Advertisement
ಆನ್‌ಲೈನ್‌ನಲ್ಲಿ ಚೆಂದಚೆಂದದ ಜಾಹೀರಾತು. ಆಕರ್ಷಕ ರೇಟು. ಭರ್ಜರಿ ರಿಯಾಯಿತಿ. ಇಷ್ಟು ಕಾಣುತ್ತಿದ್ದಂತೆಯೇ ಬಾಯಲ್ಲಿ ನೀರೂರದೆ ಇರುತ್ತದೆಯೇ? ಹಾಗಂತ ಎಲ್ಲವೂ ಪ್ರಾಮಾಣಿಕವೇ ಎಂಬುದನ್ನು ನಾವು ಮೊದಲು ಕೇಳಿಕೊಳ್ಳಬೇಕು. ಇ- ಕಾಮರ್ಸ್ ಬಗ್ಗೆ ಜನರಲ್ಲಿ ಕುತೂಹಲ, ಆಸಕ್ತಿ ಹೆಚ್ಚುತ್ತಿದ್ದಂತೆಯೇ ಅದರ ಲಾಭ ಪಡೆದುಕೊಳ್ಳಲು ಹೊಂಚು ಹಾಕುತ್ತಿರುವವರೂ ಅಲ್ಲಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಫ್ಲಿಪ್‌ಕಾರ್ಟ್ ಸೂಚನೆ ಹೊರಡಿಸಿತ್ತು. ಅಷ್ಟೇಅಲ್ಲ, ಫ್ಲಿಪ್‌ಕಾರ್ಟ್ ಹೆಸರಲ್ಲಿ ಇಮೇಲ, ಎಸ್ಸೆಮ್ಮೆಸ್, ವಾಟ್ಸಾಪ್ ಸಂದೇಶಗಳು ಬರುತ್ತವೆ. ಇದರ ಬಗ್ಗೆಯೂ ಎಚ್ಚರಿಕೆಯಿಂದ ಇರಿ ಎಂದು ತನ್ನ ಬ್ಲಾಗ್‌ನಲ್ಲಿ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಎಚ್ಚರಿಕೆ ನೀಡಿತ್ತು. ಸಾಮಾನ್ಯವಾಗಿ ಯಾವುದೇ ಜನಪ್ರಿಯ ಹೆಸರನ್ನು ಬಳಸಿಕೊಂಡು ಮೋಸಮಾಡುವ ಮಂದಿ ಎಲ್ಲೆಲ್ಲೂ ಇರುತ್ತಾರೆ. ಇದು ಇಕಾಮರ್ಸ್ ವಿಷಯದಲ್ಲೂ ಆಗುತ್ತಿದೆ.
ಸಾಮಾನ್ಯವಾಗಿ flipkart.dhamaka-offers.com, flipkart-bigbillion-sale.com ಹೆಸರಿನ ವೆಬ್‌ಸೈಟ್‌ಗಳು ವಾಟ್ಸಾಪ್ ಅಥವಾ ಇತರ ಮೆಸೆಂಜರ್‌ಗಳಲ್ಲಿ ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಫ್ಲಿಪ್‌ಕಾರ್ಟ್ ಹೆಸರಿರುತ್ತವೆ. ಆದರೆ, ಇವು ಫ್ಲಿಪ್‌ಕಾರ್ಟ್‌ನದ್ದಲ್ಲ. ಇದೇ ರೀತಿಯ ನೂರಾರು ವೆಬ್‌ಸೈಟ್‌ಗಳ ಹೆಸರುಗಳು ಚಾಲ್ತಿಯಲ್ಲಿವೆ. ಇದರಲ್ಲಿ ನಾವು ಯಾವುದಾದರೂ ಪ್ರಾಡಕ್ಟ್ ಖರೀದಿಗೆ ನಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ನೀಡಿದರೆ ಸಾಕು. ಇದನ್ನೇ ಬಳಸಿಕೊಂಡು ಅವರು ನಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಖಾಲಿ ಮಾಡಿರುತ್ತಾರೆ. ಮೆಸೆಂಜರ್‌ನಲ್ಲಿ ಮೋಸ
