Advertisement

ಒಂದೆಡೆ ಅನುಕೂಲ-ಮತ್ತೂಂದೆಡೆ ಸಂಕಷ್ಟ

12:01 PM Jan 02, 2018 | Team Udayavani |

ವಾಡಿ: ಪರ್ಷಿ ಕಲ್ಲಿನಿಂದ ಜಗತ್‌ ಪ್ರಸಿದ್ದವಾಗಿರುವ ಚಿತ್ತಾಪುರ ತಾಲೂಕಿನ ವಾಡಿ ವಲಯದ ಗಣಿ ಭೂಮಿಗಳು ಈಗ ಹಸಿರಿನ ಹಾಸಿಗೆಯಾಗಿ ಕಂಗೊಳಿಸುತ್ತಿವೆ. ಪಾತಾಳಗಂಗೆ ಸೌಲಭ್ಯ ಪಡೆದ ರೈತರು, ಫಸಲುಗಳ ಮಧ್ಯೆ ಬದುಕು ಕಟ್ಟಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಗುಡ್ಡಗಾಡು ಪ್ರದೇಶಗಳ ಮಧ್ಯೆ ಇದ್ದು ಪ್ರಕೃತಿ ಸೌಂದರ್ಯ ಸೂಸುವ ಯಾಗಾಪುರ ಗ್ರಾಪಂ ವ್ಯಾಪ್ತಿಯ ಹಲವು ತಾಂಡಾಗಳ ಬಂಜಾರಾ ಜನಾಂಗದವರ ನೂರಾರು ಎಕರೆ ಜಮೀನುಗಳಲ್ಲಿ ಜಲಧಾರೆ ಚಿಮ್ಮುತ್ತಿದ್ದು, ಕೃಷಿ ಚಟುವಟಿಕೆ ವರ್ಷದ ನಿರಂತರ ಕಾಯಕವಾಗಿ ಬದಲಾಗಿದೆ. ಭೂಮಿಯನ್ನು ಸಣ್ಣ ಸಣ್ಣ ಗದ್ದೆಗಳನ್ನಾಗಿ ಪರಿವರ್ತಿಸಿರುವ ರೈತರು, ನೀರು ಹರಿಸಿ ಚಿನ್ನದ ಬೆಳೆ ತೆಗೆಯುತ್ತಿದ್ದಾರೆ. ಯಾಗಾಪುರ, ಬೆಳಗೇರಿ, ಶಿವನಗರ (ದೊಡ್ಡ ತಾಂಡಾ) ತಾಂಡಾ, ಅಣ್ಣಿಕೇರಾ ತಾಂಡಾ, ಲಾಡ್ಲಾಪುರ, ಹೀರಾಮಣಿ ತಾಂಡಾ, ಅಳ್ಳೊಳ್ಳಿ ವಲಯ, ಪತ್ತುನಾಯಕ ತಾಂಡಾ ಸೇರಿದಂತೆ ಸುಮಾರು ಹತ್ತಾರು ತಾಂಡಾಗಳು ಕೃಷಿಯಲ್ಲಿ ಪ್ರಗತಿ ಸಾಧಿಸಿರುವುದು ಬಹಿರಂಗ ಸತ್ಯವಾಗಿದೆ.

Advertisement

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಜಾತಿ ಜನರಿಗೆ ನೀಡಲಾಗುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಸೌಲಭ್ಯ ಪಡೆದಿರವ ಲಂಬಾಣಿ ಸಮುದಾಯದ ರೈತರು, ಸರಕಾರದ ಸೌಕರ್ಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ತಮಗಿರುವ ಕಿರುಭೂಮಿಯಲ್ಲೇ ಕೃಷಿ ಕಾಯಕದಲ್ಲಿ ಶ್ರಮಿಸುವ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿರುವುದು ಕ್ಷೇತ್ರದ ಪ್ರಗತಿ ಲಕ್ಷಣವೇ ಸರಿ. ಗುಡ್ಡಗಳ ಮಧ್ಯೆ ಇರುವ ಭೂಮಿ ಬಹುತೇಕ ಬಂಜರು ಅಥವಾ ಮಣ್ಣಿನ ಸತ್ವ ಕಳೆದುಕೊಂಡ ಕಲ್ಲು ಹರಳಿನಿಂದ ಕೂಡಿದ ವ್ಯವಸಾಯಕ್ಕೆ ಯೋಗ್ಯವಲ್ಲದ ನೆಲವಾಗಿದೆ. ಇಂತಹ ವ್ಯರ್ಥ ಭೂಮಿಗೆ ರೈತರು ನೀರು ಹರಿಸಿ ಭತ್ತ, ರಾಗಿ, ಗೋದಿ,
ಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ, ಬದನೆ, ಕಡಲೆ, ಹತ್ತಿ, ಕಬ್ಬು ಬೆಳೆದು ಹಸಿರು ವನವನ್ನಾಗಿ ಪರಿಸರ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಡಿಯುವ ರೈತರಿಗೆ ನೀರು ಮತ್ತು ವಿದ್ಯುತ್‌ ಲಭ್ಯವಾದರೆ ಆರ್ಥಿಕ ಸಬಲತೆ ಸಾಧ್ಯ ಎಂಬುದಕ್ಕೆ ಯಾಗಾಪುರ ವಲಯದ ತಾಂಡಾಗಳ ರೈತರೆ ಸಾಕ್ಷಿಯಾಗಿದ್ದಾರೆ.

