ದೇವನಹಳ್ಳಿ: ಮಳೆ ಇಲ್ಲದೆ ಬರಗಾಲದ ಸ್ಥಿತಿಯಲ್ಲಿರುವ ರೈತರು ಮತ್ತು ಜನರು ಬರದ ಸಂಕಷ್ಟ ಎದುರಿಸುತ್ತಿದ್ದು, ಇತ್ತೀಚೆಗೆ ಟೊಮೆಟೋ ಬೆಲೆ ಏರಿಕೆ ಆಗಿತ್ತು. ಈಗ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ತಿಂಗಳಷ್ಟೇ ಟೊಮೆಟೋ ಬೆಲೆ ಗಗನಕ್ಕೇರಿದ್ದು, ಕೆ.ಜಿ.ಗೆ 200 ರೂ. ತಲುಪಿತ್ತು. ಗ್ರಾಮ್ ಲೆಕ್ಕದಲ್ಲಿ ಜನರು ಟೊಮೆಟೋ ಕೊಳ್ಳುವ ಪರಿಸ್ಥಿತಿ ಬಂದಿತ್ತು. ಈಗ ಈರುಳ್ಳಿ ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಲೆ ಏರಿಕೆಯಾಗಿದ್ದು, ಸಂಕಷ್ಟದ ಸಮಸ್ಯೆಗೆ ಸಿಲುಕಿದ್ದಾರೆ. ಈರುಳ್ಳಿ ಬೆಲೆ ಏರಿಕೆ ಮಾಡುತ್ತಲೇ ಇದ್ದು, ಬೆಲೆ ಏರಿಕೆಯಿಂದ ಜನ ತತ್ತರಿಸ ತೊಡಗಿದ್ದಾರೆ.
ಜನರ ಜೇಬಿಗೆ ಕತ್ತರಿ: ಈಗ ಕೆಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದರೆ ಮತ್ತೆ ಇನ್ನು ಕೆಲವು ಕಡೆ ಅನಾವೃಷ್ಟಿಯಿಂದ ಬೆಳೆಯಿಲ್ಲದೆ. ಈರುಳ್ಳಿ ಕೊರತೆ ಕಂಡು ಬಂದಿದೆ. ಹೀಗಾಗಿ, ಈರುಳ್ಳಿ ಬೆಲೆ ಏರಿಕೆ ಆಗುತ್ತಿದೆ. ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿದ್ದು, ಒಂದು ಕಡೆ ಮಳೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಮತ್ತೂಂದು ಕಡೆ ಬರಗಾಲ ಆವರಿಸಿದೆ. ಬೆಲೆ ಏರಿಕೆ ವಿದ್ಯುತ್, ಆಹಾರ ಪದಾರ್ಥಗಳ ದರದ ಜತೆ ಹಣ್ಣು ತರಕಾರಿಗಳ ಬೆಲೆಯು ಏರಿಕೆಯಾಗಿದೆ. ಈಗ ಈರುಳ್ಳಿ ಬೆಲೆ ಕೂಡ ಗಗನಕ್ಕೇರುತ್ತಿದ್ದು, ಜನರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ.
ಮಹಿಳೆಯರಿಗೆ ಕಣ್ಣಲ್ಲಿ ನೀರು: ಕಳೆದ ಬಾರಿ ಹೆಚ್ಚು ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿದ್ದರು. ಈರುಳ್ಳಿ ಬೆಲೆ ಏರಿಕೆ ಆಗಿರಲಿಲ್ಲ. ಪ್ರಸ್ತುತ ಮಳೆ, ಬೆಳೆ ಇಲ್ಲದೆ ಬೆಲೆ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಈರುಳ್ಳಿ ಕೈಗೆಟಕುತ್ತಿಲ್ಲವಾಗಿದೆ. ಈರುಳ್ಳಿ ಎಚ್ಚುವ ಮಹಿಳೆಯರಿಗೆ ಕಣ್ಣಲ್ಲಿ ನೀರು ಬರುವ ಸ್ಥಿತಿ ಬಂದೊದಗಿದೆ.
