ಹೊಸದಿಲ್ಲಿ: ಈ ವರ್ಷ ವಾಡಿಕೆಗಿಂತ 2 ಲಕ್ಷ ಟನ್ ಹೆಚ್ಚುವರಿ ಈರುಳ್ಳಿಯನ್ನು ಖರೀದಿಸಿ ಮೀಸಲು ದಾಸ್ತಾನು ಆಗಿ ಇರಿಸಿಕೊಳ್ಳುವುದಾಗಿ ಕೇಂದ್ರ ಸರಕಾರ ಹೇಳಿದೆ. ಈರುಳ್ಳಿಯ ಬೆಲೆಯಲ್ಲಿ ಹೆಚ್ಚಳ ಉಂಟಾಗಬಹುದು ಎಂಬ ಶಂಕೆಯೇ ಇದಕ್ಕೆ ಕಾರಣ.
ಪ್ರತೀ ವರ್ಷ ಒಂದಲ್ಲ ಒಂದು ಕಾರಣದಿಂದ ಸ್ವಲ್ಪ ಸಮಯ ಕೆಲವು ದಿನಬಳಕೆ ವಸ್ತುಗಳ ದರ ಅಪರಿಮಿತ ಏರಿಕೆ ಕಾಣುತ್ತದೆ. ಇತ್ತೀಚೆಗೆ ಆದ ಟೊಮೇಟೊ ಬೆಲೆ ಏರಿಕೆ ಇದಕ್ಕೆ ಒಂದು ಉದಾಹರಣೆ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವು ದಕ್ಕಾಗಿ ಕೇಂದ್ರ ಸರಕಾರವು ಕಾಯ್ದಿಡ ಬಹುದಾದ ದಿನಬಳಕೆಯ ವಸ್ತುಗಳನ್ನು ದೇಶದ ಎಲ್ಲೆಡೆಯಿಂದ ಮುಂಚಿತವಾಗಿ ಖರೀದಿಸಿ ಮೀಸಲು ದಾಸ್ತಾನು ಇರಿಸಿ ಕೊಳ್ಳುತ್ತದೆ. ಅಕ್ಕಿ, ಗೋಧಿ, ಈರುಳ್ಳಿ, ಬೇಳೆಕಾಳುಗಳು ಇಂಥ ಕೆಲವು ವಸ್ತುಗಳು.
ಒಟ್ಟು 5 ಲಕ್ಷ ಟನ್ ಈರುಳ್ಳಿಯನ್ನು ಕಾಯ್ದಿರಿಸಿಕೊಂಡು ಅಗತ್ಯಬಿದ್ದಾಗ ಈರುಳ್ಳಿಯ ಚಿಲ್ಲರೆ ದರ ನಿಯಂತ್ರಣಕ್ಕೆ ಬಳಸುವುದು ಸರಕಾರದ ಯೋಜನೆ. ಶನಿವಾರವಷ್ಟೇ ಕೇಂದ್ರ ಸರಕಾರವು ಈರುಳ್ಳಿಯ ರಫ್ತಿನ ಮೇಲೆ ಶೇ. 40 ಸುಂಕ ವಿಧಿಸಿತ್ತು. ಇದು ಕೂಡ ದರ ನಿಯಂತ್ರಣದ ಒಂದು ಕ್ರಮವಾಗಿದೆ. ಸರಾಸರಿ ದರ ಶೇ. 19 ಅಧಿಕ ಕೇಂದ್ರ ಸರಕಾರ 2023-24ನೇ ಸಾಲಿಗೆ 3 ಲಕ್ಷ ಟನ್ ಈರುಳ್ಳಿ ಮೀಸಲು ಸಂಗ್ರಹ ನಡೆಸುವ ಗುರಿ ಹೊಂದಿದ್ದು, ಈಗಾಗಲೇ ಅದನ್ನು ಖರೀದಿಸಿಯಾಗಿದೆ. ಸದ್ಯ ಅದು ಇದೇ ಸಂಗ್ರಹದಿಂದ ಆಯ್ದ ರಾಜ್ಯಗಳಿಗೆ ಈರುಳ್ಳಿ ಬಿಡುಗಡೆ ಮಾಡಿದೆ. ರವಿವಾರದ ಅಂಕಿಅಂಶಗಳ ಪ್ರಕಾರ ದೇಶ ಮಟ್ಟದಲ್ಲಿ ಈರುಳ್ಳಿಯ ಸರಾಸರಿ ದರ ಪ್ರತೀ ಕಿ.ಗ್ರಾಂ.ಗೆ ರೂ. 29.73 ಆಗಿತ್ತು. ಕಳೆದ ವರ್ಷದ ಇದೇ ದಿನ ರೂ. 25 ಇದ್ದು, ಪ್ರಸ್ತುತ ವರ್ಷದ ದರ ಶೇ. 19 ಹೆಚ್ಚಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಸರ ಕಾರವು 2.91 ಲಕ್ಷ ಟನ್ ನೀರುಳ್ಳಿಯ ಮೀಸಲು ಸಂಗ್ರಹವನ್ನು ಹೊಂದಿತ್ತು.ಎನ್‌ಸಿಸಿಎಫ್, ನಾಫೆಡ್‌ಗೆ ಹೊಣೆ ನ್ಯಾಶನಲ್ ಕೊಆಪರೇಟಿವ್ ಕನ್ಸೂ ಮರ್ ಫೆಡರೇಶನ್ (ಎನ್‌ಸಿಸಿಎಫ್) ಮತ್ತು ನ್ಯಾಶನಲ್ ಅಗ್ರಿಕಲ್ಚರಲ್ ಕೊಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ (ನಾಫೆಡ್)ಗಳಿಗೆ ತಲಾ 1 ಲಕ್ಷ ಟನ್ ಈರುಳ್ಳಿಯನ್ನು ಖರೀದಿಸಿ ಮೀಸಲು ನಿಧಿಗೆ ಒದಗಿಸುವಂತೆ ಸೂಚಿಸಲಾಗಿದೆ.