ಒನ್ ಪ್ಲಸ್ ಕಂಪೆನಿ ಈಗ ಫ್ಲಾಗ್‌ಶಿಪ್ ಫೋನ್ ಗಳನ್ನು ಮಾತ್ರವಲ್ಲದೇ ಮಧ್ಯಮ ಮೇಲ್ಮಧ್ಯಮ ವರ್ಗದಲ್ಲೂ ಅನೇಕ ಮೊಬೈಲ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಆಯಾ ವರ್ಷದ ಫ್ಲಾಗ್‌ಶಿಪ್ ಫೋನ್ ಗಳ ಸರಣಿಯಲ್ಲಿ ಆರ್ ಸರಣಿಯಲ್ಲಿ ಫ್ಲಾಗ್ ಶಿಪ್ ಫೋನ್ ಗಳಿಗೆ ಹತ್ತಿರವಾದ ಸ್ಪೆಸಿಫಿಕೇಷನ್ ಗಳುಳ್ಳ ಫೋನ್ ಗಳನ್ನು ಹೊರತರುತ್ತಿದೆ. ಕಳೆದ ವರ್ಷ 9 ಪ್ರೊ ಫ್ಲಾಗ್‌ಶಿಪ್ ಫೋನ್ ಆದರೆ, 9 ಆರ್ ಅದರ ಜೂನಿಯರ್ ನಂತಿತ್ತು. ಈ ಬಾರಿ 10 ಪ್ರೊ. ಫ್ಲಾಗ್‌ಶಿಪ್ ಆಗಿದ್ದರೆ 10 ಆರ್ ಅದರ ಜೂನಿಯರ್. ಈ 10 ಆರ್ ಫೋನ್ ಗುಣವಿಶೇಷಗಳ ವಿವರ ಇಲ್ಲಿದೆ.
ಇದರ ದರ 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 38,999 ರೂ. ಇದೆ. 12+256 ಜಿಬಿ (80 ವ್ಯಾಟ್ಸ್ ಸೂಪರ್ ವೂಕ್ ಚಾರ್ಜರ್) 42,999 ರೂ. 12+256 ಜಿಬಿ (150 ವ್ಯಾಟ್ಸ್ ಸೂಪರ್ ವೂಕ್ ಚಾರ್ಜರ್) 43,999 ರೂ. ಇದೆ.
ವಿನ್ಯಾಸ: ಇತ್ತೀಚಿಗೆ ಬರುತ್ತಿರುವ ಫೋನ್‌ಗಳ ವಿನ್ಯಾಸ, ಎಡ್ಜ್ ಗಳು ಬಾಕ್ಸ್ ಆಕಾರದಲ್ಲಿದ್ದು, ಫ್ಲಾಟ್ ಆಗಿರುತ್ತವೆ. ಐಫೋನಿನ ವಿನ್ಯಾಸದಂತೆ. ಅಂಚುಗಳು ಮಡಿಚಿರುವುದಿಲ್ಲ. ಈ ಫೋನ್ ನೋಡಿದಾಗ ತಕ್ಷಣ ಹೊಸ ವಿನ್ಯಾಸ ಗೋಚರಿಸುತ್ತದೆ. ಹಿಂಬದಿಯ ಪ್ಯಾನಲ್ ಮತ್ತು ಫ್ರೇಮ್ ಪ್ಲಾಸ್ಟಿಕ್‌ನದಾಗಿದೆ. ಈ ಫೋನು ಹೊಳಪಿಲ್ಲದ ಕಪ್ಪು ಹಾಗೂ ಹಸಿರು ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಹಿಂಬದಿಯ ವಿನ್ಯಾಸ ಹೊಸ ರೀತಿಯಲ್ಲಿದೆ. ಅರ್ಧ ಭಾಗ ಕಪ್ಪು ಗೀರು ಹಾಗೂ ಇನ್ನರ್ಧ ಭಾಗ ಹೊಳಪಿಲ್ಲದ ಕಪ್ಪು ಬಣ್ಣದಲ್ಲಿದೆ. ಎಡ ಮೂಲೆಯಲ್ಲಿ ಚಚ್ಚೌಕಾರಾದಲ್ಲಿ ಮೂರು ಲೆನ್ಸಿನ ಕ್ಯಾಮರಾ ಬಂಪ್ ಇದ್ದು ಸ್ವಲ್ಪ ಮೇಲೆ ಉಬ್ಬಿದೆ. ಫೋನಿನ ಬಲಬದಿಯಲ್ಲಿ ಆನ್ ಆಫ್ ಬಟನ್ ಇದ್ದು, ಎಡಬದಿಯಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಎರಡು ಪ್ರತ್ಯೇಕವಾದ ಬಟನ್ ಗಳಿವೆ. ಒನ್‌ಪ್ಲಸ್‌ನ ವಿಶೇಷವಾದ ರಿಂಗ್, ವೈಬ್ರೇಟ್, ಸೈಲೆಂಟ್ ಮೋಡ್ ಗೆ ನಿಲ್ಲಿಸಿಕೊಳ್ಳುವ ಸ್ಲೈಡ್ ಬಟನ್ ಇದರಲ್ಲಿಲ್ಲ. ಫೋನಿನ ತಳಭಾಗದಲ್ಲಿ ಎಡಕ್ಕೆ ಸಿಮ್ ಟ್ರೇ, ಮಧ್ಯದಲ್ಲಿ ಚಾರ್ಜಿಂಗ್ ಪೋರ್ಟ್ ಹಾಗೂ ಬಲಕ್ಕೆ ಸ್ಪೀಕರ್ ಗ್ರಿಲ್ ಇದೆ. ಒಟ್ಟಾರೆ ವಿನ್ಯಾಸ ಆಕರ್ಷಕವಾಗಿದೆ. ಫೋನು 186 ಗ್ರಾಂ ತೂಕವಿದ್ದು, ಹಿಡಿದುಕೊಳ್ಳಲು ಹಗುರವಾಗಿದೆ. ಜೇಬಿನಲ್ಲಿಟ್ಟುಕೊಳ್ಳಲು ದೊಡ್ಡದು ಎನಿಸುವುದಿಲ್ಲ.
ಪರದೆ: ಇದು 6.7 ಇಂಚಿನ 2400*1080 ರೆಸ್ಯೂಲೇಷನ್ ಉಳ್ಳ ಅಮೋಲೆಡ್ ಡಿಸ್‌ಪ್ಲೆ ಹೊಂದಿದೆ. ಪರದೆಯು 120 ಹರ್ಟ್ಜ್ ರಿಫ್ರೆಶ್‌ರೇಟ್ ಉಳ್ಳದ್ದಾಗಿದೆ. ಇದನ್ನು 90, 60 ಹರ್ಟ್ಜ್ ಗೂ ನಿಲ್ಲಿಸಿಕೊಳ್ಳಬಹುದು. ಮೂರು ರೀತಿಯ ಡಿಸ್‌ಪ್ಲೇ ಪ್ರೊಫೈಲ್ ಅನ್ನು ನೀವು ಹೊಂದಿಸಿಕೊಳ್ಳಬಹುದಾಗಿದೆ. ವಿವಿಡ್, ನ್ಯಾಚುರಲ್ ಅಥವಾ ಪ್ರೊ ಮೋಡ್ ಗಳಲ್ಲಿ ನಿಮಗೆ ಇಷ್ಟವಾದ ಪ್ರೊಫೈಲ್ ಸೆಟ್ ಮಾಡಿಕೊಳ್ಳಬಹುದು.
ಅಮೋಲೆಡ್ ಪರದೆ ಆಕರ್ಷಕವಾಗಿದ್ದು, ಫೋಟೋಗಳು, ವಿಡಿಯೋಗಳು, ಮೊಬೈಲ್‌ನ ಇಂಟರ್‌ಫೇಸ್ ವರ್ಣರಂಜಿತವಾಗಿ ಕಾಣುತ್ತದೆ.
