Advertisement

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

01:44 PM Aug 09, 2021 | Team Udayavani |

ಆಗತಾನೆ ಆನ್ ಲೈನ್ ತರಗತಿ ಮುಗಿಸಿ  ಪುನಃ ಆಫ್ ಲೈನ್ ತರಗತಿ ಕೇಳಲು  ಕಾಲೇಜಿಗೆ ಬಂದ ಸಮಯವದು. ತರಗತಿಯವರನ್ನು ಕೇವಲ ಆನ್ ಲೈನ್ ಅಲ್ಲಿ ಮಾತಾಡಿಸಿ ಗೊತ್ತಿತ್ತೇ ಹೊರತು ಮುಖಪರಿಚಯ ಇರಲಿಲ್ಲ. ಆದರೂ ವಾಟ್ಸಾಪ್, ಫೇಸ್ ಬುಕ್ ನಲ್ಲಿ ತುಂಬಾ ಚಾಟ್ ಗಳು ನೆಡಿದಿದ್ದವು. ಒಮ್ಮೆಯಾದರು ಮುಖಾ ಮುಖಿ ಮಾತನಾಡಬೇಕು ಎಂಬ ಹಂಬಲ ತುಂಬಾ ಕಾಡುತಿತ್ತು ನಮ್ಮನ್ನು. ಆದರೆ ಅದಕ್ಕೊಂದು ಕಾಲ ಕೂಡಿಬರಬೇಕು ಎಂಬ ಕಾರಣಕ್ಕೆ ಸುಮ್ಮನಿದ್ದೆವು ಅಷ್ಟೇ.

Advertisement

ನಾವು ನಮ್ಮ ಆನ್ ಲೈನ್  ತರಗತಿಯಲ್ಲಿ  ಎಷ್ಟೇ ಮಾತನಾಡಿಕೊಂಡರು, ಒಬ್ಬರನೊಬ್ಬರು ಕಾಲೆಳೆದುಕೊಂಡರು ಮುಖಾ ಮುಖಿಯ ಭೇಟಿಯಾದಾಗ ಸಿಗಬೇಕಾಗಿದ್ದ ಖುಷಿ ಸಿಗುತ್ತಿರಲಿಲ್ಲ. ಹೀಗೆ ನಮ್ಮ ಆನ್ ಲೈನ್ ತರಗತಿ ಮುಂದುವರೆದುಕೊಂಡು ಹೋಯಿತು. ಇನ್ನೇನು ನಮ್ಮ ಒಂದು ಸೆಮಿಸ್ಟರೇ ಪೂರ್ಣಗೊಂಡು ಬಿಡುತ್ತದೆಯೇನೋ ಎನ್ನುವ ಸಂದರ್ಭದಲ್ಲಿ  ಆಪ್ ಲೈನ್ ತರಗತಿಗೆ ಸರ್ಕಾರ ಅನುಮತಿ ನೀಡಿತು.

ಇದನ್ನೂ ಓದಿ : ಮಧ್ಯಪ್ರದೇಶ ಕಲಾಪದಲ್ಲಿ “ಪಪ್ಪು, ಸರ್ವಾಧಿಕಾರಿ” ಶಬ್ದ ಬಳಕೆಗೆ ನಿಷೇಧ;ಕಿರುಹೊತ್ತಗೆ ರಿಲೀಸ್!

ಯಾರ ಮುಖವನ್ನು ಕಾಣದೆ ಬೇಸರಗೊಂಡಿದ್ದ ನಮಗೆ ಎಲ್ಲರ ಮುಖವನ್ನು ಕಾಣುವ ಭಾಗ್ಯಬಂದಿತ್ತು. ನಾವೆಲ್ಲರೂ ಖುಷಿ ಖುಷಿಯಾಗಿಯೇ ಆಪ್ ಲೈನ್ ತರಗತಿಗೆ ಬರುವ ಎಲ್ಲಾ ತಯಾರಿಯನ್ನು ನಡೆಸಿ ಅಂತೂ ಇಂತೂ ಕಾಲೇಜಿನ ಮೆಟ್ಟಿಲನ್ನು ಎರಿದೆವು. ಹೊಸ ಜಾಗ, ಹೊಸ ಮುಖಗಳು, ಹೊಸ ದಿನಚರಿಗಳು ಹೀಗೆ ಎಲ್ಲವೂ ಹೊಸದಾಗಿ ಪ್ರಾರಂಭವಾಗಿತ್ತು. ನಾವು ಆ ಹೊಸತನಕ್ಕೆ ಒಗ್ಗಿಕೊಂಡು ಒಂದು ಹೆಜ್ಜೆ ಮುಂದೆಯಿಡುವ ದಾವಂತದಲ್ಲಿ ಸಾಗುತ್ತಿದ್ದೆವು.

