ಗಜೇಂದ್ರಗಡ: ಮಳೆ ಬಂದರೆ, ಬೆಳೆ ಬರೋಲ್ಲ. ಬೆಳೆ ಬರದಿದ್ದರೆ ನಮ್ಮ ಬದುಕು ನಡೆಯುವುದಿಲ್ಲ ಎನ್ನುವ ರೈತರ ಬದುಕು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಈ ಬಾರಿ ಅತಿವೃಷ್ಟಿ ಮಧ್ಯೆಯೂ ಅಲ್ಪಸ್ವಲ್ಪ ಬೆಳೆದ ಈರುಳ್ಳಿ ಬೆಳೆಗೆ ಸಮರ್ಪಕ ಬೆಲೆ ಸಿಗದ ಪರಿಣಾಮ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು ಬರುವಂತಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಮಳೆಯೂ ಸಂಪೂರ್ಣ ಸುರಿಯುವುದಲ್ಲದೇ ಅತಿಯಾದ ಮಳೆಯಿಂದಾಗಿ ಎರಿ ಭೂಮಿಯಲ್ಲಿ ತಾಲೂಕಿನಾದ್ಯಂತ ಈ ವರ್ಷ ಬೆಳೆದ ಉಳ್ಳಾಗಡ್ಡಿ (ಈರುಳ್ಳಿ) ಫಸಲು ರೈತರ ಕೈಗೆ ಸಿಗದೇ, ನೆಲಸಮವಾಗಿದೆ. ಇನ್ನೊಂದೆಡೆ ಅಲ್ಪಸ್ವಲ್ಪ ಫಸಲು ಬಂತಲ್ಲ ಎಂದು ತೃಪ್ತಿ ಪಡುತ್ತಿದ್ದ ಕೆಲ ರೈತರಿಗೆ ಬೆಲೆ ಕುಸಿತದ ಬರಸಿಡಿಲು ಬಡಿದಂತಾಗಿದೆ.
ಸತತ ಬೆಲೆ ಕುಸಿತದ ಆತಂಕವನ್ನು ಎದುರಿಸುತ್ತಾ ಬರುತ್ತಿರುವ ಈರುಳ್ಳಿ ಬೆಳೆಗಾರರಿಗೆ ಈ ಬಾರಿಯ ಭೀಕರ ಅತಿವೃಷ್ಟಿಯ ಮಧ್ಯೆಯೂ ಬೆಲೆ ಕುಸಿತರ ಕರಿ ನೆರಳು ಆವರಿಸಿದೆ. ಈ ಬಾರಿ ದುಬಾರಿ ಬೀಜ, ಬಿತ್ತನೆ, ಕಳೆ ನಿರ್ವಹಣೆ, ಗೊಬ್ಬರ ಹಾಕಿ ತಾಲೂಕಿನಲ್ಲಿ 13 ಸಾವಿರಕ್ಕೂ ಅ ಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬಿತ್ತನೆಯಾಗಿದೆ.
ಆದರೆ ಭಾರಿ ಮಳೆಯಿಂದ ತೇವಾಂಶ ಹೆಚ್ಚಾಗಿ ಅರ್ಧಕ್ಕೂ ಹೆಚ್ಚು ಬೆಳೆ ನಾಶವಾಗಿದೆ. ಬಿತ್ತಿದ ಬಹುಪಾಲು ಫಲ ನೀಡಿಲ್ಲ. ಇದರಿಂದ ಕೆಲ ರೈತರು ಮುಂದಿನ ಬೆಳೆಗಳನ್ನಾದರೂ ಪಡೆಯೋಣ ಎನ್ನುವ ಉದ್ದೇಶದಿಂದ ಹೊಲಗಳನ್ನೆಲ್ಲಾ ಹರಗಿ, ಕಡಲೆ ಬಿತ್ತನೆ ಮಾಡಿದ್ದಾರೆ. ಎರಿ ಪ್ರದೇಶಗಳಾದ ಸೂಡಿ, ಇಟಗಿ, ದ್ಯಾಮುಣಸಿ, ನೆಲ್ಲೂರ, ಮುಶಿಗೇರಿ, ಸರ್ಜಾಪುರ, ಬೇವಿನಕಟ್ಟಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ ಸೇರಿದಂತೆ ಇನ್ನಿತರ ಗ್ರಾಮ ಬಳಿಯ ಜಮೀನುಗಳಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕೆಲ ಕಡೆ ಹೇಳಿಕೊಳ್ಳುವಷ್ಟು ಫಸಲು ಬಂದಿಲ್ಲ. ಇನ್ನೊ ಕೆಲಕಡೆ ಬೆಳೆ ನಾಶವಾಗಿದೆ.
