Advertisement

ಉಗ್ರವಾದ ಹೆಚ್ಚಲು ನೆಹರೂ ಕಾರಣ

01:48 AM Jun 29, 2019 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಹೆಚ್ಚಾಗಲು ಜವಾಹರ್‌ಲಾಲ್ ನೆಹರೂ ಮಾಡಿದ ಎಡವಟ್ಟು ಕಾರಣ ಎಂದು ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ನೇರವಾಗಿಯೇ ಆರೋಪ ಮಾಡಿದ್ದಾರೆ. ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ 2019 ಮತ್ತು ರಾಷ್ಟ್ರಪತಿ ಆಳ್ವಿಕೆಯನ್ನು ಜು.3ರಿಂದ ಅನ್ವಯವಾಗುವಂತೆ 6 ತಿಂಗಳು ವಿಸ್ತರಿಸುವ ಬಗ್ಗೆ ಚರ್ಚೆ ಮತ್ತು ಅನುಮೋದನೆ ವೇಳೆ ಅವರು ಮಾತನಾಡಿದರು. ಲೋಕಸಭೆ ಸಂಸದರಾಗಿ ಮತ್ತು ಕೇಂದ್ರ ಗೃಹ ಸಚಿವರಾಗಿ ಅಮಿತ್‌ ಶಾಗೆ ಇದು ಮೊದಲ ಮಸೂದೆ ಮಂಡನೆಯಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಇತರ ಭಾಗಗಳ ನಡುವೆ ಭಿನ್ನಾಭಿಪ್ರಾಯವೇ ನಿರ್ಮಾಣವಾಗಿದೆ. ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಹಿಂದಿನ ಸರ್ಕಾರಗಳು ಮುತುವರ್ಜಿ ವಹಿಸಲಿಲ್ಲ ಎಂದು ಹೇಳಿದ್ದು ಪ್ರತಿಪಕ್ಷಗಳ ಕೋಲಾಹಲಕ್ಕೆ ಕಾರಣವಾಯಿತು. ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ಕೂಡಲೇ ಕಣಿವೆ ರಾಜ್ಯದಲ್ಲಿ ಪ್ರಜಾಸತ್ತಾತ್ಮಕ, ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಲಿದೆ ಎಂದು ಶಾ ಹೇಳಿದ್ದಾರೆ. ಜತೆಗೆ, ಪಾಕಿಸ್ತಾನದ ನೆಲಕ್ಕೆ ನುಗ್ಗಿ ದಾಳಿ ನಡೆಸಿ ಉಗ್ರರನ್ನು ಸದೆ ಬಡಿದದ್ದು ಕೇಂದ್ರದ ಸಾಧನೆ ಎಂದಿದ್ದಾರೆ.

ನೆಹರೂ ವಿರುದ್ಧ ವಾಗ್ಧಾಳಿ: ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಸ್ಥಿತಿ ಉಂಟಾಗಲು ಜವಾಹರ್‌ಲಾಲ್ ನೆಹರೂ ಕಾರಣ ಎಂದು ಅಮಿತ್‌ ಶಾ ಆರೋಪಿಸಿದ್ದಾರೆ. ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದದ್ದು ಬಲು ದೊಡ್ಡ ತಪ್ಪು. ವಿಶ್ವಸಂಸ್ಥೆಯ ವರೆಗೆ ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ವಿಚಾರ ತೆಗೆದುಕೊಂಡು ಹೋದದ್ದು ಮತ್ತು ಆ ರಾಜ್ಯಕ್ಕೆ ಪ್ರತ್ಯೇಕವಾಗಿ 370ನೇ ವಿಧಿ ರಚಿಸಿದ್ದು ಹಾಲಿ ಬಿಕ್ಕಟ್ಟಿಗೆ ಕಾರಣ ಎಂದು ಕಟುವಾಗಿಯೇ ವಾಗ್ಧಾಳಿ ನಡೆಸಿದರು.