ಬರಿ ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ನೋಡಿದ ಮುಖವನ್ನು ಎಲ್ಲರೂ ಅಂದುಕೊಂಡಂತೆ ಮುಖಾ ಮುಖಿ ಭೇಟಿಮಾಡಿದೆವು. ಕಾಲೇಜಿನ ಮೊದಲ ದಿನವಂತು ಬರಿ ಎಲ್ಲರ ಮುಖ ನೋಡಿಕೊಂಡು ಆನ್ ಲೈನ್ ತರಗತಿಯಲ್ಲಿ ಹೊಡೆದ ಡೈಲಾಗ್ ಗಳನ್ನೂ ನೆನೆದುಕೊಂಡು, ತಮಾಷೆ ಮಾಡಿಕೊಂಡಿಯೇ ಕಳೆದು ಬಿಟ್ಟೆವು. ಎರಡನೇ ದಿನ ಸ್ವಲ್ಪ ಮುಖ ಪರಿಚಯವಾದ್ದರಿಂದ ಮೊದಲ ದಿನಕ್ಕಿಂತಲೂ ಹೆಚ್ಚಿನ ಮಾತು ಕಥೆಗಳು ನಡೆದವು.

Advertisement

ಹೀಗೆ ನಮ್ಮ ಮೊದಲ ವರ್ಷದ ಕಾಲೇಜ್ ದಿನಗಳು ತಮಾಷೆ, ಖುಷಿ, ಪಾಠ, ಕಲಿಯುವಿಕೆ ಇತ್ಯಾದಿಗಳಿಂದ  ಸಾಗುವಾಗ ಮತ್ತೆ ಬ್ರೇಕಿಂಗ್ ನ್ಯೂಸ್ ಬಂತು ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದರಿಂದ ಶಾಲಾ ಕಾಲೇಜುಗಳನ್ನು ಮುಚ್ಚಿ ಆನ್ ಲೈನ್ ತರಗತಿಯನ್ನು ತೆರೆದು ಪಾಠಮಾಡಬೇಕು ಎಂದು. ಪ್ರೀತಿಯಿಂದ ಪಡೆದ ತುತ್ತನ್ನು ಗಂಟಲೊಳಗೆ ಹಾಕಿ ಅರಗಿಸಿಕೊಳ್ಳುವುದರ ಒಳಗೆ ಮತ್ತೊಂದು ಪ್ರೀತಿಯ ತುತ್ತನ್ನು ಪಡೆಯುವಲ್ಲಿ ಸೋತಹಾಗಾಗಿತ್ತು ನಮ್ಮ ಜೀವನ.

ಇನ್ನೇನು ಮಾಡುವುದು ಮತ್ತೆ ಎಲ್ಲಾ ಗಂಟು ಮೂಟೆ ಕಟ್ಟಿಕೊಂಡು ಪುನಃ ನಮ್ಮ ನಮ್ಮ ಮನೆಗೆ ತೆರಳಿ ಬಂದೆವು. ನಾವು ಕಂಡ ಪ್ರವಾಸದ ಕನಸು, ಹುಟ್ಟುಹಬ್ಬದ ಆಚರಣೆ, ಕುಡಿತಿನ್ನುವ ಊಟ, ಪಠ್ಯಕ್ಕೆ ಸಂಬಂಧಿಸಿದ ಪಾಠ ಎಲ್ಲವೂ ಮತ್ತೆ ಛಿಧ್ರ ಛಿಧ್ರವಾದವು. ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್ ಎನ್ನುವ ಹಾಗೆ ನಮ್ಮಲ್ಲೇ ನಾವೇ ಈ ಕೊರೋನಾಕ್ಕೆ ಬೈದು ಸುಮ್ಮನಾದೆವು.

ಈಗ ಮತ್ತದೆ ಆನ್ ಲೈನ್ ತರಗತಿ, ಅದೆ ವಿಡಿಯೋ ಕಾಲ್, ಯಾರಾದರೂ ಕಾಲೆಳೆದಾಗ ‘ಕಾಲೇಜ್ ಶುರುವಾಗಲಿ ನಿನ್ನಾ ನೋಡ್ಕೋತೀನಿ’ ಎಂಬ ಮಾತು, ಕಾಲೇಜ್ ಪ್ರಾರಂಭ ಆದಕೂಡಲೇ ಮುರಿದ ಕನಸಿಗೆ ರೆಕ್ಕೆ ಕಟ್ಟುವ ಆಸೆ. ಹೀಗೆ ಎಲ್ಲವೂ ನಡೆಯುತ್ತಿದೆ. ಇನ್ಯಾವಾಗ ನಮ್ಮ ಬೇಟಿ ಎಂಬ ಪ್ರಶ್ನೆ ಮಾತ್ರ ಎಲ್ಲರ ಮನದಲ್ಲಿ ಹಾಗೆ ಉಳಿದುಕೊಂಡಿದೆ.

-ಮಧುರಾ ಎಲ್. ಭಟ್ಟ

ಎಸ್ ಡಿ ಎಮ್ ಕಾಲೇಜು, ಉಜಿರೆ

ಇದನ್ನೂ ಓದಿ : ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಸಭೆಯಲ್ಲಿ ಹೈಡ್ರಾಮ: ಆಯನೂರು ಮಂಜುನಾಥ್ ಗಲಾಟೆ

Advertisement

Udayavani is now on Telegram. Click here to join our channel and stay updated with the latest news.

Next