ಸಮರ್ಪಕವಾಗಿ ಬಳಕೆಯಾಗುತ್ತದೆ ಸವಲತು: ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಪ್ರತಿ ವರ್ಷ ಸಣ್ಣ ರೈತರಿಗೆ  ಜೂರು ಮಾಡುವ ಗಂಗಾಕಲ್ಯಾಣ ಯೋಜನೆ ಮೂಲಕ ಕೊಳವೆಬಾವಿ ಮತ್ತು ವಿದ್ಯುತ್‌ ವ್ಯವಸ್ಥೆಯಿಂದ ಯಾಗಾಪುರದ ಒಟ್ಟು ಒಂಬತ್ತು ತಾಂಡಾಗಳ ರೈತರು ನೀರಾವರಿ ಕೃಷಿಯಲ್ಲಿ ತೊಡಗಿದ್ದಾರೆ. ಸರಕಾರದ ಸವಲತ್ತು ಸಮರ್ಪಕವಾಗಿ ಬಳಕೆಯಾಗುತ್ತಿದೆ. ವಿದ್ಯುತ್‌ ನೀಡುವ ಅವಧಿ ಹೆಚ್ಚಿಸಿ ಸಮರ್ಪಕವಾಗಿ ಬೀಜ ವಿತರಣೆಯಾಗಬೇಕಿದೆ. ಬೆಳೆದ ಬೆಳೆಗಳಿಗೆ ಸರಕಾರ ಉತ್ತಮ ಬೆಲೆ ನೀಡಿ ಖರೀದಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ.
 ಶಂಕರ ಜಾಧವ. ಅಧ್ಯಕ್ಷರು, ಅಖೀಲ ಭಾರತ ಬಂಜಾರಾ ಸೇವಾ ಸಂಘ ವಾಡಿ ಘಟಕ

 ಮಡಿವಾಳಪ್ಪ ಹೇರೂರ

ಅಫಜಲಪುರ: ಪಟ್ಟಣದ ಹೊರವಲಯದಲ್ಲಿರುವ ಕೆರೆ ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೆಲ ದಿನಗಳ ಹಿಂದಷ್ಟೆ ಕೆರೆ ಬದು ಕುಸಿದು ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಕೆರೆ ಒಡೆಯುತ್ತದೆ ಎಂಬ ಭಯದಲ್ಲಿದ್ದ ರೈತರು ಆತಂಕ ವ್ಯಕ್ತಪಡಿಸಿದ್ದರು. ಸಂಬಂಧಿಸಿದ ಇಲಾಖೆಯವರು ಕೆರೆ ಬದಿಯಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಅಗೆದು ಕಾಲುವೆ ಥರ ಮಾಡಿ
ನೀರು ಹರಿಬಿಟ್ಟಿದ್ದಾರೆ. ಇದರಿಂದ ಭಾರಿ ಪ್ರಮಾಣದ ನೀರು ಹೊರಹರಿದು ಹೋಗಿದ್ದು, ಕೆರೆ ಕೆಳ ಭಾಗದ ರೈತರ ಜಮೀನುಗಳಿಗೆ ನುಗ್ಗಿ ಗೋದಿ , ಕಡಲೆ, ಕಟಾವಿಗೆ ಬಂದ ತೊಗರಿ ಮತ್ತು ಜೋಳದ ಬೆಳೆಗಳು ನಾಶವಾಗಿವೆ.