ಈರುಳ್ಳಿ ಬೆಲೆ ದಿಢೀರ್ ಏರಿಕೆ: ಗುಣಮಟ್ಟದ ಈರುಳ್ಳಿಯು 70 ರಿಂದ 80 ರೂಪಾಯಿ ಹಾಗೂ ಸಣ್ಣ ಮತ್ತು ಗುಣಮಟ್ಟವಿಲ್ಲದ ಈರುಳ್ಳಿಯು 60 ರೂ.ಗೆ ಮಾರಾಟವಾಗುತ್ತಿದೆ. ಇದೀಗ ಈರುಳ್ಳಿ ಬೆಲೆ 100 ರೂ. ದಾಟಿದರೂ ಆಶ್ಚರ್ಯ ಪಡುವಂತಿಲ್ಲ. ಕಡಿಮೆ ಉತ್ಪಾದನೆಯ ಪೂರೈಕೆ ಕೊರತೆಯಿಂದ ಈರುಳ್ಳಿ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದೆ. ನವರಾತ್ರಿ ಹಬ್ಬದ ನಂತರ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿರುವುದು. ಖರೀದಿದಾರರು ಮತ್ತು ಮಾರಾಟಗಾರರಲ್ಲಿ ಅಚ್ಚರಿ ಮೂಡಿಸಿದೆ.
ಹೋಟೆಲ್ ಉಪಾಹಾರದ ದರ ಹೆಚ್ಚಾಗುವ ಸಾಧ್ಯತೆ
ಯಾವುದೇ ಯಾವುದೇ ಪದಾರ್ಥ ಮಾಡಬೇಕಾದರೆ ಈರುಳ್ಳಿ ಇದ್ದರೆ ಚಂದ ಎಂದು ಮಹಿಳೆಯರು ಹೇಳುತ್ತಾರೆ. ಈರುಳ್ಳಿ ಇಲ್ಲದ ಯಾವ ಆಹಾರವೂ ಸಹ ಮಾಡಲು ಸಾಧ್ಯವಿಲ್ಲ. ಈರುಳ್ಳಿಯಿಂದ ಹಲವಾರು ಪದಾರ್ಥಗಳನ್ನು ಮಾಡುತ್ತಾರೆ. ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ ಹಾಗೂ ಮತ್ತಿತರ ಉಪಾಹಾರದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಹೆಚ್ಚಿನ ಬೆಲೆ ಏರಿಕೆಯಿಂದ ಹೋಟೆಲ್‌ಗಳಲ್ಲಿ ಎಲ್ಲಾ ಪದಾರ್ಥಗಳ ಮೇಲೆ ಬೆಲೆ ಏರಿಕೆ ಆಗುತ್ತಿದೆ.
ಈರುಳ್ಳಿ ಬೆಲೆ ಹೆಚ್ಚಾಗಿದ್ದರು ಕೊಂಡುಕೊಳ್ಳಲೇಬೇಕಾಗಿದೆ. ಈರುಳ್ಳಿ ಬೆಲೆ ಏರಿಕೆಯಿಂದ ಕಣ್ಣಲ್ಲಿ ನೀರು ಬರುವಂತಾಗಿದೆ. ಅಡುಗೆಗೆ 3-4 ಈರುಳ್ಳಿ ಮಾತ್ರ ಬಳಸುತ್ತಿದ್ದೇವೆ. ●
ಪವಿತ್ರಾ, ಗೃಹಿಣಿ
ಮಳೆಯ ಕೊರತೆ ಎದುರಿಸುತ್ತಿದ್ದು, ಬರಗಾಲ ಇರುವುದರಿಂದ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಗುಣಮಟ್ಟದ ಈರುಳ್ಳಿ ಬೇಕಾದರೆ 70 ರಿಂದ 80 ರೂಪಾಯಿ ನೀಡಬೇಕಾಗುತ್ತದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರಿನ ಕೆಆರ್ ಮಾರುಕಟ್ಟೆ ಹಾಗೂ ವಿವಿಧ ಕಡೆಗಳಿಂದ ಈರುಳ್ಳಿ ತಂದು ಮಾರಾಟ ಮಾಡುತ್ತಿದ್ದೇವೆ.
● ಆನಂದ್, ತರಕಾರಿ ವ್ಯಾಪಾರಿ
-ಎಸ್. ಮಹೇಶ