Advertisement
ಅಕ್ಟೋಬರ್ 29, 2021- ಸಿನಿಪ್ರಿಯರಿಗೆ ಕರಾಳ ದಿನ. ಎಲ್ಲರೂ ಖುಷಿ ಖುಷಿಯಿಂದ ಇದ್ದ ಸಮಯದಲ್ಲಿ ಬಂದಂತಹ ಸುದ್ದಿಯೊಂದು ಬರಸಿಡಿಲಿನಂತೆ ಹೊಡೆಯಿತು. ಆ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಯಿತು. ಅದು ತಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ. ಫಿಟ್ ಅಂಡ್ ಫೈನ್ ಆಗಿ, ಚಿತ್ರರಂಗಕ್ಕೆ ಬರುವ ನವ ನಟರಿಗೆಲ್ಲಾ ಬೆನ್ನು ತಟ್ಟುತ್ತಿದ್ದ ದೊಡ್ಮನೆಯ ಕುಡಿ, ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಇವತ್ತಿಗೂ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಕಷ್ಟದಲ್ಲೇ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ. ಆದರೆ, ಈ ಒಂದು ವರ್ಷದಲ್ಲಿ ಕರುನಾಡು ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಯದ ದಿನವಿಲ್ಲ. ಅವರ ಅಭಿಮಾನಿಗಳು ನೋವಿನಲ್ಲೇ ದಿನ ದೂಡುತ್ತಿದ್ದಾರೆ.
Related Articles
Advertisement
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳನ್ನು ಅಗಲಿದ ನಂತರ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. “ಜೇಮ್ಸ್’ ಹಾಗೂ “ಲಕ್ಕಿಮ್ಯಾನ್’. ಜೇಮ್ಸ್‌ನಲ್ಲಿ ಪುನೀತ್ ಹೀರೋ ಆದರೆ, “ಲಕ್ಕಿಮ್ಯಾನ್’ನಲ್ಲಿ ಅತಿಥಿ ಪಾತ್ರ. ಈ ಎರಡೂ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಚಿತ್ರಮಂದಿರದಲ್ಲಿ ಕಣ್ಣೀರಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟ ಇನ್ನಿಲ್ಲವಲ್ಲ, ಇನ್ನು ಈ ತರಹದ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ ಎಂಬ ಬೇಸರದಿಂದ ಅಭಿಮಾನಿಗಳು ಮರುಗಿದ್ದಾರೆ.
ಪ್ರತಿ ಸಿನಿಮಾಗಳಲ್ಲೂ ಪುನೀತ್ ನಮನ
ಪುನೀತ್ ತೀರಿಕೊಂಡ ದಿನದಿಂದ ಇಲ್ಲಿವರೆಗೆ ಬಿಡುಗಡೆಯಾದ ಪ್ರತಿ ಸಿನಿಮಾಗಳಲ್ಲೂ ಅಪ್ಪು ನಮನ ನಡೆಯುತ್ತಲೇ ಬಂದಿದೆ. ಆರಂಭದ ಒಂದಷ್ಟು ತಿಂಗಳು ಸಿನಿಮಾ ಕಾರ್ಯಕ್ರಮಗಳಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಮೂಲಕ ಕಾರ್ಯಕ್ರಮ ಆರಂಭವಾಗುತ್ತಿತ್ತು. ಜೊತೆಗೆ ಸಿನಿಮಾ, ಟೀಸರ್, ಟ್ರೇಲರ್ ಏನೇ ಕಾರ್ಯಕ್ರಮವಿದ್ದರೂ ಅಲ್ಲಿ ಪುನೀತ್ ನಮನದೊಂದಿಗೆ ಆರಂಭವಾಗುತ್ತಿದೆ. ಇದು ಸಿನಿಮಾ ಮಂದಿ ಅಪ್ಪು ಅವರ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿ.
ಪರಭಾಷೆಯಲ್ಲೂ ಪುನೀತ್ ನೆನಪು
ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನದ ದುಃಖ ಕೇವಲ ಕನ್ನಡ ಚಿತ್ರರಂಗ ಮತ್ತು ಕನ್ನಡ ಚಿತ್ರ ಪ್ರೇಮಿಗಳಿಗೆ ಮಾತ್ರವಲ್ಲ, ಪರಭಾಷೆಯ ಚಿತ್ರರಂಗ, ಅಲ್ಲಿನ ಸಿನಿಮಂದಿ ಮತ್ತು ಸಿನಿಪ್ರಿಯರನ್ನೂ ಕಾಡುತ್ತಿದೆ. ಕಳೆದ ಒಂದು ವರ್ಷದಿಂದ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗದ ಬಹುತೇಕ ಸಭೆ -ಸಮಾರಂಭಗಳಲ್ಲಿ, ಸಿನಿಮಾಗಳ ಪ್ರಚಾರದ ವೇಳೆ ಅಲ್ಲಿನ ದೊಡ್ಡ ಸ್ಟಾರ್, ನಿರ್ಮಾಪಕ, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಅಪ್ಪುವಿನ ಗುಣಗಾನ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್’, ಕಮಲ್ ಹಾಸನ್ ಅಭಿನಯದ “ವಿಕ್ರಂ’, ವಿಜಯ್ ದೇವರಕೊಂಡ ಅಭಿನಯದ “ಲೈಗರ್’, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ “ಬ್ರಹ್ಮಾಸ್ತ್ರ’, ಪ್ರಭಾಸ್ ಅಭಿನಯದ “ರಾಧೆ ಶ್ಯಾಮ್’, ಚಿಯಾನ್ ವಿಕ್ರಂ ಅಭಿನಯದ “ಕೋಬ್ರಾ’, ಮಣಿರತ್ನಂ ನಿರ್ದೇಶನದ “ಪೊನ್ನಿಯನ್ ಸೆಲ್ವನ್-1′, ಚಿರಂಜೀವಿ ಅಭಿನಯದ “ಆಚಾರ್ಯ’ ಹೀಗೆ ಈ ವರ್ಷ ತೆರೆಕಂಡ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ಭಾಷೆಗಳ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳ ಪ್ರಚಾರ ಮತ್ತು ಪ್ರೀ-ರಿಲೀಸ್ ಇವೆಂಟ್‌ನಂತಹ ಕಾರ್ಯಕ್ರಮಗಳಲ್ಲೂ ಚಿತ್ರತಂಡಗಳು ಪುನೀತ್ ರಾಜಕುಮಾರ್ ಅವರಿಗೆ ನುಡಿನಮನ ಸಲ್ಲಿಸಿದ್ದವು.