Advertisement

ಪಟ್ಟಣದ ಕೆರೆ ಸುತ್ತಮುತ್ತಲಿನ ಭಾಗದ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿದೆ. ಅಲ್ಲದೆ ಪಟ್ಟಣದಲ್ಲಿ ಅಂತರ್ಜಲ ಮಟ್ಟ
ಹೆಚ್ಚಿಸಿದೆ. ಆದರೆ ಸಂಬಂಧಿಸಿದವರು ಕೆರೆ ರಕ್ಷಣೆ ಮಾಡುವುದನ್ನು ಬಿಟ್ಟು ಏಕಾಏಕಿ ನದಿ ನೀರು ಹರಿಸಿದ್ದಾರೆ. ಇದರಿಂದ ಪೊಳ್ಳುಗೊಂಡಿದ್ದ ಕೆರೆ ಬದು ಸೇರಿ ಕುಸಿಯತೊಡಗಿದೆ. ಅಲ್ಲದೆ ಕೆರೆ ಬದು ಕ್ರಮೇಣವಾಗಿ ಕುಸಿಯುತ್ತಿದೆ. ಇದಕ್ಕೆಲ್ಲ ಸಂಬಂಧಪಟ್ಟವರು ಮೈ ಮರೆತಿರುವುದೇ ಕಾರಣವಾಗಿದೆ. ಒಂದು ವೇಳೆ ಪಟ್ಟಣದ ಕೆರೆ ಒಡೆದು ಖಾಲಿಯಾದರೆ ರೈತರಿಗೆ ಹೊಲಗಳಿಗೆ ನೀರು ಸಿಗುವುದಿಲ್ಲ. ಸುತ್ತಮುತ್ತಲಿನ ಹೆಕ್ಟೇರ್‌ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಖಾಲಿಯಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೆರೆಯನ್ನೇ ನಂಬಿರುವ ನೂರಾರು ಕೊಳವೆಬಾವಿ, ತೆರೆದ ಬಾವಿಗಳು ಖಾಲಿಖಾಲಿಯಾಗಲಿವೆ. ಪಟ್ಟಣಕ್ಕೂ ಕೂಡ
ಇದರಿಂದ ಭಾರಿ ಹೊಡೆತ ಬೀಳಲಿದೆ. ಹೀಗಾಗಿ ತಾಲೂಕು ಆಡಳಿತ ಕೆರೆಗೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ರೈತರು ಸೇರಿ ಕೆರೆ ಉಳಿಸುವ ಮತ್ತು ಜೀರ್ಣೋದ್ಧಾರ ಮಾಡಿದಾಗ ಮಾತ್ರ ಉಳಿಯಲಿದೆ ಮತ್ತು ಭವಿಷ್ಯದಲ್ಲಿ ಕೆರೆಯಿಂದ ಇನ್ನಷ್ಟು ಅನುಕೂಲವಾಗಲಿದೆ.

ಸೂಕ್ತ ಪರಿಹಾರ ಕೊಡಿ : ಕೆರೆಗೆ ಒಮ್ಮೆಲೆ ನೀರು ಬಿಟ್ಟಿದ್ದರಿಂದ ತುಂಬಿ ಪೊಳ್ಳು ಇರುವ ಕಡೆ ನುಗ್ಗಿದ್ದರಿಂದ ಬದು ಕುಸಿದಿತ್ತು. ಈಗ ಒಮ್ಮೆಲೆ ನೀರು ಹೊರ ಬಿಟ್ಟಿದ್ದಾರೆ. ಹೀಗಾಗಿ ನಮ್ಮ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಮಗೆ ಸೂಕ್ತ ಪರಿಹಾರ ನೀಡಬೇಕು.
 ಹಮೀದ್‌ ಅಬ್ದುಲ್‌ ಜಾಗಿರದಾರ, ∙ರಹಮತ್‌ ಜಾಗಿರದಾರ, ∙ನ್ಯಾಮತ್‌ ಜಾಗಿರದಾರ, ಕೆರೆ ಕೆಳಗಿನ ರೈತರು

ಮೇಲಧಿಕಾರಿಗಳ ಜತೆ ಚರ್ಚೆ : ಕೆರೆ ಬದು ಕುಸಿದು ಒಡೆಯುವ ಭೀತಿ ಇದ್ದ ಕಾರಣ ನೀರು ಹರಿಬಿಡಲಾಗಿದೆ. ಕೆರೆ ಕೆಳಭಾಗದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿದ್ದರ ಬಗ್ಗೆ ಮೇಲಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. 
ಆರ್‌.ಎ. ಇನಾಮದಾರ, ಎಇಇ ಸಣ್ಣ ನೀರಾವರಿ ಇಲಾಖೆ ಅಫಜಲಪುರ

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next