ಆದರೆ ಫಸಲು ಪಡೆದ ರೈತರು ಈರುಳ್ಳಿ ಬೆಳೆದ ತಪ್ಪಿಗೆ ರಾಶಿಯ ಮುಂದೆ ಕುಳಿತು ಕಣ್ಣೀರು ಸುರಿಸುವಂತಾಗಿದೆ. ಎರಿ ಪ್ರದೇಶದಲ್ಲಿ ಕಡಿಮೆ ಎಂದರೂ 2 ರಿಂದ 3 ಎಕರೆ ಜಮೀನು ಪ್ರತಿಯೊಬ್ಬ ರೈತರು ಹೊಂದಿದ್ದಾರೆ. ಈ ಬಾರಿ ಎಕರೆಗೆ 20 ರಿಂದ 30 ಸಾವಿರ ರೂ. ಖರ್ಚು ಮಾಡಿ, ಕನಿಷ್ಟ 100 ಪಿಸಿ ಈರುಳ್ಳಿ ಬೆಳೆದು ಸಾಲವಾದರೂ ತೀರಿತಲ್ಲ ಎಂದು ಹೊಸ ಆಸೆಯೊಂದಿಗೆ ಮಾರುಕಟ್ಟೆಗೆ ಹೋದರೆ ಅಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 800 ರಿಂದ 900 ವರೆಗೆ ಕುಸಿದಿದೆ. ಹಾಕಿದ ಬಂಡವಾಳ ಸಹ ಬಾರದಂತಾಗಿದೆ. ಈ ಬಾರಿಯಾದರೂ ಈರುಳ್ಳಿಗೆ ಹೆಚ್ಚು ಬೆಲೆ ಬರುತ್ತದೆ ಎಂದು ಆಶಾಭಾವನೆ ಹೊಂದಿ ಖರ್ಚು ಮಾಡಿದ್ದ ರೈತರು ಪ್ರಸ್ತುತ ದಿನ ಈರುಳ್ಳಿಗೆ ಬೆಲೆ ಇಳಿಮುಖವಾಗಿದ್ದನ್ನು ಕಂಡು ತಾನು ಬೆಳೆಗೆ ಹಾಕಿದ ಗೊಬ್ಬರ, ಬಿತ್ತನೆ ಬೀಜದ ಹಣ ಸಹ ಹಿಂದಿರುತ್ತದೆಯೋ ಇಲ್ಲವೊ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಇದೇ ಈರುಳ್ಳಿಗೆ 15 ದಿನಗಳ ಹಿಂದೆ ಕ್ವಿಂಟಲ್‌ಗೆ 2000 ರಿಂದ 2200 ರೂ.ರವರೆಗೆ ಮಾರಾಟವಾಗುತ್ತಿತ್ತು.
ಪದೇ, ಪದೇ ಬೆಲೆ ಕುಸಿತದ ಸಂಕಷ್ಟ ಅನುಭವಿಸುತ್ತಿರುವ ಈರುಳ್ಳಿ ಬೆಳೆಗಾರರ ಕಷ್ಟಕ್ಕೆ ಮುಕ್ತಿ ಇಲ್ಲದಂತಾಗಿದೆ. ಈ ಬಾರಿ ಅತಿವೃಷ್ಟಿಯಿಂದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ಅಲ್ಪಸ್ವಲ್ಪ ಈರುಳ್ಳಿ ಬೆಳೆದಿದ್ವಿ, ಆದರೆ ಬೆಲೆ ಕುಸಿತದಿಂದ ಬೆಳೆಗೆ ಮಾಡಿದ ಸಾಲವಾದರೂ ತೀರಿದ್ರೆ ಸಾಕಪ್ಪಾ ಎನ್ನುವಂತಾಗಿದೆ. -ಮುತ್ತಪ್ಪ ಹಾದಿಮನಿ, ಈರುಳ್ಳಿ ಬೆಳೆಗಾರ
-ಡಿ.ಜಿ ಮೋಮಿನ್