ಕಣಿವೆ ರಾಜ್ಯದ ಮೂರನೇ ಒಂದರಷ್ಟು ಅಂಶ ಭಾರತದ ಜತೆಗೆ ಇಲ್ಲ. ಇದಕ್ಕೆ ಯಾರು ಮಾಡಿದ ತಪ್ಪು ಕಾರಣ? ಯುದ್ಧ ನಡೆಯುತ್ತಿದ್ದ ವೇಳೆ ಕದನ ವಿರಾಮ ಘೋಷಣೆ ಮಾಡಿ, ರಾಜ್ಯದ ಒಂದು ಭಾಗವನ್ನು ಪಾಕಿಸ್ತಾನಕ್ಕೆ ಕೊಟ್ಟವರು ಯಾರು ಎಂದು ದೇಶದ ಮೊದಲ ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿ ಕಾಂಗ್ರೆಸ್‌ ನಾಯಕರನ್ನು ಕೆಣಕಿದರು. ಈ ಎಲ್ಲಾ ಪ್ರಕ್ರಿಯೆಗಳನ್ನು ಅಂದಿನ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಡೆಸಲಾಗಿತ್ತು ಎಂದರು.

ಮೊಹಮ್ಮದ್‌ ಶೇಖ್‌ ಅಬ್ದುಲ್ಲಾ 1931ರಲ್ಲಿ ಮುಸ್ಲಿಂ ಕಾನ್ಫರೆನ್ಸ್‌ ಅನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಾಪಿಸಿದ್ದಾಗ ಕಾಂಗ್ರೆಸ್‌ ತನ್ನ ಘಟಕ ಶುರು ಮಾಡದೆ ಅವರಿಗೆ ಬೆಂಬಲ ನೀಡಿತ್ತು. ಅದರ ಜನಪ್ರಿಯತೆಗೆ ಕಾಂಗ್ರೆಸ್‌ ಶ್ರಮಿಸಿದ್ದರ ಲಾಭವನ್ನು ಶೇಖ್‌ ಅಬ್ದುಲ್ಲಾ ಪಡೆದರು. ಜಮ್ಮು- ಕಾಶ್ಮೀರ ಹಾಗೂ ಭಾರತಕ್ಕೆ ಪ್ರತ್ಯೇಕ ಪ್ರಧಾನಿಗಳು ಆಗಬೇಕು ಎನ್ನುವುದನ್ನು ವಿರೋಧಿಸಿದ್ದ ಹಿರಿಯ ನಾಯಕ ಎಸ್‌.ಪಿ. ಮುಖರ್ಜಿ ಕಾಶ್ಮೀರಕ್ಕೆ ಪ್ರತಿಭಟನೆಗಾಗಿ ತೆರಳಿದ್ದರು. ಅದಕ್ಕಾಗಿ ಅವರನ್ನು ಜೈಲಿಗೆ ತಳ್ಳಲಾಯಿತು. ಅವರ ಸಾವು ಸಂಶಯಾಸ್ಪದವಾಗಿತ್ತು, ಅದರ ಬಗ್ಗೆ ತನಿಖೆಯೇ ಆಗಲಿಲ್ಲ ಎಂದೂ ಶಾ ಆರೋಪಿಸಿದರು.

Advertisement

ನ್ಯಾಯ ಸಮ್ಮತ ಚುನಾವಣೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದೇ ಸರ್ಕಾರದ ಆದ್ಯತೆ. ಚುನಾವಣಾ ಆಯೋಗ ಅದಕ್ಕೆ ಸೂಕ್ತ ಸಮಯದಲ್ಲಿ ದಿನಾಂಕ ಪ್ರಕಟಿಸಿದಾಗ ಪ್ರಕ್ರಿಯೆಗಳು ಶುರುವಾಗಲಿವೆ. ವಿಧಾನಸಭೆ ವಿಸರ್ಜನೆಗೊಂಡಿರುವಾಗ ಜು.3ರಿಂದ ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ ಅಗತ್ಯವೆಂದರು. ಅಲ್ಲಿ ಚುನಾಯಿತ ಸರ್ಕಾರ ಶೀಘ್ರವೇ ಸ್ಥಾಪನೆಯಾಗಬೇಕಾಗಿರುವುದು ಮತ್ತು ಉಗ್ರವಾದ ಕಿತ್ತೆಸೆಯುವುದೇ ಆದ್ಯತೆ ಎಂದು ಹೇಳಿದ್ದಾರೆ.

