Advertisement

ಮಹಮ್ಮದರ “ಸುಲ್ತಾನ’ನಿಗೆ ಎಲ್ಲೆಡೆ  ಮನ್ನಣೆ

12:50 AM Jan 28, 2019 | Harsha Rao |

ಉಡುಪಿ: ಗಣರಾಜ್ಯೋತ್ಸವ ದಿನದಂದು ಓಂಗೋಲ್‌ ತಳಿಯ ದೊಡ್ಡ ಹೋರಿ “ಸುಲ್ತಾನ್‌’ ಎಲ್ಲರ ಮೆಚ್ಚುಗೆಗೆ 
ಪಾತ್ರವಾಯಿತು. ಈ ಸುಲ್ತಾನನ ಯಜಮಾನ ಬ್ರಹ್ಮಾವರದ ಉಪ್ಪಿನಕೋಟೆ ಯಲ್ಲಿ ಮಹಮ್ಮದ್‌ ಇರ್ಷಾದ್‌ ಅಬಿದಿನ್‌. ಅವರು ದೇಸೀ ಗೋ ತಳಿಗಳ ಸಾಕಣೆಯಲ್ಲಿ ನಿರತರು. ಇವರಲ್ಲಿ ಓಂಗೋಲ್‌, ಗೀರ್‌, ಸಾಹಿವಾಲ್‌, ಕೆಂಪು ಸಿಂಧಿ ಈ ನಾಲ್ಕು ತಳಿಗಳ 23 ದನಗಳಿವೆ. 

Advertisement

ಸುಲ್ತಾನ್‌ ಇತ್ತೀಚಿಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ರಾಜ್ಯ ಮಟ್ಟದ ಪಶು ಮೇಳದಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿದೆ.  ಅಷ್ಟೇ ಅಲ್ಲದೆ, ಆಳ್ವಾಸ್‌ ನುಡಿಸಿರಿ, ಬ್ರಹ್ಮಾವರದ ಕೃಷಿಮೇಳಗಳಲ್ಲಿ ಬಹುಮಾನಗಳು ಬಂದಿವೆ. ಸುಲ್ತಾನ್‌ಗೆ ವರ್ಷ ಆರು. ತೂಕ ಮಾತ್ರ 1,462 ಕೆ.ಜಿ. ಎತ್ತರ 6.2 ಅಡಿ, ಉದ್ದ 8.5 ಅಡಿ. ನೋಡಿದರೆ ಹೆದರಿಕೆ ಯಾಗಬೇಕು, ಆದರೆ ಅಷ್ಟೇ ಸೌಮ್ಯ, ಚಿಕ್ಕ ಬಾಲಕ ಫೈಜಾನ್‌ ಮೇಲೆ ಹತ್ತಿ ಕುಳಿತರೂ ಮಾತನಾಡೋಲ್ಲ. 

ಹಸಿ ಜೋಳದ ಗಿಡ, ಒಣಮೇವು, ಧಾನ್ಯಗಳ ಪೌಡರ್‌, ಒಣಖರ್ಜೂರ, ಹಸಿಗಡಲೆ, ಆಲಿವ್‌ ಎಣ್ಣೆ ಈತನ ಆಹಾರ. 
ಈತನಿಗೆ ಸಾಸಿವೆ ಎಣ್ಣೆಯ ಮಸಾಜ್‌ ಇರ್ಷಾದ್‌ ಮಾಡುತ್ತಾರೆ. ಸುಲ್ತಾನನ ದಿನದ ಆಹಾರದ ಖರ್ಚು 650 ರೂ. ಈತನ ಆಕರ್ಷಣೆಗೆ ಮೆಚ್ಚಿ ಮೂಡಬಿದಿರೆಯ ಡಾ| ಮೋಹನ ಆಳ್ವರು ನುಡಿ ಸಿರಿ ಸಂದರ್ಭ 1 ಲ.ರೂ. ಇನಾಮು ಕೊಟ್ಟರು. ಹೀಗೆ ಇವನಿಗೆ ದಾನಿಗಳೂ ಇದ್ದಾರೆ. ಎಂಟು ತಿಂಗಳು ಇರುವಾಗ ತಂದು ಸಾಕಿದ್ದಾರೆ. ಈತನ ಬೆಲೆ 15 ಲ.ರೂ. ಸಿಂಧನೂರಿನ ಪಶುಜಾತ್ರೆಯಲ್ಲಿ ಕೊಡುತ್ತೀರಾ ಎಂದು ಕೇಳಿದಾಗ “ಇಲ್ಲ ಕೋಡೊಲ್ಲ’ ಎಂದು ಮಹಮ್ಮದ್‌ ಹೇಳಿದರು. ಕಾರಣವೆಂದರೆ ಈತನ ಮೇಲೆ ಇರಿಸಿದ ಪ್ರೀತಿ.

