ಬಾಗಲಕೋಟೆ: ಈರುಳ್ಳಿ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ಕುರಿತು ಜಿಲ್ಲೆಯ ಯುವ ರೈತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ.
ಬಾಗಲಕೋಟೆ ತಾಲೂಕಿನ ಬೆನಕಟ್ಟಿಯ ಯುವ ರೈತ ಪ್ರಶಾಂತ ದಾಸಪ್ಪನವರ, ನಾವು ಕನ್ನಡಿಗರು ಎಂಬ ಟ್ವಿಟರ್ ಖಾತೆಯಿಂದ ಪ್ರಧಾನಿ ಮೋದಿ ಅವರಿಗೆ ನೇರವಾಗಿ ಟ್ವೀಟ್ ಮಾಡಿದ್ದು, ಒಂದು ಎಕರೆ ಈರುಳ್ಳಿ ಬೆಳೆಯಲು ರೈತರು ಮಾಡುವ ಖರ್ಚು, ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಸಿಗುತ್ತಿರುವ ದರ, ಇದರಿಂದ ರೈತರಿಗೆ ಆಗುತ್ತಿರುವ ನಷ್ಟದ ಕುರಿತು ವಿವರಿಸಿ ನೆರವಿಗೆ ಒತ್ತಾಯಿಸಿದ್ದಾರೆ.
ಈರುಳ್ಳಿ ಬೆಳೆಯನ್ನು ಹೇಗೆ ಬೆಳೆಯುತ್ತೇವೆ, ಅದಕ್ಕೆ ಎಷ್ಟು ಗೊಬ್ಬರ, ನೀರೆಷ್ಟು ಬೇಕು, ಎಕರೆ ಈರುಳ್ಳಿ ಬೆಳೆಯಲು ತಗಲುವ ವೆಚ್ಚ, ಭೂಮಿ ನಿರ್ವಹಣೆ, ಈರುಳ್ಳಿ ಬೆಳೆ ಮಾರುಕಟ್ಟೆ ಏರಿಳಿತ ಸೇರಿದಂತೆ ಟ್ವಿಟರ್‌ನಲ್ಲಿ ಬೆಲೆಕುಸಿತದಿಂದ ರೈತರಿಗಾಗುವ ಕಷ್ಟವನ್ನು ತೋಡಿಕೊಂಡಿದ್ದಾರೆ.
ಈರುಳ್ಳಿ ಬಿತ್ತನೆಯಿಂದ ನಾಟಿ ಮಾಡಿ, ಮಾರುಕಟ್ಟೆಗೆ ಸಾಗಿಸುವವರೆಗೆ ಪ್ರತಿ ಎಕರೆಗೆ ಒಟ್ಟು 31,900 ಖರ್ಚಾಗುತ್ತದೆ. ಬೆಳೆದ ಈರುಳ್ಳಿಯನ್ನು ಮಾರುಕಟ್ಟೆಗೆ ತಂದರೆ, 50 ಕೆಜಿಗೆ 200ರಿಂದ 1200 ರೂ. ಬೆಲೆಯಿದೆ. ಮಧ್ಯಮ ಗುಣಮಟ್ಟದ ಈರುಳ್ಳಿಗೆ 50 ಕೆಜಿ ಗೆ 270ರಿಂದ 480 ರೂ. ದರ ಇದೆ. ಪ್ರತಿ ಎಕರೆಯಿಂದ 35 ಸಾವಿರ ಆದಾಯ ಬರುತ್ತದೆ. ನಾಲ್ಕು ತಿಂಗಳ ಶ್ರಮಕ್ಕೆ ರೈತನಿಗೆ ಕೇವಲ 3500 ರೂ. ಉಳಿಯುತ್ತದೆ. ಹಾಗಾದರೆ ರೈತ ಏಕೆ ದುಡಿಯಬೇಕು ಎಂದು ಪ್ರಶ್ನಿಸಿದ್ದಾರೆ.
ಸೋದರರ ಪರ ಟ್ವೀಟ್
ಪ್ರಧಾನಿಗೆ ಟ್ವೀಟ್ ಮಾಡಿರುವ ಪ್ರಶಾಂತ ದಾಸಪ್ಪನವರ ಅವರ ಇಬ್ಬರು ಸಹೋದರರಾದ ವಿನೋದ ಮತ್ತು ಆನಂದ ಅವರು, ಬೆನಕಟ್ಟಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಈ ಬಾರಿ ಈರುಳ್ಳಿ ಬೆಳೆದಿದ್ದರು. ಸಹೋದರರು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗದ ಕಾರಣ ಅವರ ಪರವಾಗಿ ಪ್ರಶಾಂತ, ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ.