ವರದಿ: ಮಲ್ಲಿಕಾರ್ಜುನ ಮೆದಿಕೇರಿ
ದೋಟಿಹಾಳ: ಸಮೀಪದ ಕ್ಯಾದಿಗುಪ್ಪ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ನಾಲ್ಕು ವರ್ಷಗಳಿಂದ ಒಬ್ಬರೇ ಶಿಕ್ಷಕರಿದ್ದಾರೆ. ಊರ ಹೊರಗೆ ನೂತನ ಪ್ರೌಢಶಾಲೆಗೆ ಕೊಠಡಿಗಳು ನಿರ್ಮಾಣವಾಗಿವೆ. ಆದರೆ ಅಲ್ಲಿಗೆ ಹೋದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಸದ್ಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳು ನಡೆಯುತ್ತಿವೆ.
ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಶಾಲೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಈ ಪ್ರೌಢಶಾಲೆ ಆರಂಭವಾಗಿ ನಾಲ್ಕು ವರ್ಷಗಳಾಗಿವೆ. 9 ಹಾಗೂ 10ನೇ ತರಗತಿ ಇದ್ದು, ಒಟ್ಟು 133 ವಿದ್ಯಾರ್ಥಿಗಳಿದ್ದಾರೆ. ಎಲ್ಲ ವಿಷಯಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಸದ್ಯ ಶೈಕ್ಷಣಿಕ ವರ್ಷ ಆರಂಭವಾದ ಕಾರಣ ಶಾಲೆಗೆ ಸೇರ್ಪಡೆ ಹಾಗೂ ಬಿಡುಗಡೆ ಬಯಸಿದವರಿಗೆ ದಾಖಲೆ ನೀಡುವ ಕೆಲಸದಲ್ಲಿ ಇರುವ ಒಬ್ಬ ಶಿಕ್ಷಕ ಬ್ಯುಸಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸರಿಯಾದ ಪಾಠಗಳೇ ನಡೆಯುತ್ತಿಲ್ಲ. ಸರಕಾರ ಗ್ರಾಮೀಣ ಪ್ರದೇಶಕ್ಕೆ ಕೇವಲ ಶಾಲೆ ಮಂಜೂರು ಮಾಡಿದರೇ ಸಾಲದು, ಹುದ್ದೆಗಳನ್ನು ನೀಡಬೇಕು. ಇಲ್ಲದ್ದಿದರೆ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲ್ಲ.
ಗ್ರಾಮದ ಪ್ರೌಢಶಾಲಾ ಮಕ್ಕಳಿಗೆ ಶಿಕ್ಷಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದನ್ನು ತಿಳಿದ ಸ್ಥಳೀಯ ಮುಖಂಡರು ಹಾಗೂ ಗ್ರಾಪಂನವರು ಸ್ವಯಂ ಪ್ರೇರಣೆಯಿಂದ 2-3 ವರ್ಷಗಳಿಂದ ಮೂವರು ಅತಿಥಿ ಶಿಕ್ಷಕರನ್ನು ನೀಡುತ್ತಿದ್ದಾರೆ. ಇಷ್ಟು ವರ್ಷ ಅತಿಥಿ ಶಿಕ್ಷಕರಿಂದಲೇ ಶಾಲೆ ನಡೆಯುತ್ತಿದೆ. ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರನ್ನು ನೀಡುವುದು ಶಾಲೆ ಆರಂಭವಾಗಿ ಮೂರ್ನಾಲ್ಕು ತಿಂಗಳಾದ ನಂತರ. ಹೀಗಿರುವಾಗ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಸಿಗುತ್ತಿಲ್ಲ.
ನಮಗೆ ಶಾಲೆ ಯಾಕೆ ನೀಡಿದ್ದೀರಿ: ಇದುವರೆಗೂ ನಮ್ಮ ಶಾಲೆಗೆ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿಲ್ಲ. ಕೇವಲ ಶಾಲೆ ನೀಡಿದರೆ ಸಾಲದು, ಇದರ ಜೊತೆಗೆ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಿಕ್ಷಕರಿಗಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮದ ನಾಗರಿಕರು ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂ.ಎಸ್)ದಡಿ 2018-19ನೇ ಸಾಲಿನಲ್ಲಿ ಗ್ರಾಮದ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆ ಆರಂಭಿಸಲು ಸರಕಾರ ಆದೇಶ ನೀಡಿದೆ. ಆದರೆ 2015-16, 2016-17 ಮತ್ತು 2018-19ನೇ ಸಾಲಿನಲ್ಲಿ ಉನ್ನತೀಕರಿಸಿದ ರಾಜ್ಯದ 89 ಶಾಲೆಗಳಿಗೆ ಎಂಎಚ್‌ಆರ್‌ಡಿ ವತಿಯಿಂದ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಹುದ್ದೆಗೆ ಅನುಮೊದನೆ ನೀಡದೇ ಏಕಾಏಕಿ ಪ್ರೌಢಶಾಲೆಗಳಿಗೆ ಅನುಮತಿ ನೀಡಿರುತ್ತಾರೆ. ಇದರಿಂದ ರಾಜ್ಯದಲ್ಲಿ ಉನ್ನತೀಗೊಂಡ 89 ಶಾಲೆಗಳಿಗೆ ಸುಮಾರು 754 ಹುದ್ದೆಗಳ ಮಂಜೂರಾತಿ ಬೇಕಾಗಿದೆ. ಸರಕಾರ ಈ ಹುದ್ದೆಯನ್ನು ಮರು ಹಂಚಿಕೆ ಮೂಲಕ ಮಾಡಿಕೊಳ್ಳುವಂತೆ ಶಿಕ್ಷಣ ಆಯುಕ್ತರಿಗೆ ಆದೇಶ ನೀಡಿದೆ. ಹೀಗಾಗಿ ಶಿಕ್ಷಕರ ಕೊರತೆ ಕಾಣುತ್ತಿದೆ.