ಮುಂಬಯಿ : ONGC ಸಂಸ್ಥೆಗಾಗಿ ಕರ್ತವ್ಯದಲ್ಲಿದ್ದ, ಇಬ್ಬರು ಪೈಲಟ್‌ಗಳು ಮತ್ತು ಐವರು ಪ್ರಯಾಣಿಕರನ್ನು ಒಳಗೊಂಡಿದ್ದ, ಪವನಹಂಸ ಹೆಲಿಕಾಪ್ಟರ್ ಒಂದು ಇಂದು ಶನಿವಾರ ಮುಂಬಯಿ ದೂರ ತೀರದಲ್ಲಿ ನಾಪತ್ತೆಯಾಗಿದ್ದು ಈ ತನಕ ನಾಲ್ಕು ಶವಗಳನ್ನು ಮೇಲಕ್ಕೆತ್ತಲಾಗಿದೆ.
ನತದೃಷ್ಟ ಪವನಹಂಸ ಹೆಲಿಕಾಪ್ಟರ್ ಇಂದು ಬೆಳಗ್ಗೆ 10.20ರ ಹೊತ್ತಿಗೆ ಜುಹೂದಿಂದ ಹೊರಟಿತ್ತು. ಒಎನ್‌ಜಿಸಿ ಯ ಉತ್ತರ ಕ್ಷೇತ್ರದಲ್ಲಿ ಅದು 10.58ರ ಹೊತ್ತಿಗೆ ಇಳಿಯುವುದಿತ್ತು. ಆದರೆ ಹೆಲಿಕಾಪ್ಟರ್ ಆಗಸಕ್ಕೆ ನೆಗದ ಕೆಲವೇ ನಿಮಿಷಗಳಲ್ಲಿ ವಾಯು ಸಾರಿಗೆ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿದು ಹೋಗಿತ್ತು. ಸಂಪರ್ಕವನ್ನು ಪುನರ್ ಸ್ಥಾಪಿಸುವ ಯತ್ನಗಳು ವಿಫಲವಾದವು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾಪತ್ತೆಯಾಗಿರುವ ಪವನಹಂಸ ಹೆಲಿಕಾಪ್ಟರ್ ಶೋಧಕ್ಕೆ ಈಗ ಐದು ಸ್ಪೀಡ್ ಬೋಟ್‌ಗಳು, ಒಂದು ಎಂಎಸ್‌ವಿ ಮತ್ತು ಒಂದು ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಮಧ್ಯಾಹ್ನ ಒಎನ್‌ಜಿಸಿ ಬಿಡುಗಡೆ ಮಾಡಿರುವ ಪ್ರಕಟನೆ ತಿಳಿಸಿದೆ.
ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾ ಪಡೆ ಕೂಡ ರಕ್ಷಣಾ ಕಾರ್ಯಾಚರಣೆಗೆ ನೆರವಾಗುತ್ತಿವೆ. ಒಎನ್‌ಜಿಸಿಯ ಉನ್ನತ ಆಡಳಿತ ವರ್ಗ ಈ ರಕ್ಷಣಾ ಕಾರ್ಯದ ಉಸ್ತುವಾರಿ ನಡೆಸುತ್ತಿದೆ. ಒಎನ್‌ಜಿಸಿ ಸಿಎಂಡಿ ಶಶಿ ಶಂಕರ್ ಅವರು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಲು ಸ್ಥಳಕ್ಕೆ ಧಾವಿಸಿದ್ದಾರೆ.
ಈ ನಡುವೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಾನು ಕೂಡ ಮುಂಬಯಿಗೆ ಧಾವಿಸುತ್ತಿರುವುದಾಗಿ ತಿಳಿಸಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಮಣ್ ಜತೆಗೆ ಚರ್ಚಿಸುವುದಾಗಿ ಹೇಳಿದ್ದಾರೆ.