ಝೆನ್‌ಗುರುವೊಬ್ಬರ ಬಳಿ ಕುಸುರಿ ಮಾಡಿದ ಬಹಳ ಸುಂದರವಾದ ಚಹಾ ಕಪ್ ಇತ್ತು. ಸ್ಫಟಿಕದಂತೆ ಹೊಳೆಯುತ್ತಿದ್ದ ಕಪ್ ಅದು. ಆ ಗುರುಗಳ ಮಾಜಿ ಶಿಷ್ಯ ಅದನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆ ಶಿಷ್ಯನ ಬಗ್ಗೆ ಗುರುಗಳಿಗೂ ಭಾರೀ ಪ್ರೀತಿ ಇತ್ತು. ಪ್ರತೀ ದಿನ ಅದೇ ಕಪ್‌ನಲ್ಲಿ ಚಹಾ ಕುಡಿಯುತ್ತಿದ್ದರು.
ಅವರನ್ನು ಭೇಟಿಯಾಗಲು ಬಂದ ಅತಿಥಿಗಳ ಬಳಿ, “ಇದು ನನ್ನ ಶಿಷ್ಯ ಕೊಟ್ಟ ಕಪ್’ ಎಂದು ತೋರಿಸಿ, ಆತನ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು. ಆದರೆ, ಪ್ರತೀ ದಿನ ಬೆಳಿಗ್ಗೆ ಆ ಕಪ್ ಅನ್ನು ಕೈಯಲ್ಲಿ ಹಿಡಿದು ಅವರೊಂದು ಸಾಲನ್ನು ಉದ್ಘರಿಸುತ್ತಿದ್ದರು. “ಈ ಕಪ್ ಅದಾಗಲೇ ಒಡೆದು ಹೋಗಿದೆ’.
ಒಂದು ದಿನ ಝೆನ್‌ಗುರುಗಳ ಭೇಟಿಗೆ ಒಬ್ಬ ವ್ಯಕ್ತಿ ಬಂದ. ಗಡಿಬಿಡಿ ಸ್ವಭಾವದ ವ್ಯಕ್ತಿಯಂತೆ ಕಾಣಿಸಿದ. ಬೆಳಿಗ್ಗೆ ಚಹಾ ಕುಡಿದು ತೊಳೆದಿಟ್ಟಿದ್ದ ಕಪ್‌ನ್ನು ನೋಡುತ್ತ, ಕಣ್ಣರಳಿಸಿದ ಆತ, ಅದನ್ನು ಕೈಗೆತ್ತಿಕೊಂಡ. “ಎಷ್ಟು ಚಂದವಿದೆ ಇದು !’ ಎನ್ನುತ್ತ ಅದನ್ನು ಸ್ವಸ್ಥಾನದಲ್ಲಿ ಇರಿಸಲು ಪ್ರಯತ್ನಿಸುವಾಗ, ಅದು ಕೈ ಜಾರಿ ಕೆಳಗೆ ಬಿತ್ತು.
ಆಶ್ರಮದಲ್ಲಿದ್ದ ಇತರರು ಗಾಬರಿಯಿಂದ ಅಲ್ಲಿಗೆ ಓಡಿ ಬಂದರು. ತಮ್ಮ ಗುರುಗಳ ಪ್ರೀತಿಯ ಕಪ್ ಅನ್ನು ಒಡೆದು ಹಾಕಿದ ಅತಿಥಿಯ ಕಡೆಗೆ ಅಸಮಾಧಾನದ ಒಂದು ಚಹಾ ಒಂದು ಚಹಾ ಕಪ್ ಒಂದು ಝೆನ್ ಕತೆ ನೋಟ ಬೀರಿದರು. ಆದರೆ, ಗುರುಗಳ ಮುಖ ಪ್ರಶಾಂತವಾಗಿತ್ತು. “ಸರಿ, ಮುಂದಿನ ಕೆಲಸ ನೋಡಿ’ ಎನ್ನುತ್ತ ಅವರು, ಮೂಲೆಯಲ್ಲಿದ್ದ ಪೊರಕೆಯೆತ್ತಿಕೊಂಡು ಕಪ್‌ನ ಚೂರುಗಳನ್ನು ಗುಡಿಸಲಾರಂಭಿಸಿದರು. ಗುರುಗಳ ಈ ನಡೆಯ ಬಗ್ಗೆ ಶಿಷ್ಯಂದಿರು ಸಂಜೆ ಪ್ರಶ್ನಿಸಿದರು. “ನಾವು ಇಷ್ಟಪಡುವ ವಸ್ತು ಶಾಶ್ವತವಾಗಿ ನಮ್ಮ ಬಳಿ ಉಳಿಯದು ಎಂಬ ಅರಿವಿದ್ದಾಗ ಖುಷಿ ಹೆಚ್ಚುವುದು’.