Advertisement
ಚಂದ್ರಶೇಖರ್ ಆರ್ ಪದ್ಮಶಾಲಿ ನಿರ್ಮಾಣದ ಈ ಚಿತ್ರದಲ್ಲಿ ಅರುಣ್ ಗೌಡ ಹಾಗೂ ಕಾವ್ಯ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್ ಹಿಟ್ ಆಗಿದ್ದು, ಚಿತ್ರ ಜನವರಿ 19 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಬಗ್ಗೆ ನಿರ್ದೇಶಕ ಮಧುಸೂಧನ್ ಮಾತನಾಡಿದ್ದಾರೆ ….
Related Articles
Advertisement
ಎಂಟು ವರ್ಶನ್‌ಗಳಲ್ಲಿ ಕಥೆ ಮಾಡಿಕೊಂಡೆವು. ನಮಗೆ ತೃಪ್ತಿಯಾದ ನಂತರ ಚಿತ್ರೀಕರಣ ಆರಂಭಿಸಿದೆವು. ಇಲ್ಲಿ ನಿಮಗೆ ಸಮೃದ್ಧವಾದ ಕಥೆ ಸಿಗುತ್ತದೆ. ಸಿನಿಮಾ ಆರಂಭವಾದಾಗಿನಿಂದಲೇ ಕಥೆ ತೆರೆದುಕೊಳ್ಳುತ್ತದೆ. ಅನಾವಶ್ಯಕವಾಗಿ ನಾವು ಟೈಮ್ ವೇಸ್ಟ್ ಮಾಡಿಲ್ಲ. ಪ್ರತಿ ಸೆಕೆಂಡ್ ಅನ್ನು ಚೆನ್ನಾಗಿ ಬಳಸಿಕೊಂಡಿದ್ದೇವೆ’ ಎಂದು ಸಿನಿಮಾ ಆರಂಭವಾದ ಬಗ್ಗೆ ಹೇಳುತ್ತಾರೆ ಮಧುಸೂಧನ್.
ಹೀರೋ ವರ್ಸಸ್ ಹೀರೋಯಿನ್: “3 ಗಂಟೆ 30 ದಿನ 30 ಸೆಕೆಂಡ್’ ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಈ ಬಗ್ಗೆಯೂ ನಿರ್ದೇಶಕ ಮಧುಸೂಧನ್ ಮಾತನಾಡುತ್ತಾರೆ. ಅವರು ಹೇಳುವಂತೆ, ಇದು ಹೀರೋ ವರ್ಸಸ್ ಹೀರೋಯಿನ್ ಸಿನಿಮಾ. ಹಾಗಂತ ಅವರಿಬ್ಬರು ಫೈಟ್ ಮಾಡುತ್ತಾರಾ ಎಂದು ನೀವು ಕೇಳುವಂತಿಲ್ಲ.
ಇಲ್ಲಿ ನಾಯಕ-ನಾಯಕಿಯರ ಸಿದ್ಧಾಂತ, ಅವರ ಆಲೋಚನೆಗಳು ಎರಡೂ ವಿರುದ್ಧವಾಗಿರುತ್ತವೆಯಂತೆ. ಆ ಮೂಲಕ ಸಿನಿಮಾ ಸಾಗುತ್ತದೆ. “ಚಿತ್ರದಲ್ಲಿ ನಾಯಕ-ನಾಯಕಿಯ ಆಲೋಚನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ನಾಯಕಿ ಪಕ್ಕಾ ಪ್ರಾಕ್ಟಿಕಲ್ ಆಗಿ ಆಲೋಚಿಸುವವಳು. ಜೀವನದಲ್ಲಿ ಕಾಸು ಮುಖ್ಯ, ಕಾಸಿದ್ದರೆ ಬದುಕಬಹುದು, ಸಂಬಂಧಗಳಿಗಿಂತ ಹಣ ಮತ್ತು ಅಂತಸ್ತಿಗೆ ಹೆಚ್ಚಿನ ಬೆಲೆ ಕೊಡುವವಳು.
ಆದರೆ, ನಾಯಕ ಮಾತ್ರ ಅದಕ್ಕೆ ತದ್ವಿರುದ್ಧ. ಆತ ಸಂಬಂಧಗಳನ್ನು ಗೌರವಿಸುವ, ಪ್ರೀತಿಸುವವ. ಕಾಸು, ಅಂತಸ್ತಿಗಿಂತ ಭಾವನೆಗಳು ಮುಖ್ಯ ಎಂದು ನಂಬಿರುವವ. ಹೀಗೆ ಇಬ್ಬರ ಮಧ್ಯೆ ಸಿದ್ಧಾಂತಗಳ ವಿಚಾರದಲ್ಲಿ ಸ್ಪರ್ಧೆಯೇ ನಡೆಯುತ್ತಿರುತ್ತದೆ. ಅಂತಿಮವಾಗಿ ಯಾವುದು ಗೆಲ್ಲುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ.
