Advertisement
ಪ್ಲಾಸ್ಟಿಕ್‌ನಿಂದಾಗಿ ಪರಿಸರದ ಮೇಲಾಗುತ್ತಿರುವ ಹಾನಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜುಲೈ 1ರಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಬಳಕೆ, ಮಾರಾಟ, ಸಂಗ್ರಹ, ಆಮದಿಗೆ ನಿಷೇಧ ಹೇರಿದೆ. ನಿಷೇಧ ಜಾರಿಯ ಗಡುವು ಸಮೀಪಿಸುತ್ತಿದ್ದಂತೆ ಪಾನೀಯ ತಯಾರಕರು, ಈ ಉದ್ಯಮಗಳಲ್ಲಿ ತೊಡಗಿಕೊಂಡಿರುವವರು ಆತಂಕಿತ ರಾಗಿದ್ದಾರೆ. ಹೀಗಾಗಿ ನಿಷೇಧ ಜಾರಿಯನ್ನು ತಾತ್ಕಾಲಿಕ ವಾಗಿ ಮುಂದೂ ಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾ ರಂಭಿಸಿದ್ದಾರೆ.
Related Articles
Advertisement
ಪ್ಲಾಸ್ಟಿಕ್ ಕರಗುವುದಿಲ್ಲ. ಹೀಗಾಗಿ ಸಹಸ್ರಾರು ವರ್ಷಗಳ ಕಾಲ ಅದು ಮಣ್ಣಿನಲ್ಲಿ ಇರುತ್ತದೆ. ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುವುದರಿಂದ ಪ್ಲಾಸ್ಟಿಕ್‌ಗಳನ್ನು ಸುಡಲಾಗುವುದಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್‌ಗಳು ಗಾಳಿಯ ಮೂಲಕ ಚರಂಡಿ ಸೇರಿ ನದಿ, ತೊರೆಗಳ ಮೂಲಕ ಹಾದುಹೋಗಿ ಸಾಗರದ ಒಡಲು ಸೇರುತ್ತದೆ. ಪ್ರಪಂಚದ ಒಟ್ಟು ಪ್ಲಾಸ್ಟಿಕ್‌ನ ಶೇ. 93ರಷ್ಟನ್ನು ಪ್ರತೀವರ್ಷ ಕೇವಲ 10 ನದಿಗಳು ಸಾಗಿಸುತ್ತವೆ.
2015ರಲ್ಲಿ ಜಾರ್ಜಿಯಾ ವಿಶ್ವ ವಿದ್ಯಾನಿಲಯದ ಸಂಶೋಧಕರು ವರ್ಷಕ್ಕೆ 4.8 ಮಿಲಿಯನ್ ಮತ್ತು 12.7 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಪ್ಲಾಸ್ಟಿಕ್ ಕರಾವಳಿಯ 30 ಮೈಲುಗಳ ಒಳಗೆ ವಾಸಿಸುವ ಜನರ ಮೂಲಕ ಸಾಗರಗಳನ್ನು ಪ್ರವೇಶಿಸುತ್ತವೆ ಎಂದು ಅಂದಾಜಿಸಿ¨ªಾರೆ. ಈ ಮಾಲಿನ್ಯದ ಬಹುಪಾಲು ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವಾಗಿದೆ. ಭಾರತವು ಪ್ರತೀದಿನ 25,940 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಆದರೆ ಅದರಲ್ಲಿ ಶೇ. 60ರಷ್ಟನ್ನು ಮಾತ್ರ ಸಂಗ್ರಹಿಸಲಾಗುತ್ತದೆ ಎನ್ನುತ್ತಾರೆ ಅಧ್ಯಯನಕಾರರು.
ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗತಿಕ ಮಟ್ಟದಲ್ಲೇ ತೀವ್ರ ಚರ್ಚೆಯಾಗುತ್ತಿದೆ. ಭಾರತವು ಈಗ ಹೆಜ್ಜೆ ಇಟ್ಟಿದೆ. ಯುಎಸ್‌ನ ಮಾಲಿಬು, ಬಕ್ಲಿì, ಸಿಯಾಟಲ್, ಮಿಯಾಮಿ ಬೀಚ್‌ಗಳಲ್ಲಿ ಈಗಾಗಲೇ ಪ್ಲಾಸ್ಟಿಕ್ ಸ್ಟ್ರಾಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ನ್ಯೂಯಾರ್ಕ್ ಹಾಗೂ ಹವಾಯಿ ರಾಜ್ಯದಲ್ಲಿ 2020ರಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ನಿಷೇಧಿಸಲಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿ 2014ರಲ್ಲಿ ಪ್ಲಾಸ್ಟಿಕ್ ಬ್ಯಾಗ್ ನಿಷೇಧದ ಪರಿಣಾಮ ಈಗ ಶೇ. 85ರಷ್ಟು ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಕಡಿಮೆಯಾಗಿದೆ.
ನಿಷೇಧ ಯಾಕೆ?
ಹೆಸರೇ ಸೂಚಿಸುವಂತೆ ಏಕ ಬಳಕೆಯ ಪ್ಲಾಸ್ಟಿಕ್‌ಗಳು ಒಂದೇ ಬಾರಿ ಬಳಕೆಗೆ ಯೋಗ್ಯವಾದಂಥವು. ಈ ಪ್ಲಾಸ್ಟಿಕ್‌ಗಳ ಸಮರ್ಪಕ ವಿಲೇವಾರಿ ಕಷ್ಟಸಾಧ್ಯವಾಗಿದ್ದು ಇದರ ಮರುಬಳಕೆಯೂ ಅಸಾಧ್ಯ. ಹೀಗಾಗಿ ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧದ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಷದ ಹಿಂದೆಯೇ ಉತ್ಪಾದಕರು, ಅಂಗಡಿಯವರು, ಬೀದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಸೂಚನೆ ನೀಡಿತ್ತು. ಏಕ ಬಳಕೆಯ ಪ್ಲಾಸ್ಟಿಕ್‌ನಲ್ಲಿ ಬಲೂನ್, ಧ್ವಜ, ಕ್ಯಾಂಡಿ, ಐಸ್‌ಕ್ರೀಮ್, ಇಯರ್‌ಬಡ್ಸ್‌ನಲ್ಲಿ ಬಳಸುವ ಪ್ಲಾಸ್ಟಿಕ್ ಕಡ್ಡಿ, ಅಲಂಕಾರದಲ್ಲಿ ಬಳಸುವ ಥರ್ಮಾಕೋಲ್, ಪ್ಲೇಟ್, ಕಪ್, ಗ್ಲಾಸ್, ಕಟ್ಲೆರಿ, ಸ್ವೀಟ್ ಬಾಕ್ಸ್, ಪ್ಯಾಕಿಂಗ್‌ನಲ್ಲಿ ಬಳಸುವ ಪ್ಲಾಸ್ಟಿಕ್ ಟೇಪ್, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕೇಟ್ ಸೇರಿದಂತೆ 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಬ್ಯಾನರ್‌ಗಳು ಸೇರಿವೆ.
ಭಾರತದಲ್ಲಿ ಪ್ಲಾಸ್ಟಿಕ್ ಸಮಸ್ಯೆ
2018-19ರಲ್ಲಿ ಭಾರತದಲ್ಲಿ ಒಟ್ಟು 33.60 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗಿತ್ತು ಎಂದು ಸಿಪಿಸಿಬಿ ವರದಿ ಮಾಡಿದೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಪ್ಲಾಸ್ಟಿಕ್ ಬಳಕೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಶೇ. 35ರಷ್ಟಿದೆ. ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ ಮತ್ತು ಅದರ ಪರಿಣಾಮದ ಹಿನ್ನೆಲೆಯಲ್ಲಿ 2022ರ ಜುಲೈಯಿಂದ ದೇಶಾದ್ಯಂತ ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ನಿರ್ಧರಿಸಲಾಗಿದೆ.
