ಒಬ್ಬರು ಪಂಜಾಬ್‌ನವರು. ಇನ್ನೊಬ್ಬರು ಕರ್ನಾಟಕದವರು. ಇಬ್ಬರು ಎನ್‌ಆರ್‌ಐಗಳು. ಇರೋದು ದುಬೈನಲ್ಲಿ. ಇಬ್ಬರಿಗೂ ಅನಿಸಿದ್ದು ಒಂದು ಒಳ್ಳೆಯ ಸಿನಿಮಾ ಮಾಡಬೇಕು ಅಂತ. ಹಾಗನಿಸಿದ್ದೇ ತಡ, “2 ಸ್ಟೇಟ್ಸ್ ಫಿಲ್ಮ್’ ಬ್ಯಾನರ್ ಹುಟ್ಟುಹಾಕಿ, ಒಂದು ತಂಡ ರೆಡಿ ಮಾಡಿಕೊಂಡರು. ಒಳ್ಳೇ ಕಥೆ ಆಯ್ಕೆ ಮಾಡಿಕೊಂಡರು. ಅದಕ್ಕೆ ಚಾಲನೆಯನ್ನೂ ಕೊಟ್ಟರು. ಆ ನಿರ್ಮಾಪಕರ ಹೆಸರು ರಾಜಾನಂದ್ ಮತ್ತು ಕೌಶಲ್. ರಾಜಾನಂದ್ ಕನ್ನಡದವರು. ಕೌಶಲ್ ಪಂಜಾಬಿನವರು. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಈ ಹಿಂದೆ “ಒಂದ್ ಕಥೆ ಹೇಳಾ’ ಎಂಬ ಶೀರ್ಷಿಕೆ ಇಡಬೇಕು ಅಂದುಕೊಂಡಿದ್ದರು. ಆ ಶೀರ್ಷಿಕೆಯಡಿ ಇನ್ನೊಂದು ಚಿತ್ರ ಶುರುವಾದ ಹಿನ್ನೆಲೆಯಲ್ಲಿ, ಅದನ್ನು ಕೈ ಬಿಟ್ಟು ಬೇರೆ ಹೆಸರಿಡಲು ನಿರ್ಧರಿಸಿದೆ ಚಿತ್ರತಂಡ.
ಈ ಚಿತ್ರವನ್ನು ಕೃಷ್ಣ ಸಾಯಿ ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಸಾಯಿ ಅವರಿಗೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ತಮಿಳಿನ ಎರಡು ಚಿತ್ರಗಳು ಈಗ ಬಿಡುಗಡೆಗೆ ರೆಡಿಯಾಗಿವೆ. “ಇದೊಂದು ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುವ ಒಂದು ಮರ್ಡರ್ ಮಿಸ್ಟರಿ ಕಥೆ ಇಲ್ಲಿದೆ. ಐಟಿ ಕ್ಷೇತ್ರದಲ್ಲಿರುವ ಮೂವರು ಹುಡುಗ, ಹುಡುಗಿಯರು ಒಂದು ಬಂಗಲೆಗೆ ಬರುತ್ತಾರೆ. ಸದಾ ತರೆಲ ಕೆಲಸ ಮಾಡುವ ಹುಡುಗರ ಬದುಕಲ್ಲೊಂದು ಘಟನೆ ನಡೆಯುತ್ತದೆ. ಅಲ್ಲೊಂದು ಕೊಲೆಯೂ ನಡೆಯುತ್ತದೆ. ಅದು ಯಾರು ಮಾಡಿದ್ದು, ಯಾಕೆ ಆಗಿದ್ದು ಎಂಬುದೇ ಸಸ್ಪೆನ್ಸ್’ ಎನ್ನುತ್ತಾರೆ ನಿರ್ದೇಶಕ ಕೃಷ್ಣ ಸಾಯಿ.
ನಿರ್ಮಾಪಕದ್ವಯರಾದ ರಾಜಾನಂದ್ ಮತ್ತು ಕೌಶಲ್ ಅವರಿಬ್ಬರಿಗೆ ಕನ್ನಡದಲ್ಲಿ ಹೊಸತನದ ಚಿತ್ರಗಳು ಸದ್ದು ಮಾಡುತ್ತಿವೆ ಎಂದು ತಿಳಿದು, ತಾವೂ ಒಂದು ಹೊಸ ಪ್ರಯೋಗ ಮಾಡಬೇಕು ಅಂತ, ಈ ಕಥೆ ಆಯ್ಕೆ ಮಾಡಿಕೊಂಡು, ಅದಕ್ಕೆ ತಕ್ಕಂತಹ ತಂತ್ರಜ್ಞರನ್ನು ಆಯ್ಕೆ ಮಾಡಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿಕೊಂಡರು.
ಸಂಯುಕ್ತಾ ಹೊರನಾಡು, ಅವರಿಗಿಲ್ಲಿ ಚಾಲೆಂಜಿಂಗ್ ಪಾತ್ರ ಸಿಕ್ಕಿದೆಯಂತೆ. ಉಳಿದಂತೆ ಚಿತ್ರದಲ್ಲಿ ಶಂಕರ್, ಅಮೋಘ…, ರಾಹುಲ್, ನಿಮಿಷಾ, ನೀತು ಬಾಲ ಇತರರು ನಟಿಸುತ್ತಿದ್ದಾರೆ. ಯತೀಶ್ ಸಂಗೀತ ನೀಡುತ್ತಿದ್ದಾರೆ. ಮೂರು ಹಾಡುಗಳಿದ್ದು, ಪಾರ್ಟಿ, ಪಬ್ ಹಾಗೂ ಯೂಥ್ ಲೈಫ್ ಕುರಿತ ಹಾಡುಗಳು ಇಲ್ಲಿರಲಿವೆ ಎಂಬುದು ಯತೀಶ್ ಮಾತು.
– ವಿಜಯ್ ಭರಮಸಾಗರ