ಕುಣಿಗಲ್ : ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಶ್ರೀಗಂಧ ಕಳ್ಳರ ಮೇಲೆ ಉಪ ಅರಣ್ಯಾಧಿಕಾರಿ ಮಹೇಶ್ ಫೈರಿಂಗ್ ಮಾಡಿದ್ದು ಓರ್ವ ಕಳ್ಳ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಂಪಾಲಾಪುರ ಶ್ರೀಗಂಧ ಮೀಸಲು ಆರಣ್ಯ ಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಪತ್ತೆಯಾಗಿಲ್ಲ, ಅರಣ್ಯ ಸಿಬ್ಬಂದಿ ಶೇಖರ್ ಎಡ ಕೈಗೆ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ :
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಂಪಾಲಾಪುರ ಮೀಸಲು ಆರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಶ್ರೀಗಂಧ ಪ್ಲಾಂಟ್ ಮಾಡಲಾಗಿದೆ. ಸುಮಾರು 1500ಕ್ಕೂ ಹೆಚ್ಚು ಶ್ರೀಗಂಧದ ಮರಗಳಿವೆ ಈ ಹಿಂದೆಯೂ ಇಲ್ಲಿ ಸಾಕಷ್ಟು ಭಾರಿ ಶ್ರೀಗಂಧ ಕಳವು ಪ್ರಕರಣಗಳು ನಡೆದಿವೆ.
ಶನಿವಾರ ಮೂರ್ನಾಲ್ಕು ಜನ ಕಳ್ಳರು ಶ್ರೀಗಂಧ ಮರಗಳನ್ನು ಕತ್ತರಿಸುತ್ತಿದ್ದಾಗ ಗಸ್ತಿನಲ್ಲಿದ್ದ ಉಪ ಅರಣ್ಯಾಧಿಕಾರಿ ಮಹೇಶ್, ಸಿಬ್ಬಂದಿಗಳಾದ ಶಿವನಂಜಪ್ಪ, ಶರಣಪ್ಪ, ಶಿವನಂಜಯ್ಯ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಕಳ್ಳರು ಅರಣ್ಯ ಸಿಬ್ಬಂದಿಯ ಮೇಲೆ ಮಚ್ಚು ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯಾಧಿಕಾರಿಗಳು ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಕಳ್ಳರು ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದಾಗ ಅತ್ಮರಕ್ಷಣೆಗಾಗಿ ಉಪ ಅರಣ್ಯಾಧಿಕಾರಿ ಮಹೇಶ್ ನೇರವಾಗಿ ಕಳ್ಳರ ಮೇಲೆ ಗುಂಡು ಹಾರಿಸಿದಾಗ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದ ಮೂವರು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್‌ಪಿ ರಾಹುಲ್ ಕುಮಾರ್, ಡಿಎಫ್‌ಓ ಡಾ.ರಮೇಶ್, ಎಸಿಎಫ್‌ಓ ಚಿಕ್ಕರಾಜು, ತಹಸೀಲ್ದಾರ್ ಮಹಾಬಲೇಶ್ವರ್, ಡಿವೈಎಸ್‌ಪಿ ರಮೇಶ್, ಸಿಪಿಐ ಗುರುಪ್ರಸಾದ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯೂರುದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.