ಕಲಬುರಗಿ: ಹಲವು ವರ್ಷಗಳಿಂದ ವಸೂಲಾತಿಯಾಗದೇ ಉಳಿದಿರುವ ಸಾಲದ ಮರುಪಾವತಿಗಾಗಿ ಬಡ್ಡಿಯಲ್ಲಿ ಸ್ವಲ್ಪ ರಿಯಾಯಿತಿ ನೀಡುವ ಒನ್ ಟೈಮ್ ಸೆಟ್ಲಮೆಂಟ್ (ಏಕಕಾಲಿಕ ಸಾಲ ತಿರುವಳಿ) ಯೋಜನೆ ಜಾರಿ ತರಲಾಗಿದೆ ಎಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತಾರು ವರ್ಷಗಳಿಂದ ಸಾಲ ವಸೂಲಾತಿಯಾಗದೇ ಹಾಗೆ ಉಳಿದು ಬರುತ್ತಿರುವುದರಿಂದ ಎನ್ ಪಿಎ ಪ್ರಮಾಣ ಹೆಚ್ಚಳವಾಗುತ್ತಿದೆಯಲ್ಲದೇ ಹೊಸ ರೈತರಿಗೆ ಸಾಲ ವಿತರಿಸುವಂತಾಗಲು ಓಟಿಎಸ್ ಪದ್ದತಿ ಪ್ರಸಕ್ತವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿದ್ದು, ಮುಂದಿನ ತಿಂಗಳು ಅಗಷ್ಟ 31 ರೊಳಗೆ ಈ ಯೋಜನೆ ಜಾರಿಯಲ್ಲಿರಲಿದೆ. ಹೀಗಾಗಿ ರೈತರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದರು.
ತೋಟಗಾರಿಕೆ, ಹೈನುಗಾರಿಕೆ, ಪೈಪ್ ಲೈನ್, ಸಂಬಳಾಧರಿತ, ವಾಹನ, ಸ್ವ ಸಹಾಯ ಗುಂಪುಗಳ ಸಾಲ ಸೇರಿ ಒಟ್ಟಾರೆ 47.82 ಕೋ.ರೂ ಅಸಲು ಸಾಲ ವಸೂಲಾತಿ ಯಾಗುತ್ತಿಲ್ಲ. ಸರ್ಕಾರ ಈ ಹಿಂದೆ ಎರಡು ಸಲ ಬಡ್ಡಿ ಮಾಡಿದಾಗ ಹಲವು ರೈತರು ಸಾಲ ಮರು ಪಾವತಿ ಮಾಡಿದ್ದಾರೆ. ಆದರೆ ಇನ್ನೂ 1072 ರೈತರು, 626 ನೌಕರರು, 65 ವಾಹನ ಸಾಲಗಾರರು, 634 ಸ್ವ ಸಹಾಯ ಗುಂಪಿನವರು ಸಾಲ ಮರು ಪಾವತಿಸಿಲ್ಲ. ಹೀಗಾಗಿ ಅಸಲು 47. 82 ಕೋ.ರೂ ಸಾಲದ ಮೇಲೆ ಬಡ್ಡಿಯೇ 43 ಕೋ. ರೂ ಬಡ್ಡಿಯಾಗಿದೆ. ಶೇ. 15.75 ರಷ್ಟು ಬಡ್ಡಿ ವಿಧಿಸಿದ್ದರಿಂದ ಇಷ್ಟು ಪ್ರಮಾಣದ ಬಡ್ಡಿಯಾಗಿದೆ. ಆದರೆ ಈಗ ಬಡ್ಡಿಯನ್ನು ಓಟಿಎಸ್ ದಿಂದ ಪ್ರತಿಶತ ಶೇ. 10 ಕ್ಕೆ ಇಳಿಸಲಾಗಿದೆ. ಹೀಗಾಗಿ ಓಟಿಎಸ್ ದಿಂದ 18 ಕೋ.ರೂ ಬ್ಯಾಂಕ್ ಗೆ ಹೊರೆಯಾಗುತ್ತಿದ್ದರೂ ರೈತರ ಅನುಕೂಲಕ್ಕಾಗಿ ಇದನ್ನು ಜಾರಿಗೆ ತರಲಾಗಿದೆ ಎಂದು ತೇಲ್ಕೂರ ವಿವರಣೆ ನೀಡಿದರು.
