Advertisement

ಪಾಕಿಸ್ಥಾನದ ಮೂಲಕ ಭಾರತಕ್ಕೆ ಅಫ್ಘಾನ್‌ ಈರುಳ್ಳಿ

09:37 AM Dec 05, 2019 | Team Udayavani |

ಅಟ್ಟಾರಿ-ವಾಘಾ: ದೇಶದಲ್ಲಿ ಈರುಳ್ಳಿ ದರಗಳು ಹೆಚ್ಚಾಗುತ್ತಿದ್ದಂತೆ ವ್ಯಾಪಾರಿಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಅಫ್ಘಾನಿಸ್ಥಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಅಫ್ಘಾನಿಸ್ಥಾನದಿಂದ ಈರುಳ್ಳಿ ಸಾಗಿಸುವ ಸುಮಾರು 10 ರಿಂದ 15 ಟ್ರಕ್‌ಗಳು ಪ್ರತಿದಿನ ಅಮೃತಸರದ ಅಟ್ಟಾರಿ-ವಾಘಾ ಭೂ ಮಾರ್ಗದ ಮೂಲಕ ಭಾರತಕ್ಕೆ ಆಗಮಿಸುತ್ತಿದೆ.

Advertisement

ಒಂದು ಟ್ರಕ್‌ ಅಲ್ಲಿ 35 ಮೆಟ್ರಿಕ್‌ ಟನ್‌
ಪ್ರತಿದಿನ ಈರುಳ್ಳಿ ತುಂಬಿದ 10-15 ಟ್ರಕ್‌ಗಳು ಅಫ್ಘಾನಿಸ್ಥಾನದಿಂದ ಬರುತ್ತಿವೆ. ಪ್ರತಿ ಟ್ರಕ್‌ 35 ಮೆಟ್ರಿಕ್‌ ಟನ್‌ ಈರುಳ್ಳಿಯನ್ನು ಹೊತ್ತು ಭಾರತದತ್ತ ಬರುತ್ತಿದೆ. ಪಂಜಾಬ್‌ ಮತ್ತು ದಿಲ್ಲಿಯ ವ್ಯಾಪಾರಿಗಳು ಅಫ್ಘಾನಿಸ್ಥಾನದಿಂದ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಅವುಗಳನ್ನು ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾದ ಕಾರಣ ಸ್ಥಳೀಯ ವ್ಯಾಪಾರಿಗಳು ಅಫ್ಘಾನಿಸ್ಥಾನದಿಂದ ಬೆಳೆಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಇದು ದೇಶದ ಇತರ ಮಾರುಕಟ್ಟೆಗೆ ಹೋಲಿಸಿದರೆ ಅಗ್ಗವಾಗಿದೆ.

80ರ ಆಸುಪಾಸಿನ ದರ
ಅಫ್ಘಾನಿಸ್ಥಾನದ ಚಿಲ್ಲರೆ ಮಾರುಕಟ್ಟೆಯಿಂದ ಆಮದಾದ ಈರುಳ್ಳಿಗೆ ಪ್ರತಿ ಕೆಜಿಗೆ 70-80 ರೂ.ಗಳ ಬೆಲೆ ನಿಗದಿಪಡಿಸಲಾಗಿದೆ. ಕೆಲವೊಮ್ಮೆ 5-10 ರೂ.ಗಳು ಹೆಚ್ಚು ಕಮ್ಮಿಯಾಗುತ್ತದೆ. ಇದೇ ಈರುಳ್ಳಿ ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಿದರೆ ಪ್ರತಿ ಕೆ.ಜಿ.ಗೆ 75-100 ರೂ.ಗೆ ವ್ಯಾಪಾರವಾಗುತ್ತದೆ. ದೇಶದಲ್ಲಿ ಈರುಳ್ಳಿ ದರಗಳು 100 ರೂ.ಗಳನ್ನು ದಾಟಿದ್ದು, ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಭಾರತದ ವ್ಯಾಪಾರಸ್ಥರು ನೆರೆಯ ಅಫ್ಘಾನಿಸ್ಥಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.

ಅಟ್ಟಾರಿ-ವಾಘಾ ಭೂ ಮಾರ್ಗದ ಮೂಲಕ ಭಾರತ ಮತ್ತು ಪಾಕಿಸ್ಥಾನದ ನಡುವಿನ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದ್ದರೂ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ನಡುವಿನ ದ್ವಿಪಕ್ಷೀಯ ಸಾರಿಗೆ ವ್ಯಾಪಾರ ಒಪ್ಪಂದದ ಪ್ರಕಾರ ಈರುಳ್ಳಿ ಸಾಗಿಸುವ ಲಾರಿಗಳು ಈ ಮಾರ್ಗದ ಮೂಲಕವೇ ಭಾರತಕ್ಕೆ ಬರುತ್ತದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಪಾಕಿಸ್ಥಾನವು ಆಗಸ್ಟ್‌ನಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು.

ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ಥಾನದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಉತ್ಪನ್ನಗಳಿಗೆ ಭಾರತ ಶೇ. 200 ರಷ್ಟು ಕಸ್ಟಮ್‌ ಸುಂಕವನ್ನು ವಿಧಿಸಿತ್ತು. ಪುಲ್ವಾಮ ದಾಳಿ ನಡೆದ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವೆ ರಾಜತಾಂತ್ರಿಕ ಸಂಬಂಧಗಳು ಸುಧಾರಿಸಿಲ್ಲ. ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದು ಪಡಿಸಿದ ಬಳಿಕ ಪಾಕಿಸ್ಥಾನ ಭಾರತದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next