Advertisement

ಗ್ರಾಮ ಪಂಚಾಯತ್ ನಲ್ಲಿನ್ನು ಆನ್‌ಲೈನ್‌ ಲೆಕ್ಕ ಪರಿಶೋಧನೆ !

01:08 AM Oct 28, 2020 | mahesh |

ಮಂಗಳೂರು: ಗ್ರಾಮ ಪಂಚಾಯತ್‌ಗಳಿಗೆ ಬರುವ ಅನುದಾನ, ಆರ್ಥಿಕ ಸಂಪನ್ಮೂಲ ಸಂಗ್ರಹ ಹಾಗೂ ಹಂಚಿಕೆಯ ಮೇಲೆ ನಿಗಾ ವಹಿಸುವ ಹಾಗೂ ಈ ಕುರಿತ ಲೆಕ್ಕಪರಿಶೋಧನೆಯನ್ನು ಇನ್ನಷ್ಟು ಪಾರದರ್ಶಕವಿರಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯತ್‌ಗಳ ಲೆಕ್ಕಪರಿಶೋಧನೆಯನ್ನು ಆನ್‌ಲೈನ್‌ ಮೂಲಕ ನಡೆಸಲು ಕೇಂದ್ರ ಸರಕಾರ ಸೂಚಿಸಿದೆ.

Advertisement

ಇಲ್ಲಿಯವರೆಗೆ ಸ್ಥಳೀಯ ಲೆಕ್ಕಪರಿಶೋಧನ ಅಧಿಕಾರಿಗಳ ತಂಡ ಖುದ್ದಾಗಿ ಸಂಬಂಧಪಟ್ಟ ಪಂಚಾಯತ್‌ಗಳಿಗೆ ತೆರಳಿ ನಡೆಸಲಾಗುತ್ತಿತ್ತು. ಸಿಬಂದಿ ಕೊರತೆ ಹಾಗೂ ಇತರ ತಾಂತ್ರಿಕ ಸಮಸ್ಯೆಯಿಂದ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯಬೇಕಾದ ಲೆಕ್ಕಪರಿಶೋಧನೆಯು ಎರಡು-ಮೂರು ವರ್ಷಕ್ಕೊಮ್ಮೆ ನಡೆಯುತ್ತಿದೆ. ಜತೆಗೆ, ಕೆಲವು ಗ್ರಾಮ ಪಂಚಾಯತ್‌ಗಳ ಲೆಕ್ಕಾಚಾರವು ಹಲವಾರು ಗೊಂದಲಗಳಿಗೂ ಕಾರಣವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೀಗ ಆನ್‌ಲೈನ್‌ ಪರಿಶೋಧನೆಗೆ ಉದ್ದೇಶಿಸಲಾಗಿದೆ.

ಮೊದಲ ಹಂತದಲ್ಲಿ, ರಾಜ್ಯದ 30 ಜಿಲ್ಲಾ ಪಂಚಾಯತ್‌ಗಳ ಶೇ.20ರಷ್ಟು ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಆನ್‌ಲೈನ್‌ ಲೆಕ್ಕಪರಿಶೋಧನೆಗೆ ನಿರ್ಧರಿಸಲಾಗಿದೆ. ಈ ಕುರಿತು ಆಯಾ ಗ್ರಾಮ ಪಂಚಾಯತ್‌ಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳು ಆಯೋಜನೆಯಾಗಿದ್ದು, ಮಂಗಳೂರಿನಲ್ಲಿ ಅ. 28ರಂದು ನಡೆಯಲಿದೆ. ಇದು ಪೂರ್ಣವಾದ ಬಳಿಕ ಎಲ್ಲ ಗ್ರಾ.ಪಂ.ನಲ್ಲಿಯೂ ಹಂತ ಹಂತವಾಗಿ ಜಾರಿಯಾಗಲಿದೆ.