ಈತ ಕೇವಲ ಜಾತ್ರೆಯ ಆಕರ್ಷಣೆ ಮಾತ್ರವಲ್ಲ, ಬೀಜದ ಹೋರಿ ಕೂಡ. ಇರ್ಷಾದ್‌ ನಿತ್ಯ 78 ಲೀ. ದೇಸೀ ಹಾಲನ್ನು ದನಗಳಿಂದ ಪಡೆಯುತ್ತಿದ್ದಾರೆ. ಎ2 ದೇಸೀ ಹಾಲಿಗೆ ಲೀಟರ್‌ಗೆ 120 ರೂ. ಮಾರುಕಟ್ಟೆ ಬೆಲೆಯಾದರೆ ಜನಪ್ರಿಯವಾಗಬೇಕೆಂಬ ನಿಟ್ಟಿನಲ್ಲಿ ಕೇವಲ 70 ರೂ.ನಲ್ಲಿ ಬ್ರಹ್ಮಾವರ ಆಸುಪಾಸಿನಲ್ಲಿ ಮಾರಾಟ ಮಾಡುತ್ತಾರೆ. 

ಫ್ಲ್ಯಾಟ್‌ ಖರೀದಿಸದೆ ಕೃಷಿ ಭೂಮಿ ಖರೀದಿಸಿದ ಫ‌ಲ!
ಕೃಷಿ, ದೇಸೀ ಹೈನುಗಾರಿಕೆ ಕಾಯಕವನ್ನು ಇರ್ಷಾದ್‌ ಅವರ ತಂದೆ ಜೈನುಲ್ಲಾ ಅಬಿದಿನ್‌ 1987ರಲ್ಲಿ ಆರಂಭಿಸಿದರು. ಇವರು ಕೊಲ್ಲಿ ರಾಷ್ಟ್ರಗಳಲ್ಲಿ ಇದ್ದು ಊರಿಗೆ ಬಂದಾಗ ಇವರೊಡನೆ ಇದ್ದವರು ಫ್ಲ್ಯಾಟ್‌ ಖರೀದಿಸಿದರೆ ಇವರು ಮಾತ್ರ ಕೃಷಿ ಭೂಮಿ ಖರೀದಿಸಿದರು. ಇರ್ಷಾದ್‌ ತಮ್ಮ ಶೇಖ್‌ ಮುದಸ್ಸರ್‌ ಯಾರಿಗಾದರೂ ದೇಸೀ ತಳಿ ದನಗಳು ಬೇಕಾದರೆ ವಿವಿಧೆಡೆ ಸಂಚರಿಸಿ ಹಸು ತಂದು ಕೊಡುತ್ತಾರೆ. ಕೃಷಿ, ಹೈನುಗಾರಿಕೆಯಲ್ಲಿ ಲಾಭವಿಲ್ಲ ಎನ್ನುವ ದಿನಗಳಲ್ಲಿ ನಮ್ಮ ಆದಾಯ ವಾರ್ಷಿಕ 15 ರಿಂದ 20 ಲಕ್ಷ ರೂ. ಎಂದು ಇರ್ಷಾದ್‌ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next