ಇದನ್ನೂ ಓದಿ:ಹೃದಯವಂತಳಾದ ಕಮಲವ್ವ: ಬ್ರೈನ್ ಡೆಡ್ ಆಗಿದ್ದ ಮಹಿಳೆಯ ಅಂಗಾಂಗ ದಾನ
ಸಾಲ ವಸೂಲಾತಿಯಾಗದೇ ಹಾಗೆ ಉಳಿದಿದ್ದರಿಂದ ಈಗಾಗಲೇ ರಾಯಚೂರಿನ ಸಹಕಾರ ಸಂಘಗಳ ಜಂಟಿ ನಿಂಬಂಧಕರು ಸಾಲ ವಸೂಲಾತಿಗೆ ನೋಟೀಸ್ ನೀಡಿದ್ದಲ್ಲದೇ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿ ಆಸ್ತಿ ಹರಾಜಿಗೆ ಮುಂದಾಗಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಡಲು ಆ.31 ರೊಳಗೆ ಪಡೆದ ಸಾಲ ಪ್ರತಿಶತ ಶೇ. 10 ಬಡ್ಡಿ ದರದೊಂದಿಗೆ ಮರುಪಾವತಿ ಮಾಡಿದರೆ ಹರಾಜಿನಿಂದ ತಪ್ಪಿಸಿಕೊಳ್ಳಬಹುದಾಗಿದೆ. ನಬಾರ್ಡ್, ಆರ್ ಬಿಐ ಮಾರ್ಗಸೂಚಿಗಳ ಪ್ರಕಾರ ನಿಯಮಗಳನ್ನು ರೂಪಿಸಿ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಓಟಿಎಸ್ ಗೆ ಅನುಮೋದನೆ ನೀಡಲಾಗಿರುತ್ತದೆ. ಒಂದು ವೇಳೆ ಓಟಿಎಸ್ ದಲ್ಲಿ ಸಾಲ ಮರುಪಾವತಿಸದಿದ್ದರೆ ಆಸ್ತಿ ಹರಾಜಿಗ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಒಂದುವರೆ ತಿಂಗಳೊಳಗೆ ಎಲ್ಲರೂ ಸಾಲ ಮರು ಪಾವತಿಸುವ ಮೂಲಕ ಸದುಪಯೋಗ ಪಡೆದುಕೊಂಡಲ್ಲಿ ಬ್ಯಾಂಕ್ ನಷ್ಟ ತಪ್ಪಿಸಲು ಸಾಧ್ಯವಾಗುತ್ತದೆಯಲ್ಲದೆ ಮತ್ತೆ- ಮತ್ತೆ ಹೊಸ ರೈತರಿಗೆ ಸಾಲ ವಿತರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಓಟಿಎಸ್ ದಲ್ಲಿ ಸಾಲ ವಸೂಲಾತಿಯಾದರೆ ಬ್ಯಾಂಕ್ ನ ಎನ್ ಪಿಎ ಪ್ರಮಾಣ ಕಡಿಮೆಯಾಗಿ ಸಿಎಸ್ಎ ಆರ್ ಅಂಕಿಗಳು ಪ್ರತಿಶತ 15% ಮೇಲೆ ಬರುವ ಹಾಗೂ ಎನ್ ಪಿಎ ಪ್ರಮಾಣವು ಪ್ರತಿಶತ ಶೇ. 6% ರಿಂದ 5% ರ ಒಳಗೆ ಬರುವುದು. ಹೀಗಾಗಿ ನಬಾರ್ಡನ ವಿವಿಧ ಯೋಜನೆಗಳ ಅಡಿಯಲ್ಲಿ ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಸಾಲ ಪಡೆಯಲು ಅರ್ಹತೆಗೆ ಒಳಪಡುತ್ತೇವೆ. ಅಲ್ಲದೇ ಬ್ಯಾಂಕ್ ಕೃಡೀಕೃತ ನಷ್ಟ ಕಳೆದು ನಿವ್ವಳ ಲಾಭದತ್ತ ನಡೆಯುತ್ತದೆ. ಹೀಗಾಗಿ ರಾಜ್ಯದಲ್ಲಿನ ಲಾಭದಲ್ಲಿರುವ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಗಳಲ್ಲಿ ತಮ್ಮ ಬ್ಯಾಂಕ್ ಸೇರಲಿದೆ ಎಂದು ತೇಲ್ಕೂರ ವಿಶ್ವಾಸ ವ್ಯಕ್ತ ಪಡಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ವ್ಯವಸ್ಥಾಪಕ ನಿರ್ದೇಶಕ ಶರಣ ಬಸಪ್ಪ ಬೆಣ್ಣೂರ, ನಿರ್ದೇಶಕರು ಗಳಾದ ಕಲ್ಯಾಣಪ್ಪ ಪಾಟೀಲ್ ಮಳಖೇಡ, ಚಂದ್ರಶೇಖರ್ ತಳ್ಳಳ್ಳಿ, ಉತ್ತಮ ಬಜಾಜ್ ಉಪಸ್ಥಿತರಿದ್ದರು.