ಅತ್ಯಂತ ವೇಗದ ಚಾರ್ಜಿಂಗ್: ಈ ಮೊಬೈಲ್ ಫೋನಿನ ವಿಶೇಷವೆಂದರೆ 12 ಜಿಬಿ + 256 ಜಿಬಿ ಆವೃತ್ತಿಯಲ್ಲಿ 150ನ ವ್ಯಾಟ್ಸ್‌ನ ಅತ್ಯಂತ ವೇಗದ ಚಾರ್ಜರ್. ಇದಕ್ಕೆ ಸೂಪರ್ ವೂಕ್ ಚಾರ್ಜರ್ ಎಂಬ ಹೆಸರು ನೀಡಲಾಗಿದೆ.
ಇದನ್ನೂ ಓದಿ:ಕರ್ನಾಟಕ ಪ್ರೀಮಿಯರ್ ಲೀಗ್ ಬದಲು ಇನ್ನು ಕೆಎಸ್‌ಸಿಎ ಟಿ20 ಕೂಟ
80 ವ್ಯಾಟ್ಸ್ ಚಾರ್ಜರ್ ಇರುವ ಮಾದರಿಗೆ 5000 ಎಂಎಎಚ್ ಬ್ಯಾಟರಿ ನೀಡಲಾಗಿದ್ದು, 150 ವ್ಯಾಟ್ಸ್ ಚಾರ್ಜರ್ ಇರುವ ಮಾದರಿಗೆ 4500 ಎಂಎಎಚ್ ಬ್ಯಾಟರಿ ಕೊಡಲಾಗಿದೆ. 150 ವ್ಯಾಟ್ಸ್ ಚಾರ್ಜರ್‌ನಲ್ಲಿ ಶೇ. 1ರಿಂದ ಶೇ. 30ರಷ್ಟು ಚಾರ್ಜ್ ಆಗಲು ಕೇವಲ ನಾಲ್ಕು ನಿಮಿಷ ತೆಗೆದುಕೊಳ್ಳುತ್ತದೆ! ಕೇವಲ 20 ನಿಮಿಷದಲ್ಲಿ ಶೇ. 1 ರಿಂದ ಶೇ. 100ರಷ್ಟು ಚಾರ್ಜ್ ಆಗುತ್ತದೆ! ಸದ್ಯ ಮಾರುಕಟ್ಟೆಯಲ್ಲಿರುವ ಫೋನ್ ಗಳಲ್ಲಿ ಅತ್ಯಂತ ವೇಗದ ಚಾರ್ಜರ್ ಹೊಂದಿರುವ ಫೋನ್ ಗಳಲ್ಲಿ ಇದು ಅಗ್ರಪಂಕ್ತಿಯಲ್ಲಿದೆ.
ಪ್ರೊಸೆಸರ್: ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ ಪ್ರೊಸೆಸರ್ ಇದೆ. ಇದು ಫ್ಲಾಗ್ ಶಿಪ್ ಪ್ರೊಸೆಸರ್ ಆಗಿದ್ದು, ವೇಗವಾಗಿ ಮತ್ತು ಮೃದುವಾಗಿ ಕಾರ್ಯನಿರ್ವಹಿಸುತ್ತದೆ. ಸ್ನಾಪ್ ಡ್ರಾಗನ್ 888 ಗೆ ಬಹುತೇಕ ಸಮನಾದ ವೇಗವುಳ್ಳದ್ದಾಗಿದೆ. ಫೋನಿನ ವೇಗ ಫ್ಲಾಗ್‌ಶಿಪ್ ಫೋನಿನಂತೆಯೇ ಇದೆ. ಆಕ್ಸಿಜನ್ ಓಎಸ್ 12.1 ಇದ್ದು, ಆಂಡ್ರಾಯ್ಡ್ 12 ಆವೃತ್ತಿ ಹೊಂದಿದೆ. ಇದರಲ್ಲಿ ಐಕಾನ್ ಗಳ ಆಯ್ಕೆ ಹೆಚ್ಚಿದೆ. ವಾಲ್‌ಪೇಪರ್‌ಗಳು, ಸೆಟಿಂಗ್ ಗಳು ನೀಟಾಗಿದ್ದು, ಗಜಿಬಿಜಿ ಇಲ್ಲದೇ ಸದಾಸೀದಾ ಆಗಿ ನೋಡಲು ಹಿತವಾಗಿದೆ. ಡಿಫಾಲ್ಟ್ ವಾಲ್‌ಪೇಪರ್ ನೀಲಿ ಬಣ್ಣಕ್ಕೆ ಆದ್ಯತೆ ನೀಡಲಾಗಿದೆ. ಅದರ ಹೊರತಾಗಿಯೂ ವಿವಿಧ ಶೈಲಿಯ ವಾಲ್ ಪೇಪರ್ ಗಳ ಆಯ್ಕೆಯಿದೆ.
