“ನಿನ್ನ ಜೊತೆಗಿದ್ದ ಸಮಯ, ಹಂಚಿಕೊಂಡ ಖುಷಿ, ಆಡಿದ ಜಗಳ, ಮಾಡಿಕೊಂಡ ರಾಜಿ … ಇದನ್ನೆಲ್ಲಾ ಮರೆಯಲು ಸಾಧ್ಯವೇನೋ ಹುಡುಗಾ?’- ನೀನು ಕಳೆದ ವರ್ಷ ಕಳಿಸಿದ್ದ ಈ ಮೆಸೇಜ್ ಇನ್ನೂ ನನ್ನ ಮೊಬೈಲಿನ ಇನ್‌ಬಾಕ್ಸ್‌ನಲ್ಲಿ ಬೆಚ್ಚಗೆ ಕುಳಿತಿದೆ. ದಿನಕ್ಕದೆಷ್ಟು ಬಾರಿ ತೆರೆದು ಓದುತ್ತೇನೋ ನನಗೇ ತಿಳಿಯುತ್ತಿಲ್ಲ.
ಜಗತ್ತಿನಲ್ಲಿ ಉಳಿದವರೆಲ್ಲಾ ಪ್ರೀತಿಸ್ತಾರೆ ನೋಡು, ಅದಕ್ಕಿಂತ ಅರೆಪಾವಿನಷ್ಟು ಹೆಚ್ಚಾಗಿ ನನ್ನನ್ನು ನೀನು ಪ್ರೀತಿಸಿದೆ ಅನ್ನುವುದು ಸತ್ಯ. ಆದರೆ, ನಿನ್ನ ಪ್ರೀತಿಗೆ ನಾನು ನಂಬಿಕೆ ದ್ರೋಹ ಮಾಡಿಬಿಟ್ಟೆ. ಸುಳ್ಳಿನ ಹೊದಿಕೆ ಹೊದಿಸಿಬಿಟ್ಟೆ. ಪ್ಲೀಸ್, ನನ್ನ ತಪ್ಪುಗಳನ್ನ ನನ್ನ ಸುಳ್ಳುಗಳನ್ನ, ನನ್ನ ನಂಬಿಕೆ ದ್ರೋಹವನ್ನ ಒಂದು ಸಲ ಮನ್ನಿಸಿಬಿಡು. ಕ್ಷಮಿಸಿಬಿಡು ಅಂದಷ್ಟು ಸುಲಭವಲ್ಲ ಕ್ಷ ಮಿಸಿಬಿಡುವುದು ಅನ್ನೋದು ನನಗೂ ಅರ್ಥ ಆಗುತ್ತೆ. ಆದರೂ, ಹಾಗೆ ಕೇಳ್ಳೋದನ್ನು ಬಿಟ್ಟು ಬೇರೆ ಯಾವ ದಾರಿಯೂ ನನಗೆ ಉಳಿದಿಲ್ಲ.
ಸುಳ್ಳಲ್ಲ, ನಾನು ನಿನ್ನನ್ನು ಆಕಾಶದಷ್ಟು… ಹೌದು, ಆಕಾಶದಷ್ಟು ಪ್ರೀತಿಸಿದೆ. ಆದರೆ, ಅದೆಲ್ಲಾ ಕೆಲವೇ ದಿನಗಳು ಮಾತ್ರ. ಮನಸ್ಸು ಚಂಚಲ. ನಿನ್ನೊಂದಿಗೆ ಪ್ರೀತಿಯ ಮಾತು ಆಡುತ್ತಿದ್ದಾಗಲೇ ಮತ್ಯಾವುದೋ ದಿಕ್ಕಿನಿಂದ ಮಲ್ಲಿಗೆಯ ಪರಿಮಳ ತೇಲಿ ಬಂತು. ಹೇಳಿದೆನಲ್ಲ…ಮನಸ್ಸು ಚಂಚಲ. ಅದು ನನ್ನ ಮಾತು ಕೇಳದೆ ತನ್ನಿಷ್ಟದಂತೆ ಆಡಿತು. ನಾನು ಶುದ್ಧ ಮರುಳನಂತೆ ಮನಸಿನ ಮಾತು ಕೇಳಿದೆ. ಮೋಹಕ್ಕೆ ಮರುಳಾಗಿ ನಿನ್ನಿಂದ ದೂರವಾದೆ. ನಾನು ಪ್ರೀತಿಸಿದ್ದು ನಿನ್ನನ್ನ, ಮೋಹಿಸಿದ್ದು ಇನ್ಯಾರನ್ನೋ.