ಕಥೆಗೆ ಸೂಕ್ತವಾದ ಟೈಟಲ್: ಚಿತ್ರದ ಟೈಟಲ್ “3 ಗಂಟೆ 30 ದಿನ 30 ಸೆಕೆಂಡ್’. ಈ ಟೈಟಲ್‌ನಲ್ಲೇ ಒಂದು ಕುತೂಹಲವಿದೆ. ಹೀಗಿರುವಾಗ ಸಿನಿಮಾದಲ್ಲಿ ಏನಿರಬಹುದು, ಈ ಟೈಟಲ್‌ಗೂ ಕಥೆಗೂ ಯಾವ ರೀತಿ ಲಿಂಕ್ ಆಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ನಿರ್ದೇಶಕರು ಹೇಳುವಂತೆ ಚಿತ್ರದ ಕಥೆಗೆ ಈ ಶೀರ್ಷಿಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆಯಂತೆ. ಅದು ಹೇಗೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬಹುದು.
ಎಷ್ಟೇ ಕಷ್ಟದ ಕೆಲಸವಾದರೂ ಸುಲಭವಾಗಿ ಮಾಡುವ ನಾಯಕ, ಅನೇಕ ವರ್ಷಗಳಿಂದ ಬಗೆಹರಿಯದ ಸಮಸ್ಯೆಯೊಂದನ್ನು 3 ಗಂಟೆಯಲ್ಲಿ ಬಗೆಹರಿಸುತ್ತಾನಂತೆ. ಆದರೆ, ಅದು ಮತ್ತೂಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ ಮತ್ತು ನಾಯಕನನ್ನು ಸುತ್ತಿಕೊಳ್ಳುತ್ತದೆಯಂತೆ. ಅದು 30 ದಿನ, 30 ಸೆಕೆಂಡ್‌ವರೆಗೂ ಮುಂದುವರೆಯುತ್ತದೆಯಂತೆ. ಅದು ಹೇಗೆ ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು.
ಇನ್ನು, ನಿರ್ದೇಶಕ ಮಧುಸೂಧನ್ ಅವರಿಗೆ ತಾವು ಮಾಡಿದ ಕೆಲಸ ತೃಪ್ತಿ ತಂದಿದೆ. ಅದಕ್ಕೆ ಸರಿಯಾಗಿ ಈಗಾಗಲೇ ಸಿನಿಮಾ ನೋಡಿದವರು ಕೂಡಾ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. “ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಸಿನಿಮಾ ಮಾಡಲು ಹೊರಟೆವು. ಆದರೆ ಅದು ದೊಡ್ಡದಾಗುತ್ತಾ ಹೋಯಿತು. ಮುಖ್ಯವಾಗಿ ನಾವು ಸಿನಿಮಾವನ್ನು ಬೇಗ ಮುಗಿಸಬೇಕೆಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ನಮಗೆ ತೃಪ್ತಿಯಾಗುವಂತೆ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ಅವರು.
ಹಾಡು, ಟ್ರೇಲರ್‌ಗೆ ಮೆಚ್ಚುಗೆ: ಚಿತ್ರದ ಹಾಡು, ಟೀಸರ್, ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ಸಿನಿಮಾವನ್ನು ಕೂಡಾ ಜನ ಇದೇ ರೀತಿ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರದ ಟೀಸರ್ ಅನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.
ಇನ್ನು, ಚಂದನ್ ಶೆಟ್ಟಿ ಕಾಣಿಸಿಕೊಂಡಿರುವ ಹಾಡೊಂದು 12 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. “ಜನರ ಪ್ರತಿಕ್ರಿಯೆ ನೋಡಿ ಖುಷಿಯಾಗುತ್ತಿದೆ. ನಮ್ಮ ಚಿತ್ರದಲ್ಲಿ ದೊಡ್ಡ ಸ್ಟಾರ್‌ಗಳಿಲ್ಲ. ಆದರೂ ಅವರು ಪ್ರೋತ್ಸಾಹಿಸುತ್ತಿರುವ ರೀತಿಯನ್ನು ಮೆಚ್ಚಲೇಬೇಕು’ ಎನ್ನುವುದು ಮಧುಸೂಧನ್ ಮಾತು.