ಮೈಸೂರು: ಸರ್ಕಾರದ ಆ ಕಾಲೇಜಿನಲ್ಲಿ ಇಬ್ಬರನ್ನು ಹೊರತುಪಡಿಸಿ ಎಲ್ಲರೂ ಮುಸ್ಲಿಂ ವಿದ್ಯಾರ್ಥಿನಿಯರು. ಹಿಜಾಬ್ ತೆಗೆದಿಟ್ಟು ತರಗತಿ ಪ್ರವೇಶಿಸಲು ಆ ವಿದ್ಯಾರ್ಥಿನಿಯರು ಸಿದ್ಧರಿಲ್ಲ. ಇರುವ ಇಬ್ಬರುಹಿಂದೂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿಲ್ಲ.ಹೀಗಾಗಿ, ಈಗ ಆ ಕಾಲೇಜು ಆನ್‌ಲೈನ್ ಕ್ಲಾಸ್ ಮೊರೆ ಹೋಗಿದೆ.
ಇದು ಮೈಸೂರಿನ ರಾಜೀವ್‌ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸ್ಥಿತಿ. ಈ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ವಿಷಯವನ್ನು ಬೋಧಿಸಲಾಗುತ್ತದೆ. ಕಾಲೇಜಿನ 293 ವಿದ್ಯಾರ್ಥಿನಿಯರಲ್ಲಿ 291 ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಇನ್ನು ಇಬ್ಬರು ಹಿಂದೂ ಧರ್ಮದವರು.
ಹಿಂದೂ ಧರ್ಮಕ್ಕೆ ಸೇರಿದ ಈ ಇಬ್ಬರು ವಿದ್ಯಾರ್ಥಿನಿಯರು ಕಾಲೇಜಿಗೆ ಕೆಲವು ದಿನಗಳಿಂದ ಬರುತ್ತಿಲ್ಲ. ಹಿಜಾಬ್ ವಿವಾದದಲ್ಲಿ ಕಾಲೇಜು ಬಂದ್ ಆಗಿ ಪುನಾರಂಭವಾದ ದಿನ ಕಾಲೇಜಿಗೆ ಬಂದಿದ್ದೇ 14 ವಿದ್ಯಾರ್ಥಿನಿಯರು. ಇವರು ಹಿಜಾಬ್ ಧರಿಸಿ ಬಂದಿ ದ್ದರಿಂದ ಕಾಲೇಜಿನ ಸಿಬ್ಬಂದಿ ತರಗತಿಗೆ ಪ್ರವೇಶ ನೀಡಲಿಲ್ಲ. ಹೀಗಾಗಿ, ಈ ವಿದ್ಯಾರ್ಥಿನಿಯರು ಮನೆಗೆ ವಾಪಸಾದರು. ಮರುದಿನದಿಂದ ಈ ಕಾಲೇಜಿಗೆ ವಿದ್ಯಾರ್ಥಿನಿಯರೇ ಬರುತ್ತಿಲ್ಲ. ಹಿಜಾಬ್ ತೆಗೆದಿಟ್ಟು ತರಗತಿ ಪ್ರವೇಶಿಸಲು ಮುಸ್ಲಿಂ ವಿದ್ಯಾರ್ಥಿನಿಯರು ಸಿದ್ಧರಿಲ್ಲ. ಕಾಲೇಜಿನ ಪ್ರಾಂಶುಪಾಲ ಡಿ.ಧನ್ವಂತರಿ ಅವರು ವಿದ್ಯಾರ್ಥಿನಿಯರ ಪೋಷಕರ ಸಭೆಯನ್ನು ಆನ್‌ಲೈನ್‌ನಲ್ಲಿ ನಡೆಸಿದರು.
