ವರದಿ: ಕೇಶವ ಆದಿ
ಬೆಳಗಾವಿ: ಸತತ ಪ್ರವಾಹ, ಪ್ರಕೃತಿ ವಿಕೋಪ ನಂತರ ಕೊರೊನಾ ಮಹಾಮಾರಿ ಅಟ್ಟಹಾಸದಿಂದ ನಲುಗಿ ಹೋಗಿರುವ ರೈತ ಸಮುದಾಯ ಈಗ ಈರುಳ್ಳಿ ಬೆಳೆ ಕುಸಿತದಿಂದ ಕಂಗೆಟ್ಟಿದ್ದಾರೆ. ಮಾರುಕಟ್ಟೆಗೆ ಬರುತ್ತಿರುವ ಹೊಸ ಈರುಳ್ಳಿ ಹೊಸ ಸಮಸ್ಯೆ ತಂದಿಟ್ಟಿದೆ. ಕೈತುಂಬಾ ಈರುಳ್ಳಿ ಕಂಡರೂ ನೆಮ್ಮದಿ ಇಲ್ಲ. ದರ ಕುಸಿತ ರೈತರನ್ನು ಕುಸಿಯುವಂತೆ ಮಾಡಿದೆ.
ಕಳೆದ ವರ್ಷ ಕೊರೊನಾ ಹಾವಳಿ ಮತ್ತು ಲಾಕ್‌ಡೌನ್ ಕಾಡಿತ್ತು. ಈಗ ಕೊರೊನಾ ಜತೆಗೆ ಸುತ್ತುರೋಗ ರೈತರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಹೊಲದಲ್ಲಿ ಸಮೃದ್ಧ ಬೆಳೆ ಇದ್ದರೂ ಅದರಿಂದ ಸಂತೃಪ್ತಿ ಇಲ್ಲ. ರೋಗದಿಂದ ಈರುಳ್ಳಿ ಗಡ್ಡಿಗಳು ಸುತ್ತು ಹೊಡೆದು ಬೀಳುತ್ತಿವೆ. ಹೀಗಾಗಿ ಅದರ ಬಾಳಿಕೆ ಕಡಿಮೆ. ಈ ಕಡೆ ಮಾರುಕಟ್ಟೆಯಲ್ಲಿ ಹೊಸ ಈರುಳ್ಳಿಗೆ ದರ ಇಲ್ಲ. ಪರಿಣಾಮ ಎಷ್ಟೋ ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತರದೇ ಹೊಲದಲ್ಲೇ ಕೊಳೆಯಲು ಬಿಟ್ಟಿದ್ದಾರೆ. ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕಿನಲ್ಲಿ ಕಂಡು ಬರುವ ಚಿತ್ರ ಅಲ್ಲ ಬಹುತೇಕ ಕಡೆ ಇದೇ ಸ್ಥಿತಿ ಇದೆ.
ಒಳ್ಳೆಯ ದರ ಸಿಗಬಹುದು. ಒಂದಿಷ್ಟು ದುಡ್ಡು ಮಾಡಿಕೊಳ್ಳಬಹುದೆಂದು ಸಾವಿರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದ ರೈತರು ಈಗ ದರ ಇಲ್ಲದೇ ಕಣ್ಣೀರು ಹಾಕುತ್ತಿದ್ದಾರೆ. ಸಾಮಾನ್ಯವಾಗಿ ಈ ವೇಳೆಗೆ ಮಾರುಕಟ್ಟೆಗೆ ಭರಪೂರ ಈರುಳ್ಳಿ ಬರಲಾರಂಭಿಸುತ್ತದೆ. ಮಾರುಕಟ್ಟೆ ದಿನಗಳಂದು ಕಡಿಮೆ ಎಂದರೂ ಸುಮಾರು 100 ಗಾಡಿಗಳಷ್ಟು ಈರುಳ್ಳಿ ಆವಕ ಇರುತ್ತದೆ. ಆದರೆ ಕಳೆದೆರಡು ವರ್ಷದಿಂದ ಕೊರೊನಾ ಕಾರಣದಿಂದ ರೈತರು ಈರುಳ್ಳಿಯನ್ನು ಮಾರುಕಟ್ಟೆಗೆ ತರಲಾರದೆ ಅಪಾರ ನಷ್ಟ ಅನುಭವಿಸಿದ್ದಾರೆ. ಈ ವರ್ಷ ಲಾಕ್‌ಡೌನ್ ಇಲ್ಲ. ಕೊರೊನಾ ಆತಂಕವೂ ಕಡಿಮೆಯಾಗಿದೆ. ಆದರೆ ಈರುಳ್ಳಿಗೆ ಅಂಟಿಕೊಂಡಿರುವ ರೋಗ ಮತ್ತು ದರ ಕುಸಿತ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಮಹಾರಾಷ್ಟ್ರ ಭಾಗದಲ್ಲಿ ಹಳೆಯ ಈರುಳ್ಳಿಯನ್ನು ಸಂಗ್ರಹ ಮಾಡಿಕೊಂಡಿದ್ದು ಈಗ ರೈತರು ಅದನ್ನು ಮಾರುಕಟ್ಟೆಗೆ ತರಲಾರಂಭಿಸಿದ್ದಾರೆ. ಅದರ ಪೂರೈಕೆಯ ಪ್ರಮಾಣವೂ ಹೆಚ್ಚಿದೆ. ಹಳೆಯ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ 1800 ರಿಂದ 2200 ರೂ.ವರೆಗೆ ದರ ಸಿಗುತ್ತಿದೆ. ಅದೇ ಹೊಸ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ 500 ರೂ. ದಿಂದ 800 ರೂ. ಮಾತ್ರ ಸಿಗುತ್ತಿರುವುದು ರೈತರಲ್ಲಿ ಚಿಂತೆ ಹುಟ್ಟಿಸಿದೆ. ಇದಕ್ಕೆ ನಿಖರವಾದ ಕಾರಣ ತಿಳಿಯುತ್ತಿಲ್ಲ ಎಂಬುದು ರೈತರ ಆರೋಪ. ಕಳೆದ ವರ್ಷ ಕೊರೊನಾದಿಂದ ವಹಿವಾಟು ನಡೆಯಲಿಲ್ಲ. ಇದರಿಂದ ಬಹುತೇಕ ರೈತರ ಬೆಳೆ ಹೊಲದಲ್ಲೇ ಕೊಳೆತವು. ಈ ಬಾರಿಯೂ ಅದೇ ಸ್ಥಿತಿ.
ಒಳ್ಳೆಯ ದರ ಸಿಕ್ಕರೆ ಎರಡು ಎಕರೆ ಈರುಳ್ಳಿಗೆ ಸುಮಾರು ಮೂರು ಲಕ್ಷ ರೂ ಬರಬೇಕು. ಪ್ರತಿ ಎಕರೆಗೆ 25ರಿಂದ 30 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ದರವೇ ಇಲ್ಲ. ಕ್ವಿಂಟಲ್‌ಗೆ 500 ರೂ. ದರ ಇದೆ. ಹೊಲದಿಂದ ಈರುಳ್ಳಿ ಕೀಳಲು ಕೂಲಿಗಳು ಒಂದು ಚೀಲಕ್ಕೆ 120 ರೂ. ಕೇಳುತ್ತಾರೆ. ಅವರಿಗೆ ಇಷ್ಟು ಹಣ ಕೊಟ್ಟು ಮಾರುಕಟ್ಟೆಗೆ ತಂದರೆ ನಮಗೆ ನಷ್ಟವೇ ಗತಿ. ಹೀಗಾಗಿ ಈರುಳ್ಳಿಯನ್ನು ಹೊಲದಲ್ಲೇ ಬಿಟ್ಟಿದ್ದೇವೆಂಬುದು ರೈತರ ನೋವಿನ ಮಾತು. ಹೊಸ ಈರುಳ್ಳಿ ದರ ಕುಸಿಯಲು ಕಾರಣ ಏನೆಂಬುದನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಮುಖ್ಯವಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಈರುಳ್ಳಿಗೆ ರೋಗ ಅಂಟಿಕೊಂಡಿದೆ. ಕೆಲವು ಕಡೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ಔಷಧ ಬಳಸಿದ್ದಾರೆ. ಇದರಿಂದ ಬೆಳೆಯ ಕಸುವು ಹೋಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಈ ಎಲ್ಲ ಅಂಶಗಳ ಕುರಿತು ಸಮೀಕ್ಷೆ ನಡೆಸಿ ನೆರವಿಗೆ ಬರಬೇಕು. ಆಗಿರುವ ಹಾನಿಗೆ ಸಹಾಯ ನೀಡಬೇಕೆಂಬುದು ರೈತರ ಅಳಲು.