹಾಗೂ ಎಐಸಿಟಿಇ ಅನುಮೋದನೆ ನೀಡಿದೆ. ಹೀಗಾಗಿ ಪಿಜಿ, ಯುಜಿ ಹಾಗೂ ಡಿಪ್ಲೊಮಾ ಕೋರ್ಸ್ ಗಳನ್ನು ಪ್ರಸಕ್ತವಾಗಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಣೆ ನೀಡಿದರು.
ಸರ್ಕಾರಿ ಹಾಗೂ ಅರೆ ಸರ್ಕಾರಿ ಮತ್ತು ಖಾಸಗಿ ನೌಕರಿ ಮಾಡುವವರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ವಿವಿ ಕುಲಪತಿ ಪ್ರೊ. ವಿದ್ಯಾಶಂಕರ ಹಾಗೂ ವಿವಿಯ ಶೈಕ್ಷಣಿಕ ಮಂಡಳಿಯವರ ಆಸಕ್ತಿ ಮೇರೆಗೆ ಆನ್ಲೈನ್ ಕೋರ್ಸಗಳು ಪ್ರಾರಂಭವಾಗಲು ಕಾರಣವಾಗಿದ್ದು, ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಯುಜಿ ಪದವಿಯಲ್ಲಿ ಬಿಬಿಎ ( ಡಿಜಿಟಲ್ ಮಾರ್ಕೆಟಿಂಗ್) ಬಿಸಿಎ( ಡಾಟಾ ಅನಾಲಿಟಿಕ್ಸ್ ಮತ್ತು ಡಾಟಾ ಸೈನ್ಸ್ ) ಪಿಜಿಯಲ್ಲಿ ಎಂಬಿಎ ದಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್ , ಎಚ್ ಆರ್ ಎಂ,ಎಫ್ಎಂ, ಎಂಎಂ, ಎಂಸಿಎದಲ್ಲಿ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಮತ್ತು ಡಾಟಾ ಸೈನ್ಸ್, ಹಾಗೂ ಡಿಪ್ಲೋಮಾ ದಲ್ಲಿ ಸೈಬರ್, ಫೈನಾನ್ಸ್ ಎಚ್ ಆರ್, ಮಾರ್ಕೆಟಿಂಗ್, ಇನ್ವೆಸ್ಟ್ ಮೆಂಟ್, ರಿಟೈಲ್ ಮ್ಯಾನೆಜ್‌ಮೆಂಟ್ ಕೋರ್ಸ್ ಗ ಳಿವೆ ಎಂದು ಡಾ. ಗಾದಗಿ ವಿವರಣೆ ನೀಡಿದರು.
ವಿಟಿಯು ಈಗ ತಾಂತ್ರಿಕ ವಾಗಿ ಮತ್ತಷ್ಟು ಮುಂದುವರೆದಿದ್ದು, ಈಚೆಗೆ ಪ್ರಾದೇಶಿಕ ಕೇಂದ್ರದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸಿ ಸಹ ಪ್ರಾರಂಭಿಸಲಾಗಿದೆ ಎಂದರು. ಪ್ರಾದೇಶಿಕ ಕೇಂದ್ರದ ಡಾ.ಪ್ರಾಧ್ಯಾಪಕ, ಡಾ. ಶರಣಗೌಡ, ಪ್ರೊ. ವಿಶಾಲ ಸೇರಿದಂತೆ ಮುಂತಾದವರಿದ್ದರು.