Advertisement

ನಿರಂತರ ಆನ್‌ಲೈನ್‌ ತರಗತಿ; ವಿದ್ಯಾರ್ಥಿಗಳಿಗೆ ಕಿರಿಕಿರಿ!

08:55 PM Jun 24, 2021 | Team Udayavani |

ಮಹಾನಗರ: ಕೋವಿಡ್ ಆತಂಕದಿಂದಾಗಿ ಬಹುದೊಡ್ಡ ಸಮಸ್ಯೆ ಎದುರಿಸಿರುವ ಶಿಕ್ಷಣ ಕ್ಷೇತ್ರಕ್ಕೆ ಆಧಾರ ವಾಗಿರುವ ಆನ್‌ಲೈನ್‌ ಶಿಕ್ಷಣ ಕ್ರಮವೇ ಇದೀಗ ಮಕ್ಕಳಿಗೆ ಹೊಸ ಕಿರಿಕಿರಿ ಸೃಷ್ಟಿಸುತ್ತಿದೆ. ಪ್ರತೀದಿನ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಮಕ್ಕಳು ಕಂಪ್ಯೂಟರ್‌/ ಮೊಬೈಲ್‌ನಲ್ಲಿ ಆನ್‌ಲೈನ್‌ ಮುಖೇನ ಕಲಿಯುತ್ತಿರುವ ಕಾರಣದಿಂದ ಮಕ್ಕಳಿಗೆ ಒತ್ತಡ ಅಧಿಕವಾಗುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ.

Advertisement

ರಾಜ್ಯಪಠ್ಯಕ್ರಮದ ಶಿಕ್ಷಣ ವ್ಯವಸ್ಥೆ ಇನ್ನಷ್ಟೇ ಆರಂಭವಾಗಬೇಕಿದೆ. ಭೌತಿಕ ತರಗತಿ ಆರಂಭವಾಗುವವರೆಗೆ ಆನ್‌ಲೈನ್‌ ತರಗತಿಗಳು ನಡೆಯಲಿದ್ದು, ಕೆಲವೇ ದಿನದಲ್ಲಿ ಆರಂಭವಾಗಲಿದೆ. ಆದರೆ ಸಿಬಿಎಸ್‌ಸಿ ಸಹಿತ ಕೇಂದ್ರೀಯ ಪಠ್ಯಕ್ರಮದ ಆನ್‌ಲೈನ್‌ ತರಗತಿಗಳು ಈಗಾಗಲೇ ಆರಂಭವಾಗಿದೆ. ಮಂಗಳೂರಿನ ಹಲವು ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳು ಶುರುವಾಗಿವೆ.

ಕೆಲವು ಶಾಲೆಗಳಲ್ಲಿ ಬೆಳಗ್ಗೆ 8 ಗಂಟೆಗೆ ಆನ್‌ಲೈನ್‌ ತರಗತಿ ಆರಂಭವಾಗುತ್ತಿದೆ. ಮಧ್ಯಾಹ್ನ 12 ಗಂಟೆಯವರೆಗೂ ಇದು ನಡೆಯುತ್ತದೆ. ಇದರ ಮಧ್ಯೆ 4 ತರಗತಿಗಳು ಇರುತ್ತದೆ. ಒಂದು ತರಗತಿ ಆದ ಬಳಿಕ ಕೇವಲ 5 ಅಥವಾ 10 ನಿಮಿಷ ಮಾತ್ರ ಬಿಡುವು ಇದೆ. ಉಳಿದಂತೆ 4 ತರಗತಿಗಳಿಗಾಗಿ ಮಕ್ಕಳು ಕಂಪ್ಯೂಟರ್‌/ಮೊಬೈಲ್‌ಗೆ ಸೀಮಿತಗೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಒತ್ತಡ ಅಧಿಕವಾಗುತ್ತಿದೆ ಎಂದು ಮಕ್ಕಳ ಹೆತ್ತವರು ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳ ಸಂಖ್ಯೆ ಅಧಿಕವಿರುವ ಕಾರಣದಿಂದ ತರಗತಿ ನಿರಂತರವಾಗಿ ಮಾಡಲೇಬೇಕಾದ ಅನಿವಾರ್ಯವಿದೆ. ಪ್ರತೀದಿನ ಮನೋರಂಜನ ಚಟುವಟಿಕೆ ಕೂಡ ನಡೆಸಲಾಗುತ್ತಿದೆ. ಶಾಲೆಯ ವಾತಾವರಣವನ್ನೇ ಆನ್‌ಲೈನ್‌ ಮೂಲಕ ರೂಪಿಸಲಾಗುತ್ತಿದೆ ಎಂದು ಶಾಲೆಯ ಪ್ರಮುಖರು ವಿವರಿಸಿದ್ದಾರೆ.

ನೆಟ್‌ವರ್ಕ್‌ ಸಮಸ್ಯೆ :

Advertisement

ನೆಟ್‌ವರ್ಕ್‌ ಕಿರಿಕಿರಿ ನಗರ ಪ್ರದೇಶವನ್ನೂ ಬಿಟ್ಟಿಲ್ಲ. ಮಂಗಳೂರಿನ ಕೆಲವು ಕಡೆಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ಇದು ಶಿಕ್ಷಕರಿಗೂ ತಲೆನೋವಾಗಿದೆ. ನೆಟ್‌ವರ್ಕ್‌ ಇಲ್ಲದೆ ಮಕ್ಕಳಿಗೂ ಕೆಲವೊಮ್ಮೆ ಪಾಠದಲ್ಲಿ ಕೆಲವು ಅಂಶಗಳು ಕೈತಪ್ಪುತ್ತಿವೆ ಎಂಬ ದೂರು ಇದೆ.ಹೀಗೂ ಮಾಡಬಹುದು :

  • ಒಂದು ಪಠ್ಯದ ಅವಧಿ ಹಾಗೂ ಇನ್ನೊಂದರ ಮಧ್ಯೆ ಕನಿಷ್ಠ 20 ನಿಮಿಷ ಬಿಡುವು ಇರಲಿ
  • ಒಂದು ಪಠ್ಯದ ತರಗತಿ ಅವಧಿ 30/45 ನಿಮಿಷಕ್ಕೆ ಸೀಮಿತಗೊಳಿಸಿದರೆ ಉತ್ತಮ
  • ಒಂದು ದಿನದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ಒಳಗೆ ಪಠ್ಯ ಪೂರ್ಣಗೊಳಿಸುವ ಬದಲು ವಿಂಗಡಿಸಿ (ಬೆಳಗ್ಗೆ-ಮಧ್ಯಾಹ್ನ ಅನಂತರ) ಮಾಡಿದರೆ ಉತ್ತಮ.
  • ವಿದ್ಯಾರ್ಥಿಗಳ ಹಿತದೃಷ್ಟಿ-ಮಾನಸಿಕ ಒತ್ತಡ ಕಡಿಮೆಗೊಳಿಸಲು ಮನೋರಂಜನ ಚಟುವಟಿಕೆಗೂ ಹೆಚ್ಚು ಆದ್ಯತೆ ಇರಲಿ.
  • ಪ್ರತೀ ವಿದ್ಯಾರ್ಥಿಯ ಹೆಸರನ್ನು ಪ್ರತೀ ಪಠ್ಯದ ವೇಳೆ ಶಿಕ್ಷಕರು ಉಲ್ಲೇಖೀಸಿ ಪ್ರೇರೇಪಿಸಿದರೆ ಉತ್ತಮ.

ಆನ್‌ಲೈನ್‌ ತರಗತಿ ಸದ್ಯದ ಪರಿಸ್ಥಿತಿಗೆ ಅನಿವಾರ್ಯ ಆಗಿದ್ದರೂ ನಿರಂತರ ಆನ್‌ಲೈನ್‌ನಲ್ಲಿ ಭಾಗವಹಿಸಿದರೆ ಕಣ್ಣಿಗೆ ಸಮಸ್ಯೆ ಆಗಬಹುದು ಅಥವಾ ಮಗುವಿಗೆ ಒತ್ತಡವೂ ಆಗಬಹುದು. ಹೀಗಾಗಿ ಆನ್‌ಲೈನ್‌ ತರಗತಿಯನ್ನು ಬೆಳಗ್ಗೆ-ಮಧ್ಯಾಹ್ನ ಅನಂತರ ಎಂಬ ನೆಲೆಯಲ್ಲಿ ವಿಂಗಡಿಸುವುದು ಉತ್ತಮ. ಜತೆಗೆ ಮಕ್ಕಳ ಮನೋವಿಕಾಸಕ್ಕಾಗಿ ಶಾಲೆಯಲ್ಲಿ ನಡೆಸುವಂತಹ ನೃತ್ಯ, ಸಂಗೀತ, ಯೋಗ, ಆಟೋಟ ಚಟುವಟಿಕೆಯನ್ನು ಆನ್‌ಲೈನ್‌ ಮೂಲಕ ನೀಡಿದರೆ ಉಪಯೋಗವಾದೀತು. ಕಣ್ಣು, ಆಹಾರ ಕ್ರಮ ಸಹಿತ ಆರೋಗ್ಯದ ಬಗ್ಗೆಯೂ ತಿಳಿವಳಿಕೆ ನೀಡಬಹುದು. ಆನ್‌ಲೈನ್‌ ಸಮಯದಲ್ಲಿ ಜಂಕ್‌ಫುಡ್‌ ತಿನ್ನದಂತೆ, ಶಾಲೆಯಲ್ಲಿ ಪಾಲ್ಗೊಳ್ಳುವಾಗ ಶಿಸ್ತು ಪಾಲಿಸಿದ ರೀತಿಯಲ್ಲಿಯೇ ಆನ್‌ಲೈನ್‌ ತರಗತಿಗೂ ಆದ್ಯತೆ ನೀಡಬೇಕು. ಇದರ ಜತೆಗೆ ಎರಡು ವಾರಕ್ಕೊಮ್ಮೆ ಹೆತ್ತವರ ಜತೆಗೆ ಆನ್‌ಲೈನ್‌ ಮುಖೇನ ಶಿಕ್ಷಕರು ಮಾತುಕತೆ ನಡೆಸಿದರೆ ಉತ್ತಮ. ವಿದ್ಯಾರ್ಥಿಗಳಿಗೆ ನಿಗದಿತ ಟಾಸ್ಕ್ ಅನ್ನು ಮೊದಲೇ ಕೊಡುವ ಬದಲು ತರಗತಿ ಮಧ್ಯೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನೀಡಿದರೆ ಅವರು ಹೆಚ್ಚು ಸಕ್ರಿಯರಾಗಲು ಸಾಧ್ಯ.  –ಡಾ| ಅನಂತ್‌ ಪೈ, ಮಕ್ಕಳ ತಜ್ಞರು, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next