ಬಾಗಲಕೋಟೆ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಕೈಕೊಟ್ಟರೂ ಈರುಳ್ಳಿ ಬೆಳೆಯಲ್ಲಿ ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ಕೇಳುವವರಿಲ್ಲ. ಕಾರಣ ಬೆಲೆ ಕುಸಿತಗೊಂಡಿದೆ.
ಮಾರುಕಟ್ಟೆಯಲ್ಲಿ ಉತ್ತಮ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ರೂ. 800 ರಿಂದ 1000ರವರೆಗೆ ಮಾರಾಟವಾಗುತ್ತಿದೆ. ದೀಪಾವಳಿ ನಂತರ ಮಾರುಕಟ್ಟೆಗೆ ಈರುಳ್ಳಿ ಹೆಚ್ಚು ಬರುವುದರಿಂದ ಬೆಲೆಯಲ್ಲಿ ಇನ್ನೂ ಕಡಿಮೆಯಾಗುತ್ತದೆ ಎನ್ನುವ ಆತಂಕ ರೈತರಲ್ಲಿ ಮೂಡಿದೆ. ಕಳೆದ ವರ್ಷವು ಸಹ ಈರುಳ್ಳಿ ಬೆಳೆದ ರೈತರು ಕೈ ಸುಟ್ಟುಕೊಂಡಿದ್ದರು. ಅಧಿಕ ಮಾಸ ಬಂದ ಹಿನ್ನೆಲೆಯಲ್ಲಿ ಲಾಭ ಪಡೆಯಬಹುದು ಎಂದು ರೈತರು ಈರುಳ್ಳಿ ಬಿತ್ತನೆ ಮಾಡಿದರೆ, ಮತ್ತೆ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಲಾಭ ಮಾಡುವ ರೈತನ ಕನಸಿಗೆ ಬೆಲೆಯ ಕುಸಿತ ರೈತನಿಗೆ ಆಘಾತ ನೀಡಿದೆ. ಈಗಿನ ಬೆಲೆಯಲ್ಲಿ ಮುಂದೆ ಮಾರಾಟವಾದರೆ ರೈತರು ಪ್ರತಿ ಎಕರೆ ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಸಹ ವಾಪಸು ಬರುವ ಲಕ್ಷಣಗಳಿಲ್ಲ. ರೈತರು ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಅಲ್ಲದೇ ಈರುಳ್ಳಿಯನ್ನು ಜಮೀನಿನಿಂದ ಮಾರುಕಟ್ಟೆಗೆ ತರಲು ವಾಹನದ ಬಾಡಿಗೆ ಸಹ ಕೆಲ ರೈತರಿಗೆ ಬಂದಿಲ್ಲ.
ಜಿಲ್ಲೆಯಲ್ಲಿ ಒಟ್ಟು 20,380 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: ಜಿಲ್ಲೆಯಲ್ಲಿ 2018ರ ಮುಂಗಾರು ಹಂಗಾಮಿನಲ್ಲಿ 22,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಈಗ ಜಿಲ್ಲೆಯಲ್ಲಿ ಒಟ್ಟು 20,380 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.ಬಾಗಲಕೋಟೆ ತಾಲೂಕಿನಲ್ಲಿ 1700 ಹೆಕ್ಟೇರ್, ಬಾದಾಮಿಯಲ್ಲಿ 7780 ಹೆಕ್ಟೇರ್, ಹುನಗುಂದದಲ್ಲಿ 7926 ಹೆಕ್ಟೇರ್, ಮುಧೋಳದಲ್ಲಿ 2000 ಹೆಕ್ಟೇರ್, ಜಮಖಂಡಿಯಲ್ಲಿ ಕೇವಲ 114 ಹೆಕ್ಟೇರ್, ಬೀಳಗಿಯಲ್ಲಿ 860 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ನಾನು 3 ಎಕರೆ ಪ್ರದೇಶದಲ್ಲಿ ಈರುಳಿ ಬಿತ್ತನೆ ಮಾಡಿದ್ದೆ. ಉತ್ತಮ ಬೆಳೆ ಬಂದರೂ ಮಾರು ಕಟ್ಟೆಯಲ್ಲಿ ಯೋಗ್ಯ ಬೆಲೆಯಿಲ್ಲ. ಅಂದಾಜು 80 ಸಾವಿರ ಖರ್ಚು ಮಾಡಿದ್ದೇನೆ. ಮಾರಾಟದಿಂದ ನನಗೆ ಸಿಕ್ಕಿದ್ದು ಕೇವಲ 28 ಸಾವಿರ ರೂ. ಮಾತ್ರ. ಲಾಭಕ್ಕಿಂತ ನಷ್ಟ ಹೆಚ್ಚಾಗಿದೆ.
ತವರಪ್ಪ ಶಂಕ್ರಪ್ಪ ನಾಯಕ,
ಮುಂಚಖಂಡಿ ತಾಂಡಾ ರೈತ.
ಉಳ್ಳಾಗಡ್ಡಿ ಬೆಲೆ ಕುಸಿಯಲು ಅನೇಕ ಕಾರಣಗಳಿವೆ. ತೇವಾಂಶ ಹೆಚ್ಚಾಗಿರುವುದರಿಂದ ಹೆಚ್ಚು ದಿನ ಸ್ಟೊರೇಜ್ ಮಾಡಲು ಬರುವುದಿಲ್ಲ. ಕೊಯ್ಲು ಆದ ವಾರದೊಳಗೆ ಮಾರುಕಟ್ಟೆಗೆ ತರಲೇಬೇಕು. ಜಿಲ್ಲೆಯಲ್ಲಿ ಅವಶ್ಯಕ್ಕಿಂತ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದಾರೆ. ಹಿಂಗಾರು ಈರುಳ್ಳಿ ಬೆಳೆ ರೈತರಿಗೆ ಸ್ಟೋರೇಜ್ ಮಾಡಲು ಹುನಗುಂದದಲ್ಲಿ 12 ಸ್ಟೋರೇಜ್ ಯುನಿಟ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಟೋರೇಜ್ ಯುನಿಟ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಪ್ರಭುರಾಜ ಹಿರೇಮಠ, ಜಿಲ್ಲಾ
ತೋಟಗಾರಿಕೆ ಉಪನಿರ್ದೇಶಕ,
ವಿಠ್ಠಲ ಮೂಲಿಮನಿ