ಹಿಂದಿನ ಅವಧಿಗಳಲ್ಲಿ ರಕ್ತಪಾತವಿಲ್ಲದೆ ಅಲ್ಲಿ ಚುನಾವಣೆ ನಡೆಯುತ್ತಿರಲಿಲ್ಲ. ಆದರೆ ಈ ಬಾರಿ 40 ಸಾವಿರ ಪಂಚಾಯತ್‌ ಸ್ಥಾನಗಳಿಗೆ ರಕ್ತಪಾತವಿಲ್ಲದೆ ಚುನಾವಣೆ ನಡೆದಿದೆ. ಒಂದು ವರ್ಷದ ಅವಧಿಯಲ್ಲಿ ಉಗ್ರರ ವಿರುದ್ಧ ಶೂನ್ಯ ಸಹನೆಯ ನಿಲುವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ ಎಂದು ವಿವರಿಸಿದರು.

ತಿವಾರಿ ಆಕ್ಷೇಪ: ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಗ್ರರ ವಿರುದ್ಧ ಹೋರಾಡಲು ಅಲ್ಲಿ ಚುನಾಯಿತ ಸರ್ಕಾರ ಸ್ಥಾಪನೆಯಾಗಬೇಕು. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನರಿಗೆ ಪ್ರತ್ಯೇಕತೆಯ ಭಾವನೆ ಉಂಟಾಗಿದೆ. ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರದಿಂದಲೇ ಅಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಿದೆ ಎಂದಿದ್ದಾರೆ.

ಕಾಂಗ್ರೆಸ್‌ನಿಂದ ಪಾಠ ಕಲಿಯಬೇಕಿಲ್ಲ

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದೇವೆ ಎಂದು ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇದುವರೆಗೆ ಸಂವಿಧಾನದ 356ನೇ ವಿಧಿ ಮೂಲಕ 132 ಬಾರಿ ರಾಜ್ಯ ಸರ್ಕಾರಗಳನ್ನು ಉರುಳಿಸಲಾಗಿದೆ. ಈ ಪೈಕಿ 93 ಬಾರಿ ಕಾಂಗ್ರೆಸ್‌ ಅದನ್ನು ಬಳಕೆ ಮಾಡಿತ್ತು ಎಂದಿದ್ದಾರೆ. ಇಂಥವರಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಾಗಿಲ್ಲ ಎಂದು ಟೀಕಿಸಿದ್ದಾರೆ.

ರೈಲ್ವೆ ಖಾಸಗೀಕರಣ ಇಲ್ಲ

ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರೈಲ್ವೆ ಖಾಸಗೀಕರಣಗೊಳಿಸುವ ಅಥವಾ ರಾಜಧಾನಿ, ಶತಾಬ್ದಿ ಎಕ್ಸ್‌ಪ್ರೆಸ್‌ನಂಥ ಪ್ರೀಮಿಯಂ ರೈಲುಗಳನ್ನು ಖಾಸಗಿಗೆ ವಹಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ. ಮಹಿಳೆಯರಿಗೆ ಶೇ. 50 ಹುದ್ದೆ: ರೈಲ್ವೆ ಸುರಕ್ಷತಾ ಪಡೆ(ಆರ್‌ಪಿಎಫ್)ನಲ್ಲಿ ಮಹಿಳಾ ಕಾನ್‌ಸ್ಟೇಬಲ್ಗಳ ಸಂಖ್ಯೆಯು ಪ್ರಸ್ತುತ ಬಹಳ ಕಡಿಮೆಯಿದ್ದು, ಖಾಲಿಯಿರುವ 9 ಸಾವಿರ ಹುದ್ದೆಗಳ ಪೈಕಿ ಶೇ.50ರಷ್ಟನ್ನು ಮಹಿಳೆಯರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next