ಈರುಳ್ಳಿ ಕೃಷಿಯಲ್ಲಿ ಅಧಿಕ ಪ್ರಮಾಣದ ಇಳುವರಿ ಪಡೆದುಕೊಳ್ಳಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಈರುಳ್ಳಿ, ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ತರಕಾರಿಯಂತೆಯೂ, ಸಾಂಬಾರ ಪದಾರ್ಥದಂತೆಯೇ ಬೆಳೆಯ ಎಲ್ಲಾ ಹಂತಗಳಲ್ಲಿ ಉಪಯೋಗಿಸಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಇದನ್ನು ಪ್ರಮುಖ ಬೆಳೆಯಾಗಿಯೂ, ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತದೆ.
ಸಸ್ಯ ಪ್ರಚೋದಕಗಳ ಬಳಕೆ: ಬೀಜ ಬಿತ್ತಿದ 50 ದಿನಗಳ ನಂತರ ಮಿರಾಕ್ಯುಲಾನ್ 2000 ಪಿ.ಪಿ.ಎಂ (ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ) ಸಸ್ಯ ಸಂವರ್ಧಕದ ಸಿಂಪಡಣೆ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
ಸರದಿ ಬೆಳೆ ಪದ್ಧತಿ: ಮಳೆಯಾಶ್ರಯದಲ್ಲಿ ಈರುಳ್ಳಿಯನ್ನು ಮುಂಗಾರು ಹಂಗಾಮಿನಲ್ಲಿ 45 ಸೆಂ.ಮೀ ಅಂತರದಲ್ಲಿ ಕೂರಿಗೆಯಿಂದ ಬಿತ್ತನೆ ಮಾಡುವುದು. ಬೆಳೆ ಮಾಗುವ ಹಂತದ ಮೊದಲು, ಸರದಿ ಬೆಳೆಯಾಗಿ ಹಿಂಗಾರಿ ಜೋಳ ಮತ್ತು ಕಡಲೆಯನ್ನು ಈರುಳ್ಳಿ ಸಾಲುಗಳ ಮಧ್ಯೆ ಬಿತ್ತನೆ ಮಾಡುವುದರಿಂದ ಹೆಚ್ಚು ಆದಾಯ ಪಡೆಯಬಹುದು.
ಸಸ್ಯ ಸಂರಕ್ಷಣೆ: ಥ್ರಿಪ್ಸ್ ನುಶಿ- ಫಿಪ್ರೊನಿಲ್ 5 ಎಸ್.ಸಿ. 1 ಮಿ.ಲೀ. ಅಥವಾ 0.2 ಗ್ರಾಂ ಅಸಿಟಮಿಪ್ರಿಡ್ ಅಥವಾ 1.7 ಮಿ.ಲೀ ಡೈಮಿಥೋಯೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೇರು ಕತ್ತರಿಸುವ ಹುಳುಗಳ ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ 0.15 ಮಿ.ಲೀ ಕ್ಲೊರಾಮಟ್ರಿನಿಲಿಪ್ರೊಲ್ 18.5 ಎಸ್.ಸಿ. ಅಥವಾ 0.12 ಮಿ.ಲೀ. ಸ್ಟ್ರೆನೋಸ್ಯಾಡ್ 45 ಎಸ್.ಸಿ. ಅಥವಾ 2 ಮಿ.ಲೀ. ಕ್ಲೋರೈರಿಫಾಸ್ ಬೆರೆಸಿ ಗಿಡದ ಸುತ್ತಲೂ ಸಿಂಪಡಿಸಿ.
ಎಲೆ ಮಚ್ಚೆರೋಗಕ್ಕೆ ಮದ್ದು: ಪ್ರತಿ ಕಿ.ಗ್ರಾಂ ಬೀಜವನ್ನು 5 ಗ್ರಾಂ ಸುಡೋಮೋನಾಸ್ ಪೂÉರೋಸೆನ್ಸ್‌ನಿಂದ ಉಪಚರಿಸಬೇಕು. ಬಿತ್ತಿದ 3, 9 ಮತ್ತು 11 ವಾರಗಳ ನಂತರ 2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲೂ.ಪಿ ಅಥವಾ 1 ಮಿ.ಲೀ ಡೈಫೆನ್‌ಕೊನಜೋಲ್ 25 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ರೋಗ ಕಂಡು ಬಂದಾಗ ಸಿಂಪಡಿಸಬೇಕು.
15 ದಿನಗಳ ನಂತರ 5 ಗ್ರಾಂ ಸುಡೋಮೋನಾಸ್ ಫ್ಲೊರೋಸೆನ್ಸ್‌ಅನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಣೆ ಮಾಡಬೇಕು. ರೋಗದ ಲಕ್ಷಣಗಳು ಮತ್ತೆ ಕಂಡು ಬಂದಲ್ಲಿ 1 ಮಿ.ಲಿ ಡೈಫೆನ್‌ಕೊನಜೋಲ್ 25 ಇ.ಸಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.
ಹೆಚ್ಚಿನ ಮಾಹಿತಿಗೆ: 9900145705 (ಬದರಿಪ್ರಸಾದ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ), 9480696319 (ಎಂ. ಬಿ. ಪಾಟೀಲ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ)
* ರೇಣುಕಾ ತಳವಾರ