ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಆನ್‌ಲೈನ್ ಖಾತಾ ವ್ಯವಸ್ಥೆಯ ಸಾಫ್ಟ್ವೇರ್‌ನಲ್ಲಿನ ತಾಂತ್ರಿಕ ದೋಷಗಳಿಂದ ಸೂಕ್ತ ಸಮಯಕ್ಕೆ ಖಾತಾ ದೊರೆಯದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ನಗರಾಭಿವೃದ್ಧಿ ಇಲಾಖೆ ಸೂಚನೆ ಪ್ರಕಾರ ಸಹಾಯಕ ಕಂದಾಯ ಅಧಿಕಾರಿಗಳ (ಎಆರ್‌ಒ) ಕಚೇರಿಗಳಲ್ಲಿ ಖಾತಾ ನೋಂದಣಿ ಹಾಗೂ ವರ್ಗಾವಣೆಗೆ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿ ಆನ್‌ಲೈನ್ ವ್ಯವಸ್ಥೆಯಡಿ ಖಾತಾ ಅರ್ಜಿಗಳು ವಿಲೇವಾರಿ ಕ್ರಮ ಜಾರಿಗೊಳಿಸಲಾಗಿತ್ತು.
ಆದರೆ, ಸರ್ಕಾರದಿಂದ ಜಾರಿಗೊಳಿಸಿರುವ ಆನ್‌ಲೈನ್ ವ್ಯವಸ್ಥೆಯಲ್ಲಿ ನಿರಂತರವಾಗಿ ತಾಂತ್ರಿಕ ದೋಷಗಳು ಎದುರಾಗುತ್ತಿದ್ದು, ಕಳೆದ ಒಂದು ವಾರದಿಂದ ಆನ್‌ಲೈನ್ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ತುರ್ತು ಖಾತಾ ಅವಶ್ಯಕತೆಯಿದ್ದವರಿಗೆ ತೊಂದರೆಯಾಗಿದೆ.
ಇತ್ತ ಖಾತಾ ಸೇವೆಗಳನ್ನು ಸಂಪೂರ್ಣ ಆನ್‌ಲೈನ್ ಗೊಳಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ತಮಗೂ, ಖಾತಾ ಸೇವೆಗಳಿಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆನ್‌ಲೈನ್‌ನಲ್ಲಿ ಉಂಟಾಗಿರುವ ತೊಂದರೆಗಳಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಪಾಲಿಕೆ ಕಚೇರಿಗಳಿಗೆ ಹೋದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.
ಆನ್‌ಲೈನ್ ವ್ಯವಸ್ಥೆ ಸರಿ ಇದ್ದಾಗಲೂ ಸಾರ್ವಜನಿಕರು ತೊಂದರೆಪಡಬೇಕಿತ್ತು. ಆಸ್ತಿ ಮಾಲೀಕರು ಆನ್‌ಲೈನ್‌ನಲ್ಲಿ ಖಾತಾ ನೋಂದಣಿ ಹಾಗೂ ವರ್ಗಾವಣೆಗೆ ಅರ್ಜಿ ಸಲ್ಲಿಸಿದಾಗ ಅಗತ್ಯ ದಾಖಲೆ ಸಲ್ಲಿಸಬೇಕಿತ್ತು. ಒಂದು ದಾಖಲೆ ತಪ್ಪಿದ್ದರೂ ಅಥವಾ ಅರ್ಜಿ ಭರ್ತಿಯ ವೇಳೆ ಸಣ್ಣ ಪುಟ್ಟ ತಪ್ಪುಗಳಾದರೂ ಅರ್ಜಿ ತಿರಸ್ಕೃತವಾಗುತ್ತಿತ್ತು. ಒಮ್ಮೆ ಅರ್ಜಿ ತಿರಸ್ಕೃತಗೊಂಡರೆ, ಒಂದು ತಿಂಗಳವರೆಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತಿರಲಿಲ್ಲ. ಜತೆಗೆ ಮೃತಪಟ್ಟವರ ಹೆಸರಿನಿಂದ ಖಾತಾ ವರ್ಗಾವಣೆ ಸೇರಿದಂತೆ ಆಯ್ಕೆಗಳು ಇರಲಿಲ್ಲ ಎಂದು ಹೇಳಲಾಗಿದೆ.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಮಾತ್ರ ಖಾತಾ ಸೇವೆಗಳು ಜನರಿಗೆ ಲಭ್ಯವಿದ್ದು, ಜನರು ಗಂಟೆಗಟ್ಟಲೇ ಕಾಯುವ ಸ್ಥಿತಿಯಿದೆ. ಹೀಗಾಗಿ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ಗಳ ಕಚೇರಿಗಳಲ್ಲಿಯೂ ಆನ್‌ಲೈನ್ ನೋಂದಾಣಿ ಹಾಗೂ ವರ್ಗಾವಣೆ ಸೇವೆ ಆರಂಭಿಸಬೇಕು.
ನೇತ್ರಾ ನಾರಾಯಣ್, ಪಾಲಿಕೆ ಜೆಡಿಎಸ್ ನಾಯಕಿ
ಕಳೆದ ಮೂರು ದಿನಗಳಿಂದ ತಾಂತ್ರಿಕ ದೋಷದಿಂದ ಆನ್‌ಲೈನ್ ಖಾತಾ ಸೇವೆಗಳು ದೊರೆಯುತ್ತಿಲ್ಲ. ಈಗಾಗಲೇ
ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಮೂರು ದಿನಗಳಲ್ಲಿ ಆನ್‌ಲೈನ್ ವ್ಯವಸ್ಥೆ ಯಥಾಸ್ಥಿತಿಗೆ ಬರಲಿದೆ.
ಆರ್.ಸಂಪತ್‌ರಾಜ್, ಮೇಯರ