Advertisement

ಈರುಳ್ಳಿ ಬೆಲೆ ಮತ್ತೆ ಗಗನಮುಖೀ

12:21 PM Nov 23, 2017 | |

ಬೆಂಗಳೂರು: ಈರುಳ್ಳಿ ಮತ್ತೂಮ್ಮೆ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಇತ್ತೀಚೆಗೆ ನಿರಂಥರ ದರ ಏರಿಕೆ ಕಂಡಿರುವ ಈರುಳ್ಳಿ, ಗ್ರಾಹಕರ ಜೇಬಿಗೆ ಹೊರೆಯಾಗಿದೆ. ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ 60ರಿಂದ 65 ರೂ.ಗೆ ಮಾರಾಟವಾಗುತ್ತಿದೆ. ಪೂರೈಕೆ ಕೊರತೆ ಈ ದರ ಏರಿಕೆಗೆ ಕಾರಣ ಎನ್ನಲಾಗಿದೆ.

Advertisement

ನಗರಕ್ಕೆ ನಿತ್ಯ 1 ಲಕ್ಷ ಮೂಟೆ (ಒಂದು ಮೂಟೆಗೆ 50 ಕೆಜಿ) ಈರುಳ್ಳಿ ಅಗತ್ಯವಿದ್ದು, ಪ್ರಸ್ತುತ ಸರಬರಾಜಾಗುತ್ತಿರುವುದು ಶೇ.50ರಷ್ಟು ಮಾತ್ರ. ರಾಜ್ಯದಲ್ಲಿ ಈ ಬಾರಿ ಈರುಳ್ಳಿ ಬಿತ್ತನೆ ಗುರಿ ಶೇ.20ನ್ನೂ ತಲುಪಿಲ್ಲ. ಇದರಿಂದಾಗಿ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣದಲ್ಲಿ ಶೇ.80ರಷ್ಟು ಕುಸಿತ ಕಂಡುಬಂದಿದೆ. ಮುಂದಿನ ಮೂರ್‍ನಾಲ್ಕು ತಿಂಗಳ ಕಾಲ ಕೊರತೆ ಹೀಗೇ ಮುಂದುವರಿಯಲಿದೆ. ಹೀಗಾಗಿ ಬೆಲೆ ಇನ್ನಷ್ಟು ಏರುವ ಸಾಧ್ಯತೆ ಇದೆ.

ರಾಜ್ಯದ ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಗದಗ, ಚಾಮರಾಜನಗರ, ದಾವಣಗೆರೆ ಸೇರಿ ಉತ್ತರ ಕರ್ನಾಟಕ ಭಾಗದಿಂದ ಮಾರುಕಟ್ಟೆಗೆ, ಗೋಲ್ಟಿ (ಅತೀಸಣ್ಣ ಗಾತ್ರ), ಗೋಲಿ (ಸಣ್ಣಗಾತ್ರ), ಮಧ್ಯಮ, ದಪ್ಪ ಮತ್ತು ಅತಿದಪ್ಪವಾದ ಈರುಳ್ಳಿ ಸೇರಿ ಐದರಿಂದ ಎಂಟು ಮಾದರಿಯ ಈರುಳ್ಳಿ ಸರಬರಾಜಾಗುತ್ತದೆ. 

ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ 50 ಕೆಜಿ ಮೂಟೆಗೆ 1600ರಿಂದ 2200 ರೂ. ಮತ್ತು ದಪ್ಪ ಗಾತ್ರದ ಈರುಳ್ಳಿಗೆ 2100ರಿಂದ 2200 ರೂ. ಬೆಲೆ ಇದೆ. ಅತೀ ದಪ್ಪ ಈರುಳ್ಳಿಯ 50 ಕೆ.ಜಿ ಮೂಟೆ 2400 ರೂ.ಗೆ ಮಾರಾಟವಾಗುತ್ತಿದೆ. 

ಬಿತ್ತನೆ ಕಡಿಮೆ-ಬೇಡಿಕೆ ಹೆಚ್ಚು: ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಕಳೆದ ವರ್ಷ 1.35 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ, ಈ ಬಾರಿ ಬಿತ್ತನೆಯಾಗಿರುವುದು ಕೇವಲ 9ರಿಂದ 10 ಸಾವಿರ ಹೆಕ್ಟೇರ್‌ನಲ್ಲಿ. ಯಶವಂತಪುರ ಮಾರುಕಟ್ಟೆಗೆ ಪ್ರತಿ ದಿನ ರಾಜ್ಯದ ವಿವಿಧ ಜಿಲ್ಲೆಗಳಿಂದ 80ರಿಂದ 1 ಲಕ್ಷಕ್ಕೂ ಅಧಿಕ ಮೂಟೆ ಈರುಳ್ಳಿ ಸರಬರಾಜಾಗುತ್ತಿತ್ತು. ಆದರೆ, ಈಗ ದಿನಕ್ಕೆ 20ರಿಂದ 30 ಸಾವಿರ ಮೂಟೆ ಬಂದರೆ ಹೆಚ್ಚು.