ಆನ್‌ಲೈನ್ ಪಾಠಕ್ಕೆ ಅನುಮತಿ: ಈ ಆನ್‌ಲೈನ್ ಸಭೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಪಾಠ ಮಾಡುವಂತೆ ಮನವಿ ಮಾಡಿದರು. ಪೋಷಕರಈ ಮನವಿಯನ್ನು ಧನ್ವಂತರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ವಿದ್ಯಾರ್ಥಿನಿಯರಿಗೆ ಆನ್‌ಲೈನ್ ಕ್ಲಾಸ್ ನಡೆಸಲು ಅನುಮತಿಸಲಾಯಿತು. ಅಧ್ಯಾಪಕರು ಪ್ರತಿ ದಿನ ಕಾಲೇಜಿಗೆ ಆಗಮಿಸಿ ಆನ್‌ಲೈನ್ ಮೂಲಕ ವಿದ್ಯಾರ್ಥಿನಿಯರಿಗೆ ಪಾಠ ಮಾಡುತ್ತಿದ್ದಾರೆ. ಆನ್‌ಲೈನ್ ಕ್ಲಾಸ್ ಫೆ.19ರ ವರೆಗೆ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ಶನಿವಾರದವರೆಗೆ ಆನ್‌ಲೈನ್ ಕ್ಲಾಸ್ ನಡೆಯಲಿದೆ. ಸೋಮವಾರದಿಂದ ಆನ್‌ಲೈನ್ ನಲ್ಲಿ ತರಗತಿ ನಡೆಸುವ ಕುರಿತು ಕಾಲೇಜಿನಿಂದ ಯಾವುದೇ ತೀರ್ಮಾನವಾಗಿಲ್ಲ. ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಅಧ್ಯಾಪಕರು ಗೊಂದಲದಲ್ಲಿದ್ದಾರೆ.
ಮೈಸೂರಿನ ರಾಜೀವ್‌ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ವಿವಾದ ಕಾರಣ ಹೈಕೋರ್ಟ್ ಅಂತಿಮ ಆದೇಶ ಬರುವವರೆಗೂ ಕಾಲೇಜಿಗೆ ಬರುವುದಿಲ್ಲಎಂದು ಹೇಳಿದ್ದಾರೆ. ಪೋಷಕರ ಮನವಿ ಮೇರೆಗೆ ವಿದ್ಯಾರ್ಥಿನಿಯರಿಗೆ ಆನ್‌ಲೈನ್ ಕ್ಲಾಸ್ ನಡೆಸುತ್ತಿದ್ದೇವೆ. ಆನ್‌ಲೈನ್ ಕ್ಲಾಸ್ ಮುಂದುವರಿಸುತ್ತೇವೆ.
– ಡಿ.ಕೆ.ಶ್ರೀನಿವಾಸಮೂರ್ತಿ, ಉಪ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಮೈಸೂರು
ವಿದ್ಯಾರ್ಥಿನಿಯರಿಗೆ ಆನ್‌ಲೈನ್ ಕ್ಲಾಸ್ ಮಾಡುತ್ತಿದ್ದೇವೆ. ವಿದ್ಯಾರ್ಥಿನಿಯರಲ್ಲಿ ಶೇ.80ರಷ್ಟು ಮಂದಿ ಆನ್‌ಲೈನ್‌ಕ್ಲಾಸ್‌ನಲ್ಲಿ ಹಾಜರಾಗುತ್ತಿದ್ದಾರೆ. ಆನ್‌ಲೈನ್ ಕ್ಲಾಸ್ ನಾಳೆವರೆಗೆ(ಶನಿವಾರ) ನಡೆಸಲು ಮಾತ್ರ ನಿರ್ಧರಿಸಲಾಗಿದೆ. ಸೋಮವಾರದಿಂದ ಏನು ಮಾಡಬೇಕು ಎಂಬ ಬಗ್ಗೆ ಸೂಚನೆ ಬಂದಿಲ್ಲ.
– ಡಿ.ಧನ್ವಂತರಿ, ಪ್ರಾಂಶುಪಾಲ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ರಾಜೀವ್‌ನಗರ
– ಕೂಡ್ಲಿ ಗುರುರಾಜ