ಆನ್‌ಲೈನ್‌ ಏಕೆ?
ಲೆಕ್ಕಪರಿಶೋಧನೆಯಲ್ಲಿ ಏಕರೂಪತೆ ತರಲು ಹಾಗೂ ನಿಗದಿತ ಅವಧಿಯಲ್ಲಿ ಲೆಕ್ಕಪತ್ರ ಪರಿಶೋಧನೆ ಕೈಗೊಳ್ಳುವ ಉದ್ದೇಶದಿಂದ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಹೊಸದಿಲ್ಲಿಯ ಪಂಚಾಯತ್‌ರಾಜ್‌ ಮಂತ್ರಾಲಯವು ಆನ್‌ಲೈನ್‌ ಆಡಿಟ್‌ ಮಾಡಲು ಸೂಚಿಸಿದೆ. ಹೀಗಾಗಿ ಪ್ರತ್ಯೇಕ ವೆಬ್‌ ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇದರ ಮೂಲಕ ಆನ್‌ಲೈನ್‌ ಲೆಕ್ಕಪರಿಶೋಧನೆ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ.

ಆನ್‌ಲೈನ್‌ ಆಡಿಟ್‌ನಿಂದ ಏನು ಲಾಭ?
ಸದ್ಯ ಎಲ್ಲವೂ ಡಿಜಿಟಲೀಕರಣ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿಯಿಂದ ಸಿಬಂದಿಯನ್ನು ಗ್ರಾ.ಪಂ.ಗಳಿಗೆ ಕಳುಹಿಸಿ ಲೆಕ್ಕಪರಿಶೋಧನೆ ಮಾಡುವ ಬದಲು ಕೇಂದ್ರ ಕಚೇರಿಯಿಂದಲೇ ಆನ್‌ಲೈನ್‌ ಮೂಲಕ ಆಡಿಟ್‌ ಮಾಡಲು ಸಾಧ್ಯ. ಜತೆಗೆ ಸದ್ಯ ಆಡಿಟ್‌ ಮಾಡುವ ವಿಚಾರದಲ್ಲಿ ಎದುರಾಗುವ ಕೆಲವೊಂದು ಆರೋಪಗಳು ಆನ್‌ಲೈನ್‌ನಲ್ಲಿ ಸರಿಯಾಗಬಹುದು. ನಿಗದಿತ ಸಮಯದೊಳಗೆ ಆಡಿಟ್‌ ಮಾಡಲು ಕೂಡ ಸಾಧ್ಯವಾಗುತ್ತದೆ. ಸ್ಥಳೀಯ ಸಂಸ್ಥೆಗಳ ಹಣಕಾಸಿನ ವ್ಯವಹಾರದ ಮೇಲೆ ನಿಗಾ ವಹಿಸಲು ಸಾಧ್ಯ.

Advertisement

ಆಯ್ದ ಪಂಚಾಯತ್‌ ಸಿಬಂದಿಗೆ ತರಬೇತಿ
ಲೆಕ್ಕಪರಿಶೋಧನೆಯಲ್ಲಿ ಪಾರದರ್ಶಕತೆ, ಏಕರೂಪತೆ ತರಲು ಮತ್ತು ನಿಗದಿತ ಅವಧಿಯಲ್ಲಿ ಲೆಕ್ಕಪತ್ರ ಪರಿಶೋಧನೆ ಕೈಗೊಳ್ಳುವ ಉದ್ದೇಶದಿಂದ ಗ್ರಾಮ ಪಂಚಾಯತ್‌ನಲ್ಲಿ ಆನ್‌ಲೈನ್‌ ಲೆಕ್ಕಪರಿಶೋಧನೆಗೆ ಸರಕಾರ ಸೂಚಿಸಿದೆ. ಈ ಸಂಬಂಧ ಆನ್‌ಲೈನ್‌ ತಂತ್ರಾಂಶದ ಮೂಲಕ ಲೆಕ್ಕ ಪರಿಶೋಧನೆಯ ತರಬೇತಿಯನ್ನು ಆಯ್ದ ಪಂಚಾಯತ್‌ಗಳ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳಿಗೆ ನೀಡಲು ಸೂಚಿಸಲಾಗಿದೆ.
ಡಾ| ಸೆಲ್ವಮಣಿ, ಆರ್‌. ಸಿಇಒ, ಜಿಲ್ಲಾ ಪಂ.-ದ.ಕ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next