Advertisement

ನಗರಕ್ಕೆ ಬಂತು ಈಜಿಪ್ಟ್ ಈರುಳ್ಳಿ !

09:39 PM Nov 20, 2019 | mahesh |

ಮಹಾನಗರ: ಈರುಳ್ಳಿಯ ಬೆಳೆ ಕುಸಿತ ಮತ್ತು ಬೆಲೆ ಏರಿಕೆಯ ಕುರಿತಂತೆ ಚರ್ಚೆಗಳು ನಡೆಯುತ್ತಿರುವಾಗಲೇ ಮಂಗಳೂರಿನ ಮಾರುಕಟ್ಟೆಗೆ ಈಜಿಪ್ಟ್ ದೇಶದ ಈರುಳ್ಳಿ ಆವಕವಾಗಿದೆ.

Advertisement

ಬುಧವಾರ ಬೆಳಗ್ಗೆ ಲಾರಿಯಲ್ಲಿ ಪುಣೆಯಿಂದ 30 ಗೋಣಿ ಚೀಲ (1,400 ಕೆ.ಜಿ.) ಈರುಳ್ಳಿ ಮಂಗಳೂರಿನ ಸೆಂಟ್ರಲ್‌ ಮಾರ್ಕೆಟ್‌ಗೆ ಬಂದಿದೆ. ನಗರದ ಪ್ರಮುಖ ಈರುಳ್ಳಿ ವ್ಯಾಪಾರ ಸಂಸ್ಥೆ ಸಾಯಿ ಟ್ರೇಡರ್ ಗೆ ಈ ವಿದೇಶಿ ಈರುಳ್ಳಿ ಬಂದಿದ್ದು, ಅನ್‌ಲೋಡ್‌ ಆದ ಕೂಡಲೇ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಇದು ವಿತರಣೆಯಾಗಿದೆ. ಮಧ್ಯಾಹ್ನದ ವೇಳೆಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರಿಂದ ಈಜಿಪ್ಟ್ ಈರುಳ್ಳಿ ಗ್ರಾಹಕರ ಕೈಸೇರಿದೆ.

1 ಈರುಳ್ಳಿಯ ತೂಕ 250 ಗ್ರಾಂ!
ಮಂಗಳೂರಿಗೆ ವಿದೇಶಿ ಈರುಳ್ಳಿ ಇದೇ ಮೊದಲ ಬಾರಿಗೆ ಪೂರೈಕೆಯಾಗಿದೆ. ಈಜಿಪ್ಟಿಯನ್‌ ಈರುಳ್ಳಿ ದೊಡ್ಡ ಗಾತ್ರದಲ್ಲಿದ್ದು, ಸಾಮಾನ್ಯವಾಗಿ ಒಂದು ಈರುಳ್ಳಿ 250 ಗ್ರಾಂ (ಕಾಲು ಕೆ.ಜಿ.) ತೂಕವಿದೆ. ಇದರ ಬಣ್ಣ ಸ್ವಲ್ಪ ಜಾಸ್ತಿ ಕೆಂಪು ಇದ್ದು, ನೋಡಲು ಹೆಚ್ಚು ಅಂದವಾಗಿದೆ.

ನಗರದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಬುಧವಾರ ಈಜಿಪಿÏಯನ್‌ ಈರುಳ್ಳಿಯ ದರ ಸಗಟು ಮಾರಾಟ ಬೆಲೆ ಕೆ.ಜಿ.ಗೆ 62 ರೂ. ಹಾಗೂ ಚಿಲ್ಲರೆ ಮಾರಾಟ ಬೆಲೆ 65 ರೂ. ಇತ್ತು. ಪೂನಾದಿಂದ ಇದು ಕೆ.ಜಿ. ಒಂದರ 50 ರೂ.ನಂತೆ ಸಾಯಿ ಟ್ರೇಡರ್ ಗೆ ತಲುಪಿದ್ದು, ಅಲ್ಲಿಂದ 57 ರೂಪಾಯಿಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಕೈಸೇರಿದೆ. ದೇಶೀಯ ಈರುಳ್ಳಿ ದರ ಹಳೆಯ ಈರುಳ್ಳಿಗೆ 75 ರೂ. ಹಾಗೂ ಹೊಸ ಈರುಳ್ಳಿಗೆ 70 ರೂ. ಇದೆ. ಹೊಸ ಈರುಳ್ಳಿಯಲ್ಲಿ ಸಣ್ಣ ಈರುಳ್ಳಿ ಎಂಬ ಇನ್ನೊಂದು ವೆರೈಟಿ ಇದ್ದು, ಅದರ ಬೆಲೆ 50 ರೂ. ಇದೆ.

ಬೇಡಿಕೆ ಇನ್ನೂ ತಿಳಿದಿಲ್ಲ
ಇದೇ ಮೊದಲ ಬಾರಿ ಈಜಿಪ್ಟ್ ನ ಈರುಳ್ಳಿನಗರದ ಮಾರುಕಟ್ಟೆಗೆ ಬಂದಿದೆ. ಇದರ ರುಚಿ, ಗುಣ ಮಟ್ಟ ಮತ್ತು ಗ್ರಾಹಕರ ಸ್ಪಂದನೆಯ ಬಗ್ಗೆ ಈಗ ಏನನ್ನೂ ಹೇಳಲಾಗದು. ಬೇಡಿಕೆಯ ಬಗ್ಗೆಯೂ ಇನ್ನಷ್ಟೇ ತಿಳಿದು ಬರ ಬೇಕಾಗಿದೆ. ಗ್ರಾಹಕರ ನಾಡಿ ಮಿಡಿತವನ್ನು ಗಮನಿಸಿ ಮುಂದೆ ಈ ಈರುಳ್ಳಿಯನ್ನು ಇನ್ನೂ ತರಿಸಿಕೊಳ್ಳ ಬೇಕೇ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
 - ಜೆ. ಶೇಖರ್‌, ಸಗಟು ತರಕಾರಿ ವ್ಯಾಪಾರಿ, ಸೆಂಟ್ರಲ್‌ ಮಾರ್ಕೆಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next