ಪ್ಲಾಸ್ಟಿಕ್ ಪ್ಯಾಕೇಜಿಂಗ್ ಉತ್ಪನ್ನಗಳ ತಯಾರಕರಿಗೆ ಪರಿಸರ ಸಚಿವಾಲಯ ಹೊಸ ನಿರ್ದೇಶನ ನೀಡಿದ್ದು, ಇದರ ಅನ್ವಯ ಈ ಕಂಪೆನಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಅದರ ಒಂದು ಭಾಗವನ್ನು ಮರುಬಳಕೆ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣ, ವಿದ್ಯುತ್, ತೈಲ, ಸಿಮೆಂಟ್ ಉತ್ಪಾದನೆಗೆ ಬಳಸಲು ಸರಕಾರ ಚಿಂತನೆ ನಡೆಸಿದೆ. ಇದೇ ಯೋಜನೆಯ ಆಧಾರದ ಮೇಲೆ ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಿಸಲಾಗಿದೆ.
ಎಲ್ಲೆಲ್ಲಿ ನಿಷೇಧ?
ಕೀನ್ಯಾದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಕಾನೂನು ಉಲ್ಲಂ ಸಿದವರಿಗೆ 4 ವರ್ಷಗಳ ಸೆರೆಮನೆ ವಾಸ, 40 ಸಾವಿರ ಡಾಲರ್ ದಂಡ ವಿಧಿಸಲಾಗುತ್ತದೆ. ಫ್ರಾನ್ಸ್, ಚೀನ, ಇಟಲಿಯಲ್ಲಿ ಕೆಲವೆಡೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೆ ಇನ್ನು ಕೆಲವೆಡೆ ಭಾಗಶಃ ನಿಷೇಧ ಅಥವಾ ತೆರಿಗೆ ವಿಧಿಸಲಾಗಿದೆ.
ಪ್ರಾಣಿಗಳು ಮತ್ತು ಮಾನವನ ಆರೋಗ್ಯದ ಮೇಲೆ ಪರಿಣಾಮ
ಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಸೇರಿ ಸಣ್ಣ ವಿಷಕಾರಿ ಕಣಗಳಾಗುತ್ತವೆ. ಇದು ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುತ್ತವೆ. ಪ್ರಾಣಿಗಳು ಇದನ್ನು ಸೇವಿಸಿದಾಗ ಆಹಾರ ಸರಪಳಿಯಲ್ಲಿ ಸೇರಿಕೊಳ್ಳುತ್ತವೆ. ಭೂಮಂಡಲದ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ಸಮುದ್ರದ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯಕ್ಕಿಂತ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಅಂತಿಮವಾಗಿ ಇದು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ ಎನ್ನುತ್ತಾರೆ ಜರ್ಮನಿಯ ಸಂಶೋಧಕರು.
ಪರಿಣಾಮ ಅಗಾಧ
– ಜಾಗತಿಕವಾಗಿ ವಾರ್ಷಿಕ ಪ್ಲಾಸ್ಟಿಕ್ ಬಳಕೆಯ ಅರ್ಧದಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನವಾಗಿದೆ.
– ವಾರ್ಷಿಕವಾಗಿ 380 ಮಿಲಿಯನ್ ಮೆಟ್ರಿಕ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ.
– 1950ರ ದಶಕದಲ್ಲೇ ಪ್ಲಾಸ್ಟಿಕ್ ಪರಿಚಯವಾಗಿದ್ದು, ಈವರೆಗೆ 8.3 ಬಿಲಿಯನ್ ಮೆ. ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗಿದೆ.
– ಪ್ರತೀ ನಿಮಿಷಕ್ಕೆ ಮಾನವರು 1.2 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಾರೆ. ಅವುಗಳಲ್ಲಿ ಸರಿಸುಮಾರು ಶೇ. 91ರಷ್ಟನ್ನು ಮರು ಬಳಕೆ ಮಾಡುವುದಿಲ್ಲ.
– ಪ್ರತೀ ವ್ಯಕ್ತಿ ತಿಂಗಳಿಗೆ ಸರಾಸರಿ 13 ಬಾಟಲಿಗಳನ್ನು ಬಳಸುತ್ತಾನೆ ಎಂದಾದರೆ ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ಬಳಸಿದರೆ ವಾರ್ಷಿಕವಾಗಿ 156 ಪ್ಲಾಸ್ಟಿಕ್ ಬಾಟಲಿಗಳನ್ನು ಉಳಿಸಬಹುದು.