ಈಗ, ಆಗಿರುವ ತಪ್ಪೇನು ಎಂಬುದು ಅರ್ಥವಾಗಿದೆ. ಮೋಹವಷ್ಟೇ ಅಲ್ಲ, ಮೋಹಿನಿಯಂಥ ಹುಡುಗಿ ಕೂಡ ದೂರ ಆಗಿ¨ªಾಳೆ. ಇನ್ಮುಂದೆ ಅಳ್ಳೋದಕ್ಕೆ, ನಗೋದಕ್ಕೆ, ಕೋಪಿಸಿಕೊಳ್ಳೋದಕ್ಕೆ, ಮುನಿಸಿಕೊಳ್ಳೋದಕ್ಕೆ, ಮುದ್ದು ಮಾಡೋಕೆ, ಎದೆಗೊರಗಿಕೊಂಡು ಬಿಕ್ಕಳಿಸೋಕೆ ನನಗೆ ನೀನು ಬೇಕು. ನಾನು ನಿನ್ನ ಜೊತೆಯೇ ಹೆಚ್ಚು ಜಗಳವಾಡಿದ್ದೀನಿ, ಹೆಚ್ಚು ಮುನಿಸಿಕೊಂಡಿದ್ದೀನಿ, ಹೆಚ್ಚು ಮುದ್ದುಮಾಡಿದ್ದೀನಿ, ಹೆಚ್ಚು ಕಣ್ಣೀರಾಗಿದ್ದೀನಿ. ಈಗ, ನೀನು ಕ್ಷಮಿಸುತ್ತೀಯೋ ಇಲ್ಲವೋ ಅನ್ನುವುದು ಬೇರೆ ಮಾತು. ಆದರೆ, ಅರ್ಧಗಂಟೆ ಎಲ್ಲವನ್ನೂ ಹೇಳಿಕೊಂಡು ನಾನು ಹಗುರಾಗಬೇಕು, ಬರಿದಾಗಬೇಕು.
ನನ್ನಿಂದ ನಿನಗೆ ಆಗಿರುವ ನೋವು ಎಂಥದು ಎಂಬ ಅಂದಾಜು ಖಂಡಿತ ನನಗಿದೆ. ಅದೇ ಕಾರಣಕ್ಕೆ ತಪ್ಪಾಯಿತು ಕ್ಷಮಿಸಿಬಿಡು ಅಂದುಕೊಂಡು ನಿನ್ನ ಮುಂದೆ ಮಂಡಿಯೂರಿ ಕುಳಿತು ಕ್ಷಮೆಯ ಭಿಕ್ಷೆ ಬೇಡೋಕೆ ಸಿದ್ಧವಾಗಿದ್ದೀನಿ. ಮತ್ತೆ ನಮ್ಮ ಹಳೆಯ ದಿನಗಳನ್ನ ಮರಳಿ ಪಡೆಯೋಣ, ಒಂದಷ್ಟು ಜಗಳವಾಡೋಣ, ಮುನಿಸಿಕೊಳ್ಳೋಣ, ಮತ್ತೆ ಮತ್ತೆ ಮಾತು ಬಿಡೋಣ, ಮತ್ತೆ ರಾಜಿಯಾಗೋಣ. ಮತ್ತೆ ಮುನಿಸು, ಮತ್ತೆ ಜಗಳ,ಮತ್ತೆ ರಾಜಿ, ಜೊತೆಗೆ ಜಾಜಿ … ಹೀಗೇ ಸಾಗಲಿ ಬದುಕು. ಏನಂತೀ?
ಕ್ಷಮಿಸಿಬಿಡು ಎಂಬ ಪ್ರಾರ್ಥನೆ ಮತ್ತು ಹಳೆಯ ಪ್ರೇಮವನ್ನು ಮುಂದುವರಿಸು ಎಂಬ ಬೇಡಿಕೆ ಎರಡನ್ನು ನಿನ್ನೆದುರು ಇಟ್ಟಿದ್ದೇನೆ. ನೀನು ಜಾಣೆ, ನೀನು ಒಳ್ಳೆಯವಳು, ಮತ್ತು ನೀನು ಮಸ್ಕಾ ಹೊಡೆದರೆ ಸಹಿಸೋದಿಲ್ಲ, ಬೆಣ್ಣೆ ಮಾತುಗಳಿಗೆ ಕರಗೋದಿಲ್ಲ ಅನ್ನುವುದೂ ನನಗೆ ಗೊತ್ತು. ಇದನ್ನೆಲ್ಲಾ ನೆನಪಲ್ಲಿ ಇಟ್ಟುಕೊಂಡೇ ನಾಡಿದ್ದು ಶುಕ್ರವಾರ, ಮಹಾಲಕ್ಷ್ಮಿ ಲೇಔಟ್‌ನ ಆಂಜನೇಯ ದೇವಸ್ಥಾನದ ಕಂಬದ ಮರೆಯಲ್ಲಿ ನಿನಗಾಗಿ ಕಾಯುವುದು ಅಂತ ನಿರ್ಧರಿಸಿದ್ದೇನೆ. ಅವತ್ತು ನನ್ನ ಕೆನ್ನೆಗೆ ಮುತ್ತು ಕೊಡುವುದೋ ಅಥವ ಯಾವತ್ತೂ ಮರೆಯದಂಥ ಏಟು ಕೊಡುವುದೋ ಅನ್ನುವುದು ನಿನಗೆ ಬಿಟ್ಟದ್ದು.
ಮತ್ತೆ ಕೇಳಿಕೊಳ್ಳುತ್ತೇನೆ, ಪ್ಲೀಸ್, ಒಂದು ಸಲ ಮನ್ನಿಸಿಬಿಡು. ಅದಕ್ಕೂ ಮುಂಚೆ ಒಂದು ಮೆಸೇಜ್ ಮಾಡು, ಒಂದು ವರ್ಷವಾಯಿತು ನಿನ್ನ ನೋಡದೆ, ನಿನ್ನ ಮೆಸೇಜ್ ನೋಡದೆ …
ಮಹೀ