ಕ್ಯಾಮರಾ: ಇದು ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಹೊಂದಿದೆ. 50 ಮೆಪಿ. ಸೋನಿ ಐಎಂಎಕ್ಸ್ 766 ಲೆನ್ಸ್ ಹೊಂದಿದ್ದು, 8 ಎಪಿ. ಸೋನಿ ಐಎಂಎಕ್ಸ್ 355 ಅಲ್ಟ್ರಾ ವೈಡ್ ಹಾಗೂ 2 ಎಂಪಿ ಮಾಕ್ರೋ ಲೆನ್ಸ್ ಹೊಂದಿದೆ. ಮುಂಬದಿ ಕ್ಯಾಮರಾ 16 ಮೆ.ಪಿ. ಸ್ಯಾಮ್ ಸಂಗ್ ಲೆನ್ಸ್ ಒಳಗೊಂಡಿದೆ. ಹಿಂಬದಿ ಕ್ಯಾಮರಾದ ಚಿತ್ರಗಳ ಗುಣಮಟ್ಟ ಉತ್ತಮವಾಗಿದೆ. ಡೀಸೆಂಟ್ ರೆಸ್ಯೂಲೇಷನ್ ಮತ್ತು ಡೀಟೇಲ್ ನೀಡುತ್ತವೆ. ಹೊರಾಂಗಣ ಮಾತ್ರವಲ್ಲ, ಒಳಾಂಗಣದಲ್ಲೂ ಚಿತ್ರಗಳ ಗುಣಮಟ್ಟ ಐವತ್ತುಸಾವಿರ ರೂ. ಒಳಗಿನ ಫೋನ್ ಗಳಿಗೆ ಹೋಲಿಸಿದಾಗ ಉತ್ತಮವಾಗಿದೆ. ಸೆಲ್ಫಿ ಕ್ಯಾಮರಾ 16 ಮೆ.ಪಿ. ಇದ್ದು, ಅದರ ಚಿತ್ರಗಳು ಇನ್ನಷ್ಟು ಸ್ಪಷ್ಟತೆಯನ್ನು ಬೇಡುತ್ತವೆ.
ಒಟ್ಟಾರೆಯಾಗಿ ಒನ್ ಪ್ಲಸ್ 10 ಆರ್ ಫೋನು ಸ್ಪರ್ಧಾತ್ಮಕ ಗುಣವಿಶೇಷಗಳನ್ನು ಹೊಂದಿದೆ. ಇದು ಉತ್ತಮ ಕಾರ್ಯಾಚರಣೆ, ಆಕರ್ಷಕ ವಿನ್ಯಾಸ, ಉತ್ತಮ ಪರದೆ ಹಾಗೂ ಅತ್ಯಂತ ವೇಗದ ಬ್ಯಾಟರಿ ಚಾರ್ಜಿಂಗ್ ಮೂಲಕ ಗಮನ ಸೆಳೆಯುತ್ತದೆ. ಮುಂಬದಿ ಕ್ಯಾಮರಾ ಗುಣಮಟ್ಟ ಇನ್ನಷ್ಟು ಇರಬೇಕಿತ್ತು. 32 ಮೆಗಾಪಿಕ್ಸಲ್ ಲೆನ್ಸ್ ನೀಡಬಹುದಿತ್ತು.
-ಕೆ.ಎಸ್. ಬನಶಂಕರ ಆರಾಧ್ಯ.