– ವಿಶ್ವದಾದ್ಯಂತ ಐದು ಟ್ರಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಉತ್ಪಾದಿಸಲಾಗುತ್ತದೆ. ಒಂದು ಚೀಲ ಸಂಪೂರ್ಣವಾಗಿ ಕರಗಲು ಒಂದು ಸಾವಿರ ವರ್ಷ ಬೇಕಾಗುತ್ತದೆ.
– ಪ್ರಪಂಚದಲ್ಲಿ ಪ್ರತೀ ವರ್ಷ 500 ಶತಕೋಟಿ ಪ್ಲಾಸ್ಟಿಕ್ ಕಪ್‌ಗಳನ್ನು ಬಳಸಲಾಗುತ್ತಿದೆ.
– ಪ್ರತೀವರ್ಷ ಕನಿಷ್ಠ 14 ಮಿಲಿಯನ್ ಟನ್ ಪ್ಲಾಸ್ಟಿಕ್ ಸಾಗರ ಸೇರುತ್ತದೆ.
– ಪ್ಲಾಸ್ಟಿಕ್ ತ್ಯಾಜ್ಯ ವಾರ್ಷಿಕ ಶೇ. 9ರ ದರದಲ್ಲಿ ಬೆಳೆಯುತ್ತದೆ.
– ಅಧ್ಯಯನವೊಂದರ ಪ್ರಕಾರ ಪ್ರತೀ ವರ್ಷ ವ್ಯಕ್ತಿಯೊಬ್ಬರು ಸರಾಸರಿ 70 ಸಾವಿರ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾರೆ.
– ಪ್ಲಾಸ್ಟಿಕ್ ಮಾಲಿನ್ಯದಿಂದ ಪ್ರತೀವರ್ಷ 1 ಮಿಲಿಯನ್ ಸಮುದ್ರ ಪ್ರಾಣಿಗಳು ಸಾಯುತ್ತವೆ.
– ಉತ್ಪಾದನೆಯಾಗುವ ಪ್ಲಾಸ್ಟಿಕ್‌ನಲ್ಲಿ ಶೇ.75ರಷ್ಟು ತ್ಯಾಜ್ಯ.
– ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ಸುಮಾರು 500- 1,000 ವರ್ಷಗಳು ಬೇಕಾಗುತ್ತದೆ.
– ಪ್ರಪಂಚದಾದ್ಯಂತ ಬೀಚ್‌ಗಳಲ್ಲಿರುವ ಒಟ್ಟು ಕಸಗಳಲ್ಲಿ ಶೇ. 73 ಪ್ಲಾಸ್ಟಿಕ್ ಆಗಿದೆ.
– ಸುಮಾರು ಶೇ. 91ರಷ್ಟು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲಾಗುವುದಿಲ್ಲ.
– ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ಪ್ರತೀವರ್ಷ ಸರಿಸುಮಾರು 380 ಮಿಲಿಯನ್ ಟನ್ ಅಥವಾ ಒಟ್ಟು ಪ್ಲಾಸ್ಟಿಕ್ ಉತ್ಪಾದನೆಯ ಶೇ. 50ರಷ್ಟು
– ಒಬ್ಬ ವ್ಯಕ್ತಿ ವರ್ಷಕ್ಕೆ 700ಕ್ಕೂ ಹೆಚ್ಚು ಪ್ಲಾಸಿcಕ್ ಚೀಲ ಬಳಸುತ್ತಾನೆ. ವಿಶ್ವ ಮಟ್ಟದಲ್ಲಿ ಪ್ರತೀ ಸೆಕೆಂಡಿಗೆ 1,60,000 ಚೀಲಗಳು, ವರ್ಷಕ್ಕೆ 5 ಟ್ರಿಲಿಯನ್ ಚೀಲ ಬಳಕೆಯಾಗುತ್ತದೆ.
– ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆಯಲ್ಲಿ ನಾರ್ವೆ ದೇಶವು ಮುಂಚೂಣಿಯಲ್ಲಿದೆ. ಇಲ್ಲಿ ಅತ್ಯಧಿಕ ಪಾಲಿಥೀನ್ ಟೆರೆಫ್ತಾಲೇಟ್ ಮರುಬಳಕೆ ದರ ಶೇ. 97ರಷ್ಟಾಗಿದೆ.