Advertisement

ಒಂದೆಡೆ ನೆರೆ..ಮತ್ತೂಂದೆಡೆ ಬರ…!

01:36 PM Aug 04, 2019 | Suhan S |

ರಾಯಚೂರು: ಜಿಲ್ಲೆಯಲ್ಲಿ ಹರಿಯುತ್ತಿರುವ ಒಂದು ನದಿಯಲ್ಲಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದ್ದರೆ, ಮತ್ತೂಂದು ನದಿಯಲ್ಲಿ ಅಕ್ಷರಶಃ ನೀರಿಲ್ಲದೇ ಭಣಗುಡುತ್ತಿದೆ.

Advertisement

ಮಹಾರಾಷ್ಟ್ರ ಭಾಗದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಕಷ್ಣಾ ನದಿಗೆ 2.20 ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ಅಧಿಕ ನೀರು ಹರಿಸಿದರೆ, ಶನಿವಾರ ಅದು 3 ಲಕ್ಷ ಕ್ಯೂಸೆಕ್‌ ತಲುಪುವ ಸಾಧ್ಯತೆ ಇದೆ. ಇದರಿಂದ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ಸೇತುವೆಗಳ ಮುಳುಗಡೆ: ಕೆಲ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಶನಿವಾರ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಇನ್ನು ನಡುಗಡ್ಡೆ ನಿವಾಸಿಗಳನ್ನು ಸ್ಥಳಾಂತರಿಸಿದರೆ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡಂಗೂರ ಸಾರಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಜಿಲ್ಲಾಡಳಿತ ನದಿ ಪಾತ್ರಗಳಲ್ಲಿ ವಿಶೇಷ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಿದೆ.

ಹನಿ ನೀರು ಕೂಡ ಹರಿದಿಲ್ಲ: ಕೃಷ್ಣೆಯಲ್ಲಿ ಇಂಥ ಪ್ರವಾಹ ಸ್ಥಿತಿಯಿದ್ದರೆ; ತುಂಗಭದ್ರಾ ನದಿಯಲ್ಲಿ ಮಾತ್ರ ಹನಿ ನೀರಿಲ್ಲದೇ ಬಣಗುಡುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ಈವರೆಗೆ ಕೇವಲ 32.07 ಟಿಎಂಸಿ ನೀರು ಶೇಖರಣೆಯಾಗಿದ್ದು, ನದಿಗೆ ಹನಿ ನೀರು ಕೂಡ ಹರಿಸಿಲ್ಲ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಇರುವುದು ವಾಸ್ತವ. ಕೇವಲ ಕುಡಿಯುವ ಉದ್ದೇಶದಿಂದ ಕೆರೆಗಳನ್ನು ತುಂಬಿಸಿಕೊಳ್ಳಲು ಕಾಲುವೆಗೆ ನೀರು ಹರಿಸಿದ್ದು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ನೀರು ಬಿಡುತ್ತಿಲ್ಲ. ಇದರಿಂದ ಒಂದು ನದಿಯಲ್ಲಿ ನೆರೆ, ಮತ್ತೂಂದರಲ್ಲಿ ಬರದ ನಿರ್ಮಾಣವಾಗಿರುವುದು ವಿಪರ್ಯಾಸ.

ಈ ಬಾರಿಯೂ ಜಲಸಂಕಷ್ಟ: ತುಂಗಭದ್ರಾ ಜಲಾಶಯಕ್ಕೆ ಒಳಹರಿವು ತೀರ ಕಡಿಮೆಯಾಗಿದ್ದು, ಈ ಬಾರಿಯೂ ಕೃಷಿಗೆ ಸಮರ್ಪಕ ನೀರು ಸಿಗುವುದೇ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಪಶ್ಚಿಮಘಟ್ಟ ವಾಹಿನಿಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಕಳೆದ ವರ್ಷ ಇದೇ ವೇಳೆಗೆ ಟಿಬಿ ಡ್ಯಾಂನಲ್ಲಿ 97 ಟಿಎಂಸಿ ಅಡಿ ನೀರು ಶೇಖರಣೆಯಾಗಿತ್ತು. ಆದರೆ, ಈ ಬಾರಿ ಕೇವಲ 32.02 ಟಿಎಂಸಿ ಮಾತ್ರ ಶೇಖರಣೆಯಾಗಿದೆ. ಅಂದರೆ 100 ಟಿಎಂಸಿ ಅಡಿ ನೀರಿನ ಸಾಮರ್ಥ್ಯವಿದ್ದು, ಭರ್ತಿಯಾಗಲು ಸಾಕಷ್ಟು ನೀರು ಬೇಕಿದೆ. ಶನಿವಾರ 20,091 ಕ್ಯೂಸೆಕ್‌ ಒಳಹರಿವು ಇತ್ತು. ಆದರೆ, ಈಗಿನ ಸ್ಥಿತಿಯಲ್ಲಿ ತುಂಗಾ ಜಲಾಶಯದಿಂದ ಹೊರ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರದಿರುವುದು ರೈತಾಪಿ ವರ್ಗದ ಆತಂಕಕ್ಕೆ ಕಾರಣವಾಗಿದೆ.

Advertisement

ಎನ್‌ಆರ್‌ಬಿಸಿಗೆ ನೀರು: ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾದ ಪರಿಣಾಮ ಎನ್‌ಆರ್‌ಬಿಸಿಗೆ ನೀರು ಹರಿಸಿದ್ದು, ಅಲ್ಲಿ ಈಗಾಗಲೇ ನಾಟಿ ಕಾರ್ಯ ಭರದಿಂದ ಸಾಗಿದೆ. ಕಾಲುವೆಗಳಿಗೆ ನೀರು ಹರಿಸಿದ್ದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ಆದರೆ ನದಿ ಪಾತ್ರಗಳಲ್ಲಿ ಪಂಪ್‌ಸೆಟ್ ಅಳವಡಿಸಿದ್ದರಿಂದ ರೈತರು ಮಾತ್ರ ಇನ್ನೂ ನಾಟಿ ಮಾಡಲು ಮುಂದಾಗಿಲ್ಲ.

 

•ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next