ಮೆಸೆಂಜರ್ ಎಂಬುದು ವ್ಯಕ್ತಿಗಳನ್ನು ನೇರವಾಗಿ ಸಂಪರ್ಕಿಸುವುದಕ್ಕೆ ಇರುವ ಉತ್ತಮ ಸಾಧನ. ಇವುಗಳ ಮೂಲಕ ಜನರನ್ನು ಸಂಪರ್ಕಿಸುವ ಮೋಸಗಾರರು ಲಿಂಕ್ ಕಳುಹಿಸುತ್ತಾರೆ. “32 ಜಿಬಿ ಪೆನ್‌ಡ್ರೈವ್ ಕೇವಲ 25 ರೂ.ಗೆ!’, “ಐಫೋನ್ ಕೇವಲ 5000 ರೂ.ಗೆ!’ ಎಂಬಂಥ ಜಾಹೀರಾತುಗಳು ಅಲ್ಲಿರುತ್ತವೆ. ಇದನ್ನು ನಂಬಿ ಆರ್ಡರ್ ಮಾಡಿದಿರಿ ಎಂದರೆ, ಹಣವೂ ಹೋಯ್ತು, ಉತ್ಪನ್ನವೂ ಸಿಗದು ಎಂಬಂಥ ಸ್ಥಿತಿ. ಹೀಗಾಗಿ, ಇಂಥ ಸಂದೇಶಗಳನ್ನು ನಿರ್ಲಕ್ಷಿಸುವುದು ಹಾಗೂ ಬ್ಲಾಕ್ ಮಾಡುವುದು ಒಳಿತು. ವಾಟ್ಸಾéಪ್‌ನಲ್ಲಂತೂ ಇಂಥ ದಂಧೆ ಜೋರು. ವಾಟ್ಸಾéಪ್ ಇಂಥವುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳಿಕ, ಈಗ ಕೊಂಚ ತಗ್ಗಿದೆ.
Related Articles
ಹಠಾತ್ತನೆ ಯಾರೋ ನಿಮಗೆ ಕರೆಮಾಡಿ, ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಲ್ಲಿ ಇಷ್ಟು ಕಡಿಮೆ ದರಕ್ಕೆ ಯಾವುದೋ ಉತ್ಪನ್ನ ಸಿಗುತ್ತದೆ ಎಂದು ನಂಬಿಸಬಹುದು. ಕನ್ನಡಲ್ಲಿ, ಇಂಗ್ಲಿಷ್ ಅಥವಾ ಹಿಂದಿಯಲ್ಲೋ ಮಾತನಾಡಿ ನಿಮ್ಮನ್ನು ಮರಳು ಮಾಡಬಹುದು. ಅಷ್ಟೇಅಲ್ಲ, ಉಚಿತ ಕೊಡುಗೆ ಇದೆ ಎಂದೂ ನಿಮ್ಮನ್ನು ನಂಬಿಸಬಹುದು. ಆದರೆ, ಇದನ್ನು ನಿಮಗೆ ಡೆಲಿವರಿ ಮಾಡುವುದಕ್ಕೂ ಮೊದಲು ಇಷ್ಟು ದುಡ್ಡನ್ನು ನೀವು ಈ ಖಾತೆಗೆ ಜಮೆಮಾಡಬೇಕು ಎಂದು ಬೇಡಿಕೆ ಇಡುತ್ತಾರೆ. ಈ ಬೇಡಿಕೆ ಇಟ್ಟಾಗ ನೀವು ಬೇಡಪ್ಪ ನಂಗೆ ನಿನ್ನ ಸಹವಾಸ ಎಂದು ಕಾಲ್ ಕಟ್ ಮಾಡಿ ಸುಮ್ಮನಾದರೆ ಬಚಾವ್. ಇಲ್ಲವಾದರೆ ನಿಮ್ಮ ಜೇಬಿಗೆ ಕತ್ತರಿ ಬಿದ್ದಂತೆ!
Advertisement
ನಕಲಿ ಇಮೇಲ್ಗಳುಫಿಶಿಂಗ್ ಎಂಬುದು ಇಂಟರ್ನೆಟ್ ಚಾಲ್ತಿಗೆ ಬಂದ ಲಾಗಾಯ್ತಿನಿಂದಲೂ ಇದೆ. ಎಂಥ ಮೋಸವನ್ನೇ ತಡೆದರೂ ಇದನ್ನು ತಡೆಯಲು ಸಾಧ್ಯವಾಗಿಲ್ಲ. ಕೇವಲ ನಾವು ಎಚ್ಚರವಾಗಿದ್ದರಷ್ಟೇ ಇದರಿಂದ ಬಚಾವಾಗಬಹುದು. ಈ ಫಿಶಿಂಗ್ ವಿಧಾನ ಬಳಸಿ ನಮ್ಮ ಯಾವ ಮಾಹಿತಿಯನ್ನಾದರೂ ಕದಿಯಬಹುದು. ಇದೊಂದು ರೀತಿಯಲ್ಲಿ ನಾವೇ ನಮ್ಮ ಮಾಹಿತಿಯನ್ನು ಕಳ್ಳರ ಕೈಗೆ ಕೊಟ್ಟು ಕೂತಂತೆ. ಫ್ಲಿಪ್‌ಕಾರ್ಟ್‌ನ ಯಾವುದೋ ಉತ್ಪನ್ನದ ಆಫರ್ ಲಿಂಕ್ ಅನ್ನು ನಿಮಗೆ ಕಳುಹಿಸಿ ಇದನ್ನು ಆರ್ಡರ್ ಮಾಡಿ ಎಂದರೆ, ನೀವು ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟು ನಿಮ್ಮ ಕಾರ್ಡ್ ಮಾಹಿತಿ ನೀಡಿದರೆ ನೀವು ಕಣ್ಣುಮುಚ್ಚಿ ತೆರೆಯುವುದರೊಳಗೆ ಖಾತೆಯಲ್ಲಿದ್ದ ಕಾಸುಮಾಯ. ನಮ್ಮ ಟೈಮ್ ಅನ್ನು ಕೊಲ್ಲುತ್ತಾರೆ.
ಇತ್ತೀಚೆಗೆ ಹೊಸ ಮೋಸವೊಂದು ನಡೆಯುತ್ತಿದೆ. ಯಾವುದೋ ಆಫರ್ ಹೆಸರಿನಲ್ಲಿ ಆಟವಾಡುವಂತೆ ನಿಮ್ಮನ್ನು ಪ್ರಚೋದಿಸಲಾಗುತ್ತದೆ. “ಸ್ಪಿನ್ ದಿ ವ್ಹೀಲ್’ ಎಂಬ ಗೇಮ್ ಆಡಿದರೆ, ನಿಮಗೆ ಉಚಿತ ಉಡುಗೊರೆಗಳು, ನಗದು ಬಹುಮಾನಗಳು ಹಾಗೂ ಇತರ ಆಕರ್ಷಕ ಕೊಡುಗೆ ಸಿಗುತ್ತದೆ ಎಂದು ಹೇಳುತ್ತಾರೆ. ವಾಸ್ತವವಾಗಿ, ಇದರಿಂದ ಏನೂ ಸಿಗುವುದಿಲ್ಲ; ಸಮಯವನ್ನು ಕಳೆದುಕೊಳ್ಳುತ್ತೇವಷ್ಟೇ. ಆದರೆ, ಹಣ ಕಳೆದುಕೊಳ್ಳುವುದಿಲ್ಲ. ಅಂದರೆ, “ಸ್ಪಿನ್ ದಿ ವ್ಹೀಲ್’ ಗೇಮ್ ಆಡಿ ಎಂದು ಕೇಳುವ ಈ ಲಿಂಕ್‌ಗಳು, ನಾವು ಎಷ್ಟು ಹೊತ್ತು ಸ್ಪಿನ್ ದಿ ವ್ಹೀಲ್ ಆಡಿದರೂ ಅವರು ಹೇಳಿದ ಉತ್ಪನ್ನವನ್ನು ಬುಕ್ ಮಾಡಲು ಸಾಧ್ಯವೇ ಆಗುವುದಿಲ್ಲ. ಇಲ್ಲಿ ಮೋಸಗಾರರಿಗೆ ಅವರ ತಾಣದಲ್ಲಿ ನಮ್ಮ ಸಮಯ ಕೊಲ್ಲುವುದೇ ಬೇಕಾಗಿರುತ್ತದೆ. ಮಾರಾಟಗಾರರಿಂದಲೇ ಮೋಸ
ಇದು ಸಾಮಾನ್ಯವಾಗಿ ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಂಥ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು ಮಾಡುವ ಮೋಸ. ನೀವು ಯಾವುದೇ ಸಾಮಗ್ರಿಯನ್ನು ಖರೀದಿಸಿದಾಗ ಅದರ ಜೊತೆಗೆ ಒಂದು ಪಾಂಪ್ಲೇಂಟ್ ಸೇರಿಸಲಾಗುತ್ತದೆ. ನೀವು ಬೇರೆ ಯಾವುದೋ ವೆಬ್‌ಸೈಟ್‌ನಲ್ಲಿ ಸಾಮಗ್ರಿಯನ್ನು ಖರೀದಿಸಿದರೆ ಇಷ್ಟು ಭಾರಿ ರಿಯಾಯಿತಿ ನೀಡಲಾಗುತ್ತದೆ ಎಂಬ ಆಮಿಷ ಒಡ್ಡಲಾಗುತ್ತದೆ. ಇಷ್ಟಾದರೆ ಪರವಾಗಿರಲಿಲ್ಲ. ಆದರೆ, ಅವರು ನೇರವಾಗಿ ತಮ್ಮ ಖಾತೆಗೆ ಇಷ್ಟು ಹಣ ಕಳುಹಿಸಬೇಕು ಎಂಬ ಬೇಡಿಕೆಯೂ ಇರುತ್ತದೆ. ಇಂಥ ವ್ಯವಹಾರಕ್ಕೆ ನೀವು ಒಪ್ಪಿಕೊಂಡು ಹಣಕೊಟ್ಟ ನಂತರ ನಿಮಗೆ ಪ್ರಾಡಕ್ಟ್ ಬರುವುದಿಲ್ಲ. ಆಮೇಲೆ ಅವರನ್ನು ಸಂಪರ್ಕಿಸಲೂ ಸಾಧ್ಯವಾಗುವುದಿಲ್ಲ. ಯಾವುದೇ ಪ್ರಾಡಕ್ಟ್ ಕೈಗೆ ಬರುತ್ತಿದ್ದಂತೆಯೇ ಅದರ ಪ್ಯಾಕ್ ತೆರೆದು ಎಲ್ಲವೂ ಸರಿಯಾಗಿದೆಯೇ, ಎಲ್ಲ ಫೀಚರ್‌ಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಯಾಕೆಂದರೆ, ಪ್ರತಿ ಪ್ರಾಡಕ್ಟ್ಗೂ ರಿಟರ್ನ್ ಮಾಡುವುದಕ್ಕೆ ನಿಗದಿತ ಕಾಲಾವಕಾಶ ಇರುತ್ತದೆ. ಸರಿ ಇಲ್ಲವಾದರೆ ಆ ಸಮಯದೊಳಗೆ ವಾಪಸ್ ಮಾಡಬೇಕೇ ಹೊರತು, ನಂತರ ವಾಪಸ್ ಮಾಡಲಾಗದು. ಹೀಗಾಗಿ, ಮೊದಲು ಪರಿಶೀಲನೆ ಮಾಡಿಕೊಂಡು ಅದು ಸರಿಯಾಗಿದ್ದರೆ ಮಾತ್ರ ಇಟ್ಟುಕೊಳ್ಳಬೇಕು. ನಮ್ಮ ಕಣ್ಣೇ ಮೋಸ ಮಾಡುತ್ತೆ!
– ಇ- ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಪ್ರಾಡಕ್ಟ್ ಆರ್ಡರ್ ಮಾಡುವಾಗ ಜಾಗೃತೆ ವಹಿಸಬೇಕು.
– ಬಹುತೇಕ ಸಂದರ್ಭದಲ್ಲಿ ನಾವು ನಮಗೆ ಬೇಕಾದ ಉತ್ಪನ್ನಕ್ಕಿಂತ ಬೇರೆ ಉತ್ಪನ್ನವನ್ನು ಆರ್ಡರ್ ಮಾಡುವ ಸಾಧ್ಯತೆ ಇರುತ್ತೆ.
– ರಿಟರ್ನ್ ಆಪ್ಷನ್ ಇರುತ್ತದೆಯಾದರೂ, ಅನಗತ್ಯವಾಗಿ ರಿಟರ್ನ್ ಮಾಡುವುದು ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ಹೊರೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.
– ಸಾಮಾನ್ಯವಾಗಿ ಜನರು ಮೋಸ ಹೋಗುವುದು ಕಲರ್‌ನಲ್ಲಿ.
– ನಮಗೆ ಬೇಕೆಂದ ಕಲರ್ ಬಟ್ಟೆಯನ್ನೋ ಅಥವಾ ಇತರ ವಸ್ತುವನ್ನು ನಾವು ಬುಕ್ ಮಾಡಿದರೆ, ವಾಸ್ತವವಾಗಿ ಕೈಗೆ ಬರುವ ಉತ್ಪನ್ನದ ಬಣ್ಣವೇ ಬೇರೆ ಆಗಿರುತ್ತದೆ.
– ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾಣುವ ಕಲರ್‌ಗೂ ವಾಸ್ತವ ಕಲರ್‌ಗೂ ಸ್ವಲ್ಪ ವ್ಯತ್ಯಾಸವಿರುತ್ತದೆ. ಇದು ಬಟ್ಟೆಯ ವಿಚಾರದಲ್ಲಿ ಹೆಚ್ಚು ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಕೃಷ್ಣಭಟ್