ಶ್ರೀನಗರ: ಮಂಗಳವಾರ ತಡರಾತ್ರಿಯಿಂದ ನಡೆದ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಬುಧವಾರ ಬೆಳಗಿನ ಜಾವ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಆದರೆ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ.
ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಪಡೆಗಳು ಹಾಗೂ ಇತರೇ ಭದ್ರತಾ ಏಜೆನ್ಸಿಗಳು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಎರಡರಿಂದ ಮೂವರು ಉಗ್ರರೊಂದಿಗೆ ಭಾರೀ ಗುಂಡಿನ ಚಕಮಕಿ ನಡೆಯಿತು. ಈ ಗುಂಡಿನ ಚಕಮಕಿ ರಾತ್ರಿಯಿಡೀ ನಡೆಯಿತು ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
ಮಂಗಳವಾರ ಸಾಯಂಕಾಲ 5 ಗಂಟೆಯ ಹೊತ್ತಿಗೆ ಬಾರಾಮುಲ್ಲಾ ಪ್ರದೇಶದಲ್ಲಿ ಈ ಎನ್ ಕೌಂಟರ್ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಸಂಪೂರ್ಣ ಪ್ರದೇಶವನ್ನು ಸುತ್ತುವರಿದ ಸೇನೆ ಬಳಿಕ ಕಾರ್ಯಾಚರಣೆ ಪ್ರಾರಂಭಿಸಿತು. ಬುಧವಾರ ಬೆಳಗ್ಗಿನ ಜಾವದವರೆಗೂ ಈ ಕಾರ್ಯಾಚರಣೆ ಮುಂದುವರೆದು ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ ಎಂದು ತಿಳುದುಬಂದಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಅಮಾನತು ಮಾಡುವ ಕೇಂದ್ರಸರಕಾರದ ನಿರ್ಧಾರದ ಬಳಿಕ ಕಾಶ್ಮೀರ ಕಣಿವೆಯಲ್ಲಿ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾಚರಣೆ ಇದಾಗಿದೆ ಎನ್ನುವುದು ಗಮನಾರ್ಹ ಅಂಶವಾಗಿದೆ.
ಈ ಕಾರ್ಯಾಚರಣೆಯಲ್ಲಿ ಉಗ್ರರ ಬಳಿಯಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.