Advertisement

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಇತ್ಯಾದಿ ಕಡೆಗಳಿಗೆ ಇಲ್ಲಿಂದಲೇ ಈರುಳ್ಳಿ ಸರಬರಾಜಾಗುತ್ತದೆ. ಬೇಡಿಕೆಗೆ ತಕ್ಕಂತೆ ಈರುಳ್ಳಿ ಪೂರೈಕೆ ಇಲ್ಲದ ಕಾರಣ ಸಾಮಾನ್ಯವಾಗಿ ಬೆಲೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಉದಯ್‌. ಸದ್ಯಕ್ಕೆ ಮಹಾರಾಷ್ಟ್ರದಿಂದ ದಿನಕ್ಕೆ 15ರಿಂದ 25 ಸಾವಿರ ಮೂಟೆಗಳು ಬರುತ್ತಿವೆ. ಪ್ರಸ್ತುತ ಮುಂದಿನ ಮೂರು ತಿಂಗಳ ಕಾಲ ಮಹಾರಾಷ್ಟ್ರದಿಂದ ಈರುಳ್ಳಿ ಬರಲಿದ್ದು, ಮುಂದಿನ ದಿನಗಳಲ್ಲಿ ಈರುಳ್ಳಿ ಆಮದು ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

ಚಿಲ್ಲರೆ ಮಾರಾಟ ದುಬಾರಿ ಸಗಟು ಮಾರುಕಟ್ಟೆಯಲ್ಲಿ ನಿಗದಿತ ಬೆಲೆಗಿಂತ ಮೂರ್‍ನಾಲ್ಕು ಸಾವಿರ ರೂ. ಏರಿಕೆಯಾಗುತ್ತಿದ್ದಂತೆ ಚಿಲ್ಲರೆ ಮಾರುಕಟ್ಟೆಯಲ್ಲೂ ಪ್ರತಿ ಕೆಜಿ ಈರುಳ್ಳಿ ಬೆಲೆಯಲ್ಲಿ 20ರಿಂದ 25 ರೂ.ಏರಿಕೆಯಾಗಿದೆ. ಎರಡು ವಾರ ಹಿಂದೆ ಕೆಜಿಗೆ 40ರಿಂದ 45ರೂ.ಇದ್ದ ಬೆಲೆ ಇದೀಗ 60ರಿಂದ 65ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

ಮಧ್ಯಮ ಗಾತ್ರದ ಈರುಳ್ಳಿಗೆ 50ರೂ.ಇದ್ದರೆ, ಸಣ್ಣ ಗಾತ್ರದ ಈರುಳ್ಳಿ ಬೆಲೆ 35ರಿಂದ 45 ರೂ.ವರೆಗೂ ಇದೆ. ಚಿಕ್ಕಮಗಳೂರು, ದಾವಣಗೆರೆ, ಮಂಗಳೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಪ್ರತಿ ಕೆಜಿಗೆ 50 ರಿಂದ 60 ರೂ.ನಂತೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ರಾಯಚೂರು, ವಿಜಯಪುರ, ಬಾಗಲಕೋಟೆಯಲ್ಲಿ ಕೆಜಿ ಈರುಳ್ಳಿಗೆ 40ರಿಂದ 48ರೂ.ಗಳವರೆಗೂ ಇದೆ ಎನ್ನುತ್ತಾರೆ ವ್ಯಾಪಾರಿ ಸುರೇಶ್‌ಚಂದ್ರ. 

ರಾಜ್ಯದಲ್ಲಿ ಈರುಳ್ಳಿ ಬಿತ್ತನೆ ಕಡಿಮೆಯಾಗಿದ್ದು, ಬೇಡಿಕೆಗೆ ತಕ್ಕಂತೆ ಫ‌ಸಲು ಸಿಗುತ್ತಿಲ್ಲ. ಮಾರುಕಟ್ಟೆಗೆ ರಾಜ್ಯದೆಲ್ಲೆಡೆಯಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣ ಶೇ.50ರಷ್ಟು ಕಡಿಮೆಯಾಗಿದೆ. ಮಹಾರಾಷ್ಟ್ರದಿಂದ ಬರುತ್ತಿದ್ದರೂ ಬೇಡಿಕೆಗೆ ತಕ್ಕಷ್ಟು ಇಲ್ಲ. ಇದು ಬೆಲೆ ಏರಿಕೆಗೆ ಕಾರಣ. ಮುಂದಿನ ಎರಡೂಮೂರು ತಿಂಗಳು ಇದೇ ಪರಿಸ್ಥಿತಿ
ಇರುವ ಸಾಧ್ಯತೆ ಇದೆ. 
ಉದಯ್‌, ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ

ತರಕಾರಿ ಬೆಲೆ ಜಾಸ್ತಿಯಾಗುತ್ತಲೇ ಇದೆ. ಕೆಲವು ದಿನಗಳ ಹಿಂದೆ 200 ರೂ.ಗೆ ನಾಲ್ಕು ಕೆಜಿ ಈರುಳ್ಳಿ ಮಾರಾಟ
ಮಾಡುತ್ತಿದ್ದವರು, ಇದೀಗ ಏಕಾಏಕಿ ಕೆಜಿಗೆ 60 ರೂ. ಎನ್ನುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೂ
ಕಾಳಜಿ ಇಲ್ಲ, ವ್ಯಾಪಾರಸ್ಥರಿಗೂ ಇಲ್ಲ. ಬಾಯಿಗೆ ಬಂದ ರೇಟು ಹೇಳುತ್ತಾರೆ. 
 ಶೋಭಾ ಪಾಟೀಲ್‌, ಗ್ರಾಹಕರು

Advertisement

Udayavani is now on Telegram. Click here to join our channel and